ADVERTISEMENT

ದಾವಣಗೆರೆ: ಕ್ಷೇತ್ರ ಕಳೆದುಕೊಂಡ ಮೂವರು ಮಾಜಿ ಮೇಯರ್‌

ಮಹಾನಗರ ಪಾಲಿಕೆ ಚುನಾವಣೆ: ಮೀಸಲಾತಿ ಬದಲಾದ ತಂದ ಫಜೀತಿ

ವಿನಾಯಕ ಭಟ್ಟ‌
Published 24 ಅಕ್ಟೋಬರ್ 2019, 19:30 IST
Last Updated 24 ಅಕ್ಟೋಬರ್ 2019, 19:30 IST
ಅಶ್ವಿನಿ ಪ್ರಶಾಂತ್‌
ಅಶ್ವಿನಿ ಪ್ರಶಾಂತ್‌   

ದಾವಣಗೆರೆ: ವಾರ್ಡ್‌ಗಳನ್ನು ಮರು ಹಂಚಿಕೆ ಮಾಡಿ ಹೊರಡಿಸಿದ ಮೀಸಲಾತಿಯ ಪರಿಣಾಮ ಕಳೆದ ಅವಧಿಯಲ್ಲಿ ಅಧಿಕಾರ ಅನುಭವಿಸಿದ್ದ ಕಾಂಗ್ರೆಸ್‌ನ ಮೂವರು ಮೇಯರ್‌ಗಳು ತಮ್ಮ ವಾರ್ಡ್‌ನಲ್ಲಿ ಮಹಾನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನೇ ಕಳೆದುಕೊಂಡಿದ್ದಾರೆ.

ಇನ್ನೊಂದೆಡೆ ಕೆಲ ಹಿರಿಯ ಸದಸ್ಯರು ಅವಕಾಶ ಕಳೆದುಕೊಂಡರೆ ಕೆಲವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಒದಗಿ ಬಂದಿದೆ. ಹೀಗಾಗಿ ಕಾಂಗ್ರೆಸ್‌ ಪಕ್ಷದಲ್ಲಿ ಟಿಕೆಟ್‌ ಪಡೆಯಲು ತೀವ್ರ ಪೈಪೋಟಿ ಏರ್ಪಟ್ಟಿದೆ.

ಪಾಲಿಕೆಯಾಗಿ ಮೇಲ್ದರ್ಜೆಗೆ ಏರಿದ ಬಳಿಕ ಮೂರನೇ ಅವಧಿಗೆ ನಡೆಯಲಿರುವ ಚುನಾವಣೆಯ ಕಾವು ದಿನೇ ದಿನೇ ಏರತೊಡಗಿದೆ. 41 ವಾರ್ಡ್‌ಗಳನ್ನು ಮರು ವಿಂಗಡಣೆ ಮಾಡಿ 45ಕ್ಕೆ ಹೆಚ್ಚಿಸಿ ಪ್ರಕಟಿಸಿರುವ ಮೀಸಲಾತಿಯು ಹೊಸಬರಿಗೆ ಅವಕಾಶ ಕಲ್ಪಿಸುಂತೆ ಮಾಡಿದೆ.

ADVERTISEMENT

‘ಕೈ’ತಪ್ಪಿದ ಅಧಿಕಾರ: ಕಳೆದ ಚುನಾವಣೆಯಲ್ಲಿ 36 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದುಕೊಂಡು ಪಾಲಿಕೆಯ ಚುಕ್ಕಾಣಿ ಹಿಡಿದಿತ್ತು. ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿದ್ದ ಭಾರತ್‌ ಕಾಲೊನಿಯಿಂದ (ವಾರ್ಡ್‌ 15) ಗೆದ್ದು ಬಂದಿದ್ದ ರೇಣುಕಾಬಾಯಿ ವೆಂಕಟೇಶ್‌ ಅವರಿಗೆ ಮೊದಲ ಮೇಯರ್‌ ಆಗುವ ಭಾಗ್ಯವೂ ಒಲಿಯಿತು. ಅವರು ಒಂದು ವರ್ಷ ಕಾಲ ಅಧಿಕಾರ ಅನುಭವಿಸಿದ್ದರು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಪರಿಶಿಷ್ಟ ಪಂಗಡದ ಮಹಿಳೆಗೆ ಭಾರತ್‌ ಕಾಲೊನಿ (ವಾರ್ಡ್‌ 20) ಮೀಸಲಿಟ್ಟಿರುವುದರಿಂದ ರೇಣುಕಾಬಾಯಿ ತಮ್ಮ ಕ್ಷೇತ್ರವನ್ನು ಕಳೆದುಕೊಳ್ಳುವಂತಾಗಿದೆ. ಅಕ್ಕ–ಪಕ್ಕದಲ್ಲೂ ಸ್ಪರ್ಧಿಸಲು ಅವಕಾಶ ಇಲ್ಲದಿರುವುದು ಅವರನ್ನು ನಿರಾಸೆಗೊಳಿಸಿದೆ.

ಕಳೆದ ಚುನಾವಣೆಯಲ್ಲಿ ಸಾಮಾನ್ಯ ಮೀಸಲಾತಿ ನಿಗದಿಯಾಗಿದ್ದ ಕುರುಬರಕೇರಿಯಿಂದ (ವಾರ್ಡ್‌ 8) ಗೆದ್ದಿದ್ದ ಎಚ್‌.ಬಿ. ಗೋಣೆಪ್ಪ ಅವರು ಎರಡನೇ ಅವಧಿಗೆ ಮೇಯರ್‌ ಆಗಿದ್ದರು. ಮರು ವಿಂಗಡಣೆ ಬಳಿಕ ಕುರುಬರಕೇರಿಯು 6ನೇ ವಾರ್ಡ್‌ ಆಗಿದೆ. ಇದು ಪರಿಶಿಷ್ಟ ಜಾತಿಗೆ ಮೀಸಲಾಗಿರುವುದರಿಂದ ಗೋಣೆಪ್ಪ ಅವರು ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದಾರೆ.

‘ನಮ್ಮ ವಾರ್ಡ್‌ನಲ್ಲಿ ಮೀಸಲಾತಿ ಬದಲಾವಣೆ ಆಗಿದ್ದರಿಂದ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ. ಅಕ್ಕ–ಪಕ್ಕದ ವಾರ್ಡ್‌ಗೆ ಹೋದರೆ ಪಕ್ಷದ ಸ್ಥಳೀಯ ಮುಖಂಡರು ಬೇಸರ ಮಾಡಿಕೊಳ್ಳುತ್ತಾರೆ. ಅಲ್ಲಿನ ಜನ ಮತ ಹಾಕುತ್ತಾರೆ ಎಂದೂ ಹೇಳಲು ಸಾಧ್ಯವಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಪಕ್ಷದಲ್ಲಿ ಸ್ಥಾನ–ಮಾನ ನೀಡುವಂತೆ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಬಳಿ ಮನವಿ ಮಾಡಿಕೊಳ್ಳುತ್ತೇನೆ’ ಎಂದು ಗೋಣೆಪ್ಪ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಇದೇ ರೀತಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಎಂ.ಸಿ.ಸಿ. ‘ಎ’ ಬ್ಲಾಕ್‌ನಿಂದ (ವಾರ್ಡ್‌ 28) ಗೆದ್ದಿದ್ದ ಅಶ್ವಿನಿ ಪ್ರಶಾಂತ್‌ ಅವರು ಆರು ತಿಂಗಳ ಅವಧಿಗೆ ಮೇಯರ್‌ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಎಂ.ಸಿ.ಸಿ. ‘ಎ’ ಬ್ಲಾಕ್‌ 24 ವಾರ್ಡ್‌ ಆಗಿದ್ದು, ಹಿಂದುಳಿದ ‘ಎ’ ವರ್ಗಕ್ಕೆ ಮೀಸಲಾಗಿದೆ. ಹೀಗಾಗಿ ತಮ್ಮ ವಾರ್ಡ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಅಶ್ವಿನಿ ಕಳೆದುಕೊಂಡಿದ್ದಾರೆ. ವೀರಶೈವ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷೆಯೂ ಆಗಿರುವ ಅಶ್ವಿನಿ ಅವರು ಸಾಮಾಜಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಕೊಳ್ಳಲು ಬಯಸಿದ್ದಾರೆ.

