ADVERTISEMENT

ದೃಶ್ಯಕ್ರಾಂತಿಯಿಂದ ಅಕ್ಷರಕ್ಕೆ ತೊಂದರೆ

ನುಡಿ ತರಂಗ ಕಾರ್ಯಕ್ರಮದಲ್ಲಿ ಕಸಾಪ ಜಿಲ್ಲಾಧ್ಯಕ್ಷ ಡಾ. ಮಂಜುನಾಥ ಕುರ್ಕಿ ಕಳವಳ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2019, 10:21 IST
Last Updated 29 ನವೆಂಬರ್ 2019, 10:21 IST
ದಾವಣಗೆರೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ನುಡಿ ತರಂಗ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್ ಕುರ್ಕಿ ಅವರನ್ನು ಪ್ರಾಂಶುಪಾಲರಾದ ಎಸ್ ಬಿ ಮುರುಗೇಶ ಸನ್ಮಾನಿಸಿದರು.
ದಾವಣಗೆರೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ನುಡಿ ತರಂಗ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಂಜುನಾಥ್ ಕುರ್ಕಿ ಅವರನ್ನು ಪ್ರಾಂಶುಪಾಲರಾದ ಎಸ್ ಬಿ ಮುರುಗೇಶ ಸನ್ಮಾನಿಸಿದರು.   

ದಾವಣಗೆರೆ: ದೃಶ್ಯಕ್ರಾಂತಿಯಿಂದಾಗಿ ಅಕ್ಷರಕ್ಕೆ ತೊಂದರೆ ಉಂಟಾಗಿದೆ. ಓದುವುದು, ಬರೆಯವುದು, ಮಾತನಾಡುವುದು ಕಡಿಮೆಯಾಗಿದೆ. ಬ್ರೌಸಿಂಗ್‌, ಚಾಟಿಂಗ್‌ ಹೆಚ್ಚಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಎಸ್‌. ಮಂಜುನಾಥ ಕುರ್ಕಿ ಕಳವಳ ವ್ಯಕ್ತಪಡಿಸಿದರು.

ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯ ಹಾಗೂ ವಿದ್ಯಾರ್ಥಿ ಸಂಘದಿಂದ ಜ.ಜ.ಮು. ಗ್ರಂಥಾಲಯ ಸಭಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಗುರುವಾರ ನಡೆದ ನುಡಿ ತರಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಭಾಷೆಯು ಚಲನಶೀಲತೆ, ಜೀವಂತಿಕೆ ಉಳಿಸಿಕೊಳ್ಳಬೇಕಿದ್ದರೆ ನಾಲಗೆಯಲ್ಲಿ ಹರಿದಾಡುತ್ತಿರಬೇಕು. ಸರ್ಕಾರದಿಂದಲೇ ಭಾಷೆ ಉಳಿಯುತ್ತದೆ ಎಂಬುದು ಸರಿಯಲ್ಲ ಎಂದು ಹೇಳಿದರು.

ADVERTISEMENT

ಪಶ್ಚಿಮದ ಪ್ರಭಾವ, ವಿಜ್ಞಾನ ಮತ್ತು ತಂತ್ರಜ್ಞಾನದ ವಿಪರೀತ ಬೆಳವಣಿಗೆ, ಜಾಗತೀಕರಣ, ಖಾಸಗೀಕರಣ, ಉದಾರೀಕರಣ ಹೀಗೆ ನಾನಾ ಕಾರಣಗಳಿಂದಾಗಿ ಭಾಷೆಗಳು ಸಾಯುತ್ತಿವೆ.

