ADVERTISEMENT

ಮನೆ ಕಂದಾಯ ಕಟ್ಟಲು ಹರಸಾಹಸ

ತೆರಿಗೆ ಕಟ್ಟಲು ಒಂದೇ ಶಾಖೆ l ಕ್ಯೂ ನಿಲ್ಲಬೇಕಾದ ಪರಿಸ್ಥಿತಿ

ಡಿ.ಕೆ.ಬಸವರಾಜು
Published 15 ಡಿಸೆಂಬರ್ 2020, 4:05 IST
Last Updated 15 ಡಿಸೆಂಬರ್ 2020, 4:05 IST
ದಾವಣಗೆರೆ ಮಹಾನಗರಪಾಲಿಕೆಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದು.
ದಾವಣಗೆರೆ ಮಹಾನಗರಪಾಲಿಕೆಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸರತಿ ಸಾಲಿನಲ್ಲಿ ನಿಂತಿರುವುದು.   

ದಾವಣಗೆರೆ: ಮನೆ ಕಂದಾಯ ಪಾವತಿಗೆ ನಗರಪಾಲಿಕೆಯಲ್ಲಿ ಇರುವ ಒಂದು ಕೌಂಟರ್‌ನಲ್ಲಿ ನಾಗರಿಕರು ತೆರಿಗೆ ಕಟ್ಟಲು ಹರಸಾಹಸ ಮಾಡಬೇಕಾಗಿದೆ.

ಬ್ಯಾಂಕ್ ಆಫ್ ಬರೋಡ ಮಹಾನಗರ ಪಾಲಿಕೆಯ ಶಾಖೆಯಲ್ಲಿ ಮಾತ್ರ ಅವಕಾಶ ಕಲ್ಪಿಸಿರುವುದರಿಂದ ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ಇದೆ. ಕೋವಿಡ್ ಸಂದರ್ಭವಾದರೂ ಜನರು ಅಂತರ ಕಾಯ್ದುಕೊಳ್ಳದೇ ನಿಲ್ಲುವುದು ಸಾಮಾನ್ಯವಾಗಿದೆ.

ಈ ಹಿಂದೆ ಮನೆ ಕಂದಾಯ ಕಟ್ಟಲು ದಾವಣಗೆರೆ ಒನ್, ಎಚ್‌ಡಿಎಫ್‌ಸಿ ಬ್ಯಾಂಕ್, ವಿಜಯಾ ಬ್ಯಾಂಕ್ ಹಾಗೂ ಆನ್‌ಲೈನ್‌ನಲ್ಲೂ ಅವಕಾಶವಿತ್ತು. ಈಗ ಅವುಗಳಲ್ಲಿ ಅವಕಾಶ ಇಲ್ಲದೇ ಇರುವುದರಿಂದ ನೇರವಾಗಿ ಜನರು ಮಹಾನಗರಪಾಲಿಕೆಗೆ ಅಲೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ADVERTISEMENT

‘ತೆರಿಗೆ ಕಟ್ಟುವ ಮೊದಲು ಅರ್ಜಿ ತೆಗೆದುಕೊಳ್ಳಬೇಕು. ಅರ್ಜಿಯನ್ನು ಹೊರಗಡೆ ತನ್ನಿ ಹೇಳುತ್ತಾರೆ. ಅದನ್ನು ತೆಗೆದುಕೊಳ್ಳಲು ಪಾಲಿಕೆಯ ಎದುರು ಕುಳಿತಿರುವವರ ಬಳಿಯೇ ಹೋಗಬೇಕು. ಅವರಿಗೆ ₹50 ನೀಡಿ ಅರ್ಜಿಗಳನ್ನು ತುಂಬಿಸಿಕೊಳ್ಳಬೇಕು. ಅವರು ನಿರ್ದಿಷ್ಟ ಕೌಂಟರ್‌ ಬಳಿ ಹೋಗಿ ಎಂದು ಸೂಚಿಸುತ್ತಾರೆ. ಅರ್ಜಿ ತುಂಬಲು ಬಲ್ಲ ಅಕ್ಷರಸ್ಥರೂ ಅವರ ಬಳಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂಬುದು
ತೆರಿಗೆ ಕಟ್ಟಲು ಬಂದಿದ್ದವರ
ಆಕ್ಷೇಪ.

‘ವರ್ಷದಿಂದ ವರ್ಷಕ್ಕೆ ತೆರಿಗೆ ಬದಲಾಗುತ್ತಿರುತ್ತದೆ. ಆದನ್ನು ತಿಳಿಸುವ ಯಾವುದೇ ಮಾಹಿತಿ ಫಲಕ ಅಳವಡಿಸಿಲ್ಲ. ತೆರಿಗೆ ಕಟ್ಟಲು ಕೌಂಟರ್‌ನಲ್ಲಿ ನಗದನ್ನೇ ಕೊಡಬೇಕು. ಚೆಕ್‌ಗಳನ್ನು ನೀಡಲು, ಡೆಬಿಟ್ ಕಾರ್ಡ್‌, ಗೂಗಲ್ ಪೇನಲ್ಲಿ ಪಾವತಿಸಲು ಅವಕಾಶವಿಲ್ಲ. ಕೇಂದ್ರ ಸರ್ಕಾರ ನಗದುರಹಿತ ಆಡಳಿತ ನಡೆಸಿ ಎಂದು ಹೇಳುತ್ತಿದೆ. ಆದರೆ ಪಾಲಿಕೆಯಲ್ಲಿ ಈ ವ್ಯವಸ್ಥೆ ಇಲ್ಲ’ ಎಂಬುದುದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್. ಶಿಶುಪಾಲ ಅವರ ಅನುಭವ
ನುಡಿ.

‘ಘನತ್ಯಾಜ್ಯ ವಿಲೇವಾರಿಗೆ ವರ್ಷಕ್ಕೆ ₹ 360 ವಸೂಲಿ ಮಾಡುವುದಲ್ಲದೇ ಮನೆ ಮುಂದೆ ಬರುವ ಕಸದ ಗಾಡಿಯವರಿಗೆ ತಿಂಗಳಿಗೆ
₹ 50 ಕೊಡಬೇಕು. ಭಿಕ್ಷಾಟನೆ ನಿರ್ಮೂಲನೆಯಾಗಿದೆ ಎಂದು ಹೇಳುತ್ತಾ ಪ್ರತಿ ಒಂದು ಮನೆಯಿಂದ ₹ 184ಗಳನ್ನು ಭಿಕ್ಷುಕರ ಕರ, ಗ್ರಂಥಾಲಯ ಕರ ಎಂದು
₹ 369 ವಸೂಲಿ ಮಾಡಲಾಗುತ್ತಿದೆ. ಇದಕ್ಕೆಲ್ಲಾ ಅರ್ಥವಿದೆಯೇ’ ಎಂಬುದು ಅವರ ಪ್ರಶ್ನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.