ದಾವಣಗೆರೆ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠದತ್ತ ಶೂ ಎಸೆಯಲು ಯತ್ನಿಸಿದ ವಕೀಲನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಕಾರರು ವಕೀಲನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮೆರವಣಿಗೆ ಹೊರಟು ಉಪವಿಭಾಗಾಧಿಕಾರಿ ಕಚೇರಿ ತಲುಪಿ ಮನವಿ ಸಲ್ಲಿಸಿದರು.
‘ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ನಡೆಸಿದ ಯತ್ನ ಉಗ್ರರ ಕೃತ್ಯಕ್ಕೆ ಸಮಾನ. ಅಂಬೇಡ್ಕರ್ ಆಶಯದ ಪ್ರತಿಪಾದಕರಾದ ನ್ಯಾಯಮೂರ್ತಿಗಳನ್ನು ಅವಮಾನಿಸಲು ಯತ್ನಿಸಿದ್ದು ಸಂವಿಧಾನ ವಿರೋಧಿ ಕೃತ್ಯ. ಈ ವಕೀಲನ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ’ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ್ ಆಗ್ರಹಿಸಿದರು.
‘ದಲಿತ ಸಮುದಾಯಕ್ಕೆ ಸೇರಿದವರು ಶಿಕ್ಷಣ ಪಡೆದು ಉನ್ನತ ಸ್ಥಾನ ಅಲಂಕರಿಸಿರುವುದನ್ನು ಸಹಿಸಿಕೊಳ್ಳಲು ಕೆಲ ಶಕ್ತಿಗಳಿಗೆ ಸಾಧ್ಯವಾಗುತ್ತಿಲ್ಲ. ಇದರಿಂದ ಇಂತಹ ಘಟನೆ ಸಂಭವಿಸಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಬಡವರು ಮತ್ತು ಶೋಷಿತ ಸಮುದಾಯಕ್ಕೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ನ್ಯಾಯದಾನ ನೀಡುತ್ತಿರುವುದನ್ನು ಸಹಿಸಿಕೊಳ್ಳಲು ಮನುವಾದಿಗಳಿಗೆ ಸಾಧ್ಯವಾಗುತ್ತಿಲ್ಲ. ಇದು ಪ್ರಸ್ತುತ ಭಾರತದ ವಿಪರ್ಯಾಸ’ ಎಂದು ಮುಖಂಡ ಬುಳ್ಳಸಾಗರ ಸಿದ್ರಾಮಣ್ಣ ಕಿಡಿಕಾರಿದರು.
ನೆರಳು ಬೀಡಿ ಕಾರ್ಮಿಕರ ಸಂಘದ ಜಬೀನಾ ಖಾನಂ, ಮುಖಂಡರಾದ ಟಿ. ಅಸ್ಗರ್, ಎಂ.ಕೆ. ಲಿಯಾಕತ್ ಅಲಿ, ಕರಿಬಸಪ್ಪ, ಚಿತ್ರಲಿಂಗಪ್ಪ, ಬಿ. ನಾಗರಾಜ್, ಪರಮೇಶ್ವರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.