ADVERTISEMENT

ದಾವಣಗೆರೆ: 3ನೇ ಅಲೆ ಎದುರಿಸಲು ತರಬೇತಿ

ಮಕ್ಕಳ ಆರೈಕೆ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 5:38 IST
Last Updated 23 ಜುಲೈ 2021, 5:38 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಕೋವಿಡ್ 3 ನೇ ಅಲೆ ಕಂಡುಬರುವ ಸಾಧ್ಯತೆ ಇರುವುದರಿಂದ ಅದನ್ನು ಎದುರಿಸಲು ಜಿಲ್ಲಾಡಳಿತ ಹಾಗೂ ವೈದ್ಯಕೀಯ ಇಲಾಖೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಜಿಲ್ಲೆಯಲ್ಲಿನ ಸರ್ಕಾರಿ, ಖಾಸಗಿ ತಜ್ಞ ವೈದ್ಯರಿಗೆ ಮತ್ತು ವೈದ್ಯಾಧಿಕಾರಿಗಳಿಗೆ ಕೋವಿಡ್-19 3ನೇ ಅಲೆಯ ಕುರಿತು ಮಕ್ಕಳ ಆರೈಕೆ, ಮುನ್ನೆಚರಿಕೆ ಕ್ರಮಗಳು ಹಾಗೂ ನಿರ್ವಹಣೆ ಕುರಿತು ಏರ್ಪಡಿಸಿದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಚಿಕಿತ್ಸೆ ನೀಡಲು ಅಗತ್ಯವಿರುವ ವೈದ್ಯರು, ಸಹಾಯಕ ಸಿಬ್ಬಂದಿಗೆ ಮಕ್ಕಳಿಂದ ಸ್ವಾಬ್ ಸಂಗ್ರಹ ಸೇರಿ ಅಗತ್ಯ ತರಬೇತಿ ನೀಡಬೇಕು. 3ನೇ ಅಲೆ ವ್ಯಾಪಿಸುವುದರ ಒಳಗಾಗಿ ಮಕ್ಕಳಿಗೆ ವ್ಯಾಕ್ಸಿನೇಷನ್ ದೊರೆತರೆ ಕೋವಿಡ್ ಹರಡುವುದನ್ನು ತಡೆಗಟ್ಟಲು ಸುಲಭವಾಗಲಿದೆ ಎಂದರು.

ADVERTISEMENT

ಅನ್‌ಲಾಕ್ ಆಗಿದೆ ಎಂದು ಮೈಮರೆತು ರಸ್ತೆಗಿಳಿಯುವುದು, ಗುಂಪು ಗುಂಪಾಗಿ ಸೇರುವುದು, ಮಾಸ್ಕ್ ಧರಿಸದೇ ಓಡಾಡುವುದು ಮಾಡಿದರೆ ಕೊರೊನಾ ವೇಗವಾಗಿ ಹರಡಲಿದೆ ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ‘ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟಲು ಸಫಲರಾಗುತ್ತಿದ್ದಾರೆ. ಅವುಗಳನ್ನು ಮಾದರಿಯಾಗಿ ಇಟ್ಟುಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ ನಾಯಕ, ಡಿಎಚ್‌ಒ ಡಾ. ನಾಗರಾಜ್, ಎಸ್‌ಎಸ್‌ಐಎಂ ನಿರ್ದೇಶಕ ಡಾ. ಕಾಳಪ್ಪನವರ್‌, ಬಾಪೂಜಿ ಮೆಡಿಕಲ್ ಕಾಲೇಜ್ ಅಧ್ಯಕ್ಷ ಡಾ.ಮುಗನಗೌಡ, ಮಕ್ಕಳ ಮತ್ತು ಹೆರಿಗೆ ಆಸ್ಪತ್ರೆ ಎ.ಎಂ.ಒ ಡಾ.ನೀಲಕಂಠ ನಾಯಕ್, ಆರ್.ಸಿ.ಎಚ್ ಅಧಿಕಾರಿ ಡಾ.ಮೀನಾಕ್ಷಿ, ಡಿಎಸ್‌ಒ ಡಾ.ರಾಘವನ್, ಡಾ.ರೇಣುಕಾರಾಧ್ಯ, ಡಾ.ಮುರುಳೀಧರ, ಡಾ.ಸುರೇಶ್ ಬಾರ್ಕಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.