ಎಚ್‌.ಡಿ. ಕುಮಾರಸ್ವಾಮಿ 2008ರಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಮುಚ್ಚಲು ಆದೇಶಿಸಿದ್ದರು. 2018ರಲ್ಲಿ ಮತ್ತೆ ಮುಖ್ಯಮಂತ್ರಿಯಾದಾಗ ಒಂದನೇ ತರಗತಿಯಿಂದಲೇ ಇಂಗ್ಲಿಷ್‌ ಆರಂಭಿಸಲು ಆದೇಶಿಸಿದ್ದರು. ಇಂಥ ರಾಜಕಾರಣಿಗಳ ಇಂಥ ದ್ವಿಮುಖ ನೀತಿಯೂ ಭಾಷೆಗೆ ಕುತ್ತುಂಟು ಮಾಡುತ್ತಿದೆ ಎಂದರು

ಭಾರತದಲ್ಲಿ 1952 ಭಾಷೆಗಳಿದ್ದವು. ನ್ಯಾ.ಗಣೇಶ್‌ ಎನ್‌.ದೇವಿ ನೇತೃತ್ವದ ಸಮಿತಿಯು ಭಾಷೆಯ ಬಗ್ಗೆ ವರದಿ ತಯಾರಿಸಿ 2017ರಲ್ಲಿ ಸಲ್ಲಿಸಿದೆ. ಅದರ ಪ್ರಕಾರ 780 ಭಾಷೆಗಳು ಜೀವಂತವಾಗಿವೆ. 400 ಭಾಷೆಗಳು ಅಳಿವಿನಂಚಿನಲ್ಲಿವೆ. ಮುಂದಿನ 50 ವರ್ಷಗಳಲ್ಲಿ ಈ ಭಾಷೆಗಳು ನಾಶವಾಗುವ ಸಂಭವವಿದೆ. ಸಾಯುವ ಭಾಷೆಗಳ ಪಟ್ಟಿಯಲ್ಲಿ ಕನ್ನಡ ಇಲ್ಲ ಎಂಬುದು ಸದ್ಯದ ಹೆಮ್ಮೆ. ಆದರೆ ಕನ್ನಡಕ್ಕೂ ಆತಂಕಗಳಿವೆ ಎಂದು ತಿಳಿಸಿದರು.

ಬಹುತ್ವದ ನೆಲೆಗಟ್ಟಿನಲ್ಲಿ ಏಕತೆ ಹೊಂದಿರುವ ಏಕೈಕ ದೇಶ ಭಾರತ. ವಿವಿಧತೆಯೇ ಭಾರತದ ಶಕ್ತಿ. ಬಹುಭಾಷೆಗಳು ಕಾಲಗರ್ಭದಲ್ಲಿ ಹೂತು ಹೋದರೆ ಸಂಸ್ಕೃತಿ ನಾಶವಾಗುತ್ತದೆ. ವಿವಿಧತೆ ನಾಶವಾದರೆ ಏಕಪ್ರಭುತ್ವ ಬರುತ್ತದೆ. ಅದು ಸರ್ವಾಧಿಕಾರವಾಗಿರುತ್ತದೆ ಎಂದು ಮಾಹಿತಿ ನೀಡಿದರು.

ಕನ್ನಡಿಗರು ಬೇರೆ ಭಾಷೆಗಳನ್ನು ಕಲಿಯುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಬೇರೆ ಭಾಷೆಗಳು ಒಂದು ವಿಷಯವಾಗಿಯಷ್ಟೇ ಕಲಿಯಬೇಕು. ಮಾಧ್ಯಮವಾಗಿ ಕನ್ನಡವೇ ಇರಬೇಕು. ಆಸ್ಪತ್ರೆಯಲ್ಲಿ ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನ ಭಾಷೆ ಕನ್ನಡವೇ ಇರಬೇಕು. ಕನ್ನಡಿಗರ ಅತಿಯಾದ ಅತಿಥಿ ದೇವೋಭವ ಮನಸ್ಥಿತಿ ಕೂಡ ಬೇರೆ ಭಾಷೆಗಳು ಕನ್ನಡದ ಮೇಲೆ ಸವಾರಿ ಮಾಡಲು ಕಾರಣ ಎಂದು ವಿಶ್ಲೇಷಿಸಿದರು.

ಜ.ಜ.ಮು. ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಸ್‌.ಬಿ. ಮುರುಗೇಶ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕ ಡಾ. ಜಿ.ಸಿ. ಬಸವರಾಜ್‌ ಸ್ವಾಗತಿಸಿದರು. ಪ್ರಾಧ್ಯಾಪಕಿ ಡಾ. ಅನುರೂಪ ವಂದಿಸಿದರು. ಡಾ. ಶಾಂತಲಾ ಮತ್ತು ಚಿರಾಗ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.