ADVERTISEMENT

ಕನಕ ಗುರುಪೀಠದಲ್ಲಿ ಚಿಂತನ–ಮಂಥನ ಸಭೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2022, 4:01 IST
Last Updated 2 ಜುಲೈ 2022, 4:01 IST

ದಾವಣಗೆರೆ:ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಕನಕ ಗುರುಪೀಠದಲ್ಲಿ ಜುಲೈ 3ರಂದು ಬೆಳಿಗ್ಗೆ 10ಕ್ಕೆ ಕುರುಬ ಸಮಾಜದ ಎಸ್ಟಿ ಮೀಸಲಾತಿ ಹಕ್ಕೊತ್ತಾಯ ಕುರಿತು ಚಿಂತನ-ಮಂಥನ ಸಭೆ ನಡೆಯಲಿದೆ ಎಂದು ಹಾಲುಮತ ಮಹಾಸಭಾದ ರಾಜ್ಯ ಸಂಚಾಲಕ ರಾಜು ಮೌರ್ಯ ಹೇಳಿದರು.

ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಹಾಲುಮತ ಸಮಾಜದ ರಾಜ್ಯ ಘಟಕದ ಅ‌ಧ್ಯಕ್ಷ ಭದ್ರಣ್ಣ ಗುಳಗುಳಿ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳ ಪ್ರತಿನಿಧಿಗಳು, ಸಮುದಾಯದವರು ಸಭೆಯಲ್ಲಿ ಭಾಗವಹಿಸುವರು. ಸಮಾಜದ ಕುಲಶಾಸ್ತ್ರೀಯ ಅಧ್ಯಯನ ಇನ್ನು ಒಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ, ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಒತ್ತಾಯಿಸಲು ಹಾಗೂ ಸಮಾಜದ ಮುಂದಿನ ಹೋರಾಟದ ಕುರಿತು ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುರುಪೀಠದಲ್ಲಿ ನಿರ್ಮಿಸಲಾದ ಯು.ಪಿ.ಎಸ್.ಸಿ., ಕೆ.ಪಿ.ಎಸ್.ಸಿ. ತರಬೇತಿ ಕೇಂದ್ರದ ಪ್ರಾರಂಭೋತ್ಸವವೂ ನಡೆಯಲಿದೆ. ಬೆಂಗಳೂರಿನ ಇನ್‌ಸೈಟ್ ಐಎಎಸ್ ಸಂಸ್ಥೆಯ ಸಹಯೋಗದೊಂದಿಗೆ ಕೇಂದ್ರ ಕಾರ್ಯನಿರ್ವಹಿಸಲಿದೆ ಎಂದರು.

ADVERTISEMENT

ಕುರುಬ ಮತ್ತು ಸಮಾನಾರ್ಥ ಜಾತಿಗಳು ರಾಜ್ಯದ ಎಸ್ಟಿ ಪಟ್ಟಿಯಲ್ಲಿದ್ದರೂ ಎಲ್ಲಾ ಕುರುಬರಿಗೂ ಮೀಸಲಾತಿ ವಿಸ್ತಾರವಾಗಿಲ್ಲ. ಅನ್ಯಾಯ ಸರಿಪಡಿಸುವಂತೆ ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಮೀಸಲಾತಿಗಾಗಿ ಕಾಗಿನೆಲೆಯಿಂದ ಕುಲಶಾಸ್ತ್ರೀಯ ಅಧ್ಯಯನಕ್ಕೆ ಚಾಲನೆ ದೊರೆತಿತ್ತು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಸಿ. ವೀರಣ್ಣ, ಉಪಾಧ್ಯಕ್ಷ ಜಿ. ಷಣ್ಮುಖಪ್ಪ, ಮುಖಂಡರಾದ ಚಂದ್ರ ದೀಟೂರು, ಘನರಾಜ್, ಆರ್.ಬಿ.ಪರಮೇಶ್, ಹನುಮಂತಪ್ಪ ಸಲ್ಲಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.