ADVERTISEMENT

ಆಟೊಗಳಿಗೆ ಡಿಸ್ಪ್ಲೆನಂಬರ್‌ ಹಾಕಿಸಲು ಚಿಂತನೆ

ಆಟೊ ಯೂನಿಯನ್‌ ಪದಾಧಿಕಾರಿಗಳ ಜತೆಗೆ ಸಭೆ ನಡೆಸಿದ ಎಎಸ್‌ಪಿ ರಾಜೀವ್‌

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2019, 14:19 IST
Last Updated 18 ಸೆಪ್ಟೆಂಬರ್ 2019, 14:19 IST
ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಆಟೋ ರಿಕ್ಷಾ ಚಾಲಕರೊಂದಿಗೆ ಪೊಲೀಸರು ಸಭೆ ನಡೆಸಿದರು
ದಾವಣಗೆರೆಯ ಬಡಾವಣೆ ಪೊಲೀಸ್ ಠಾಣೆಯ ಆವರಣದಲ್ಲಿ ಬುಧವಾರ ಆಟೋ ರಿಕ್ಷಾ ಚಾಲಕರೊಂದಿಗೆ ಪೊಲೀಸರು ಸಭೆ ನಡೆಸಿದರು   

ದಾವಣಗೆರೆ: ಪಾಲಿಕೆ ವ್ಯಾಪ್ತಿಯೊಳಗಿನ ಆಟೊ ರಿಕ್ಷಾಗಳಿಗೆ ಡಿಸ್ಪ್ಲೆ ನಂಬರ್‌ ನೀಡಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಪ್ರಯಾಣಿಕರಿಗೆ ಚಾಲಕರ ವಿವರ ಸಿಗಲಿದೆ. ಜತೆಗೆ ನಗರಕ್ಕೆ ಹೊರಗಿನಿಂದ ಆಟೊ ಬಂದರೂ ಗೊತ್ತಾಗುತ್ತದೆ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎಂ. ರಾಜೀವ್‌ ಹೇಳಿದರು.

ಸಂಚಾರ ತಿದ್ದುಪಡಿ ಕಾಯ್ದೆ ಬಗ್ಗೆ ಆಟೊ ಚಾಲಕರಿಗೆ ಜಾಗೃತಿ ಮೂಡಿಸಲು ಬಡಾವಣೆ ಪೊಲೀಸ್‌ ಠಾಣೆ ಆವರಣದಲ್ಲಿ ಬುಧವಾರ ನಡೆದ ಆಟೊ ಅಸೋಸಿಯೇಶನ್‌ ಪದಾಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಯಾಣಿಕರಿಗೆ ಚಾಲಕನ ಪೂರ್ಣ ವಿವರ ಕಾಣುವಂತೆ ಪ್ರದರ್ಶಿಸಬೇಕು. ಡಿಸ್ಪ್ಲೆ ಸಂಖ್ಯೆಯನ್ನು ಆಟೊ ಎದುರು ಮತ್ತು ಹಿಂಭಾಗದಲ್ಲಿ ಅಂಟಿಸಬೇಕು. ನಗರದ ಪ್ರತಿ ಆಟೊಗಳಿಂದ ಎಲ್ಲ ದಾಖಲಾತಿಗಳನ್ನು ಪಡೆದು ಈ ಸಂಖ್ಯೆ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಚಾಲನಾ ಪರವಾನಗಿ ಇಲ್ಲವರಿಗೆ ಮತ್ತು ನವೀಕರಣ ಮಾಡಿಕೊಳ್ಳದವರಿಗಾಗಿ ವಾರದೊಳಗೆ ಡಿಎಲ್‌ ಮೇಳ ಹಮ್ಮಿಕೊಳ್ಳಲಾಗುವುದು. ಎಲ್ಲರೂ ಡಿಎಲ್‌ ಮಾಡಿಸಿಟ್ಟುಕೊಳ್ಳಬೇಕು. ಗಾಡಿಯ ಫಿಟ್‌ನೆಸ್‌ ಸರ್ಟಿಫಿಕೆಟ್‌, ವಿಮೆ ಸಹಿತ ಎಲ್ಲ ದಾಖಲೆಗಳನ್ನು ಹೊಂದಿರಬೇಕು. ನಿಗದಿತ ಸಂಖ್ಯೆಗಿಂತ ಹೆಚ್ಚು ಪ್ರಯಾಣಿಕರನ್ನು ಒಯ್ಯಬಾರದು. ಕುಡಿದು ಚಾಲನೆ ಮಾಡಬಾರದು ಎಂದು ಸಲಹೆ ನೀಡಿದರು.

