ದಾವಣಗೆರೆ: ದಿ.ಹರಳೆಣ್ಣೆ ಕೊಟ್ಟೂರು ಬಸವಪ್ಪ ಅವರು ಈ ಹಿಂದೆ ಮಾಡಿದ್ದ ಸಮಾಜಮುಖಿ ಕೆಲಸಗಳನ್ನು ಅವರ ಕುಟುಂಬದವರೂ ಮುಂದುವರಿಸಿಕೊಂಡು ಹೋಗುತ್ತಿದ್ದು, ಜಿಲ್ಲೆಯ ಸರ್ಕಾರಿ ಶಾಲೆಗಳ ಕಾಯಕಲ್ಪಕ್ಕೆ ಕೈ ಜೋಡಿಸಿದ್ದಾರೆ.
ನಗರದ ಗಡಿಯಾರ ಕಂಬ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಂತಿ ಚಿತ್ರಮಂದಿರ ಸಮೀಪದ ಸರ್ಕಾರಿ ಬಾಲಕಿಯರ ಮಾದರಿ ಶಾಲೆ, ಕೆ.ಆರ್.ರಸ್ತೆ ಸಮೀಪದ ವಡ್ಡರಕೇರಿ ಶಾಲೆ ಹಾಗೂ ದಾವಣಗೆರೆ ತಾಲ್ಲೂಕಿನ ಅಣಜಿ, ಬೋರಗೊಂಡನಹಳ್ಳಿ, ಗಂಗನಕಟ್ಟೆ, ಮಳಲಕೆರೆ ಮತ್ತು ಹೊನ್ನಾಳಿ ತಾಲ್ಲೂಕಿನ ಬನ್ನಿಕೋಡು ಗ್ರಾಮದ ಶಾಲೆಗಳಿಗೆ ಅಂದಾಜು ₹ 8.50 ಲಕ್ಷ ವೆಚ್ಚದಲ್ಲಿ ಒಟ್ಟು 93 ಡೆಸ್ಕ್‌ಗಳು, ಎರಡು ನೀರು ಶುದ್ಧೀಕರಣ ಘಟಕ, ಸ್ಮಾರ್ಟ್ ಕ್ಲಾಸ್‌ಗೆ ಇಂಟರ‍್ಯಾಕ್ಟಿವ್ ಪ್ಯಾನಲ್, ವಿಜ್ಞಾನ ಪ್ರಯೋಗಾಲಯಕ್ಕೆ ಅಗತ್ಯ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿ ಕಾಳಜಿ ಮೆರೆದಿದ್ದಾರೆ.
ನೆರವು ನೀಡಲು ಸ್ವಯಂ ಪ್ರೇರಿತವಾಗಿ ಮುಂದೆ ಬಂದ ಕೊಟ್ಟೂರು ಬಸವಪ್ಪ ಕುಟುಂಬದವರಿಗೆ ಮಳಲಕೆರೆ ಗ್ರಾಮದ ಎಸ್.ಎಚ್.ಪಿ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಆರ್.ಯೋಗೀಶ್ವರಯ್ಯ ಅವರು ಮೂಲಸೌಕರ್ಯ ವಂಚಿತ ಸರ್ಕಾರಿ ಶಾಲೆಗಳ ಮಾಹಿತಿ ನೀಡಿದ್ದರು. ಆ ಪೈಕಿ ಎಂಟು ಶಾಲೆಗಳಿಗೆ ಹರಳೆಣ್ಣೆ ಕೊಟ್ಟೂರು ಬಸವಪ್ಪ ಎಜುಕೇಷನ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ಮೂಲಕ ಕುಟುಂಬದವರು ನೆರವು ನೀಡಿದ್ದಾರೆ.
‘ನಮ್ಮ ತಂದೆ ಕೊಟ್ಟೂರು ಬಸವಪ್ಪನವರು ಬದುಕಿದ್ದಾಗ ಮಾಡಿದ ಸೇವೆಗಳು ಹಲವು. ಮಕ್ಕಳಾಗಿ ನಾವೂ ಏನಾದರೂ ಮಾಡಬೇಕೆಂದು ವಿದೇಶದಲ್ಲಿರುವ ನಮ್ಮ ಅಣ್ಣ ಡಾ.ಎಚ್.ಕೆ. ಮಂಜುನಾಥ ಹಾಗೂ ಅತ್ತಿಗೆ ಮೀರಾ ಅವರ ಸಲಹೆಯಂತೆ 5 ವರ್ಷಗಳ ಹಿಂದೆ ಟ್ರಸ್ಟ್ ಆರಂಭಿಸಿದೆವು. ಆ ಮೂಲಕ ನೇತ್ರ ಉಚಿತ ತಪಾಸಣಾ ಶಿಬಿರ ಆಯೋಜನೆ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುತ್ತಾ ಬಂದೆವು. ಈ ಕೆಲಸವನ್ನು ಪ್ರಸ್ತುತ ಹಲವು ಸಂಘ–ಸಂಸ್ಥೆಗಳು ಮಾಡುತ್ತಿವೆ. ಮಾಡುವ ಕೆಲಸ ಭಿನ್ನವಾಗಿ ಇರಲೆಂದು ಪ್ರಸಕ್ತ ವರ್ಷದಿಂದ ಸರ್ಕಾರಿ ಶಾಲೆಗಳಿಗೆ ನೆರವು ನೀಡಲು ನಿರ್ಧರಿಸಿದೆವು. ಬಡಮಕ್ಕಳೂ ಸೌಲಭ್ಯಗಳ ಜತೆ ಗುಣಮಟ್ಟದ ಶಿಕ್ಷಣ ಪಡೆಯಲಿ ಎಂಬುದು ನಮ್ಮ ಆಶಯ’ ಎನ್ನುತ್