ಸ್ಪರ್ಧಿಸದಿರಲು ಶಿವನಳ್ಳಿ ರಮೇಶ್‌ ಚಿಂತನೆ
ಸಾಮಾನ್ಯ ಮೀಸಲಾತಿ ನಿಗದಿಯಾಗಿದ್ದ ನಿಜಲಿಂಗಪ್ಪ ಬಡಾವಣೆಯಿಂದ (ವಾರ್ಡ್‌ 29) ಆಯ್ಕೆಯಾಗಿದ್ದ ಪಾಲಿಕೆಯ ಹಿರಿಯ ಮಾಜಿ ಸದಸ್ಯ ಶಿವನಳ್ಳಿ ರಮೇಶ್‌ ಅವರಿಗೂ ಮೀಸಲಾತಿ ಬದಲಾವಣೆಯ ಬಿಸಿ ತಟ್ಟಿದೆ. ಮರುವಿಂಗಡಣೆ ಬಳಿಕ ನಿಜಲಿಂಗಪ್ಪ ಬಡಾವಣೆ ಹಾಗೂ ಎಸ್‌.ಎಸ್‌. ಬಡಾವಣೆ ‘ಎ’ ಬ್ಲಾಕ್‌ ಪ್ರದೇಶ 23ನೇ ವಾರ್ಡ್‌ ಆಗಿದ್ದು, ಹಿಂದುಳಿದ ‘ಎ’ ಮಹಿಳೆಗೆ ಮೀಸಲಾಗಿದೆ.

‘ನನ್ನ ವಾರ್ಡ್‌ನಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲದಿದ್ದರೂ ಈ ಹಿಂದೆ ಸ್ಪರ್ಧಿಸಿ ಗೆದ್ದಿದ್ದ ಯಲ್ಲಮ್ಮ ನಗರ (ವಾರ್ಡ್‌ 22) ಸಾಮಾನ್ಯ ಕ್ಷೇತ್ರಕ್ಕೆ ಮೀಸಲಾಗಿದೆ. ಅಲ್ಲಿಗೆ ಹೋಗಿ ನಾನು ಸ್ಪರ್ಧಿಸುವುದರಿಂದ ಬೇರೆಯವರಿಗೆ ಅವಕಾಶ ತಪ್ಪಿಸಿದಂತಾಗುತ್ತದೆ. ಈಗಾಗಲೇ ನಗರಸಭೆ ಉಪಾಧ್ಯಕ್ಷ ಹಾಗೂ ಎರಡು ಬಾರಿ ಪಾಲಿಕೆ ಸದಸ್ಯನಾಗಿದ್ದೇನೆ. ಯುವಪೀಳಿಗೆಗೆ ಅವಕಾಶ ಸಿಗಲಿ ಎಂಬ ಕಾರಣಕ್ಕೆ ಸ್ಪರ್ಧಿಸದಿರಲು ಚಿಂತನೆ ನಡೆಸಿದ್ದೇನೆ. ಸೂಕ್ತ ಸ್ಥಾನಮಾನ ಕೊಟ್ಟರೆ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ’ ಎಂದು ಶಿವನಳ್ಳಿ ರಮೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ನಗರಸಭೆಗೆ ಒಮ್ಮೆ ಹಾಗೂ ಪಾಲಿಕೆಗೆ ಎರಡು ಬಾರಿ ಆಯ್ಕೆಯಾಗಿರುವ ಹಿರಿಯ ಮಾಜಿ ಸದಸ್ಯ ದಿನೇಶ್‌ ಶೆಟ್ಟಿ ಅವರ ಪಿ.ಜೆ. ಬಡಾವಣೆ – 17ನೇ ವಾರ್ಡ್‌ (ಕಳೆದ ಬಾರಿ 21ನೇ ವಾರ್ಡ್‌) ಈ ಬಾರಿಯೂ ಸಾಮಾನ್ಯ ಮೀಸಲಾತಿಗೆ ನಿಗದಿಯಾಗಿದೆ. ಹೀಗಾಗಿ ಕಾಂಗ್ರೆಸ್‌ನ ಮಾಜಿ ಹಿರಿಯ ಸದಸ್ಯರ ಪೈಕಿ ದಿನೇಶ್‌ ಶೆಟ್ಟಿ ಅವರಿಗೆ ಮಾತ್ರ ಮತ್ತೊಮ್ಮೆ ತಮ್ಮ ವಾರ್ಡ್‌ನಲ್ಲೇ ಸ್ಪರ್ಧಿಸಲು ಅವಕಾಶ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.