ಡಿವೈಎಸ್‌ಪಿ ಮಂಜುನಾಥ ಗಂಗಲ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ ತಿಮ್ಮಣ್ಣ, ದಕ್ಷಿಣ ಸಂಚಾರ ಠಾಣೆ ಪಿಎಸ್‌ಐ ಮಂಜುನಾಥ ಲಿಂಗಾರೆಡ್ಡಿ, ಉತ್ತರ ಸಂಚಾರ ಠಾಣೆಯ ಪಿಎಸ್‌ಐ ಅನ್ನಪೂರ್ಣಮ್ಮ ಮತ್ತು ಸಿಬ್ಬಂದಿ, ಜಿಲ್ಲಾ ಆಟೊ ಚಾಲಕರ ಯೂನಿಯನ್‌ ಅಧ್ಯಕ್ಷ ಅಣ್ಣಪ್ಪಸ್ವಾಮಿ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಮೂರ್ತಿ, ಮಹಮ್ಮದ್‌ ಗೌಸ್‌, ಕೃಷ್ಣಾಚಾರ್‌, ಮಂಜುನಾಥ, ಸೋಮಣ್ಣ, 250ಕ್ಕೂ ಅಧಿಕ ಆಟೊ ಚಾಲಕರು ಸಭೆಯಲ್ಲಿ ಭಾಗವಹಿಸಿದ್ದರು.

ದುಬಾರಿ ದಂಡಕ್ಕೆ ವಿರೋಧ

ಹಿಂದಿನ ದಂಡವನ್ನು ದುಪ್ಪಟ್ಟು ಮಾಡಲಿ. ಅದರ ಬದಲು 10 ಪಟ್ಟು, 15 ಪಟ್ಟು ದಂಡ ವಿಧಿಸುವುದು ಸರಿಯಲ್ಲ. ಬಡತನದಲ್ಲಿ ದುಡಿಯುವವನಿಗೆ ₹ 10,000 ದಂಡ ವಿಧಿಸಿದರೆ ಅದನ್ನು ಕಟ್ಟುವುದಾದರೂ ಹೇಗೆ? ಈಗ ದುಡಿಮೆಯೂ ಕಡಿಮೆಯಾಗಿದೆ ಎಂದು ಆಟೊ ಚಾಲಕರ ಸಂಘದ ಪದಾಧಿಕಾರಿಗಳು ತಿಳಿಸಿದರು.

ದಂಡದ ಬಗ್ಗೆ ಮೊದಲು ಅರಿವು ಮೂಡಿಸಬೇಕು. ಎಲ್ಲ ದಾಖಲೆಗಳನ್ನು ಸರಿ ಮಾಡಿಸಿ ಇಟ್ಟುಕೊಳ್ಳಲು ಅವಕಾಶ ನೀಡಬೇಕು ಎಂದು ಕೋರಿದರು.

‘ಕಾನೂನು ನಾವು ಮಾಡುವುದಲ್ಲ. ಜಾರಿಯಾದ ಕಾನೂನನ್ನು ಅನುಷ್ಠಾನಕ್ಕೆ ತರುವುದು ನಮ್ಮ ಕೆಲಸ. ನಿಯಮ ಬದಲಾವಣೆ ಮಾಡಲು ನೀವು ಸರ್ಕಾರದ ಮಟ್ಟದಲ್ಲಿ ಮಾತನಾಡಬೇಕು’ ಎಂದು ಎಎಸ್ಪಿ ತಿಳಿಸಿದರು.

ದುಬಾರಿ ದಂಡವನ್ನು ಕಡಿಮೆ ಮಾಡಲು ಒತ್ತಾಯಿಸಿ ಸೆ.25ಕ್ಕೆ ರಾಜ್ಯದಾದ್ಯಂತ ಆಟೊ ಚಾಲಕರು ಒಂದು ಗಂಟೆ ರಸ್ತೆ ತಡೆ ಮಾಡಿ ಪ್ರತಿಭಟಿಸಲಿದ್ದಾರೆ ಎಂದು ಯೂನಿಯನ್‌ ಮುಖಂಡರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.