ADVERTISEMENT

ಶಿಕ್ಷಣ ಸಂಸ್ಥೆಗಳು ತಂಬಾಕು ಮುಕ್ತ ಆಗದಿದ್ದರೆ ಕ್ರಮ: ಮಹಾವೀರ ಕರೆಣ್ಣವರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 3:01 IST
Last Updated 9 ಜನವರಿ 2026, 3:01 IST
ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿಯ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ ಮಾತನಾಡಿದರು
ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿಯ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ ಮಾತನಾಡಿದರು   

ದಾವಣಗೆರೆ: ಶಾಲೆ ಮತ್ತು ಕಾಲೇಜು ಆವರಣಗಳು ಕೂಡಲೇ ತಂಬಾಕು ಮುಕ್ತವಾಗಬೇಕು. ಮುಂದಿನ ಎರಡು ವಾರಗಳಲ್ಲಿ ತಂಬಾಕು ಮುಕ್ತ ಶಿಕ್ಷಣ ಸಂಸ್ಥೆಗಳಾಗಿ ಅಧಿಕೃತ ತಂತ್ರಾಂಶದಲ್ಲಿ ಘೋಷಣೆ ಮಾಡಿಕೊಳ್ಳಬೇಕು. ಇಲ್ಲವಾದರೆ ನೋಟಿಸ್‌ ನೀಡಲಾಗುವುದು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಕರೆಣ್ಣವರ ಎಚ್ಚರಿಕೆ ನೀಡಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಮನ್ವಯ ಸಮಿತಿಯ ಮೂರನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 1,445 ಶಾಲೆಗಳಿದ್ದು, ಈ ಪೈಕಿ 775 ಶಿಕ್ಷಣ ಸಂಸ್ಥೆಗಳು ಮಾತ್ರ ‘ತಂಬಾಕು ಮುಕ್ತ ಶಿಕ್ಷಣ ಸಂಸ್ಥೆ’ (ಟೋಫೆ) ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿಕೊಂಡಿವೆ. ಉಳಿದ ಶಿಕ್ಷಣ ಸಂಸ್ಥೆಗಳು ಇನ್ನೂ ಗಮನಹರಿಸಿದಂತೆ ಕಾಣುತ್ತಿಲ್ಲ. ಶಾಲಾ, ಕಾಲೇಜುಗಳು ‘ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ’ ಎಂಬುದಾಗಿ ಘೋಷಣೆ ಮಾಡಿಕೊಳ್ಳುವುದು ಕಡ್ಡಾಯ’ ಎಂದು ಹೇಳಿದರು.

ADVERTISEMENT

‘ದಾವಣಗೆರೆ ದಕ್ಷಿಣ, ಉತ್ತರ, ಚನ್ನಗಿರಿ ಶೈಕ್ಷಣಿಕ ವಲಯದ ಶಿಕ್ಷಣ ಸಂಸ್ಥೆಗಳು ತಂಬಾಕು ಮುಕ್ತವಾಗಲು ಉತ್ಸುಕತೆ ತೋರಿಲ್ಲ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಗಮನ ಹರಿಸಬೇಕು’ ಎಂದು ಸೂಚಿಸಿದರು.

‘ತಂಬಾಕು ಮುಕ್ತ ಗ್ರಾಮಗಳನ್ನು ಗುರುತಿಸುವಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆ ಪ್ರಯತ್ನಿಸುತ್ತಿದೆ. ಮಹಿಳೆಯರು ಅಧ್ಯಕ್ಷರಾಗಿರುವ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ ಕೆಲಸ ಪ್ರಾರಂಭಿಸಿದೆ. ಕೂಡಲೇ ಗ್ರಾಮ ಮಟ್ಟದ ತಂಬಾಕು ನಿಯಂತ್ರಣ ಸಮಿತಿ ರಚಿಸಬೇಕು. ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರ ಜೊತೆಗೂಡಿ ಜಾಗೃತಿ ಅಭಿಯಾನ ಕೈಗೊಳ್ಳಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಸಲಹೆ ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಷಣ್ಮುಖಪ್ಪ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ನಾಗೇಂದ್ರಪ್ಪ ಎಂ.ಬಿ, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಅನುಷ್ಠಾನಾಧಿಕಾರಿ ಡಾ.ರುದ್ರಸ್ವಾಮಿ ಎಂ.ಕೆ ಹಾಜರಿದ್ದರು.

ತಂಬಾಕು ಉತ್ಪನ್ನಗಳಿಗೆ ಪರವಾನಗಿ ನೀಡುವುದು ಕಡಿಮೆಯಾಗಿದೆ. ತಂಬಾಕು ಮುಕ್ತ ಎಂಬುದಾಗಿ ಘೋಷಣೆ ಮಾಡಿಕೊಳ್ಳಲು 7 ಗ್ರಾಮಗಳು ಸಜ್ಜಾಗಿವೆ
ಶೀಲವಂತ ಶಿವಕುಮಾರ್‌ ಹೆಚ್ಚುವರಿ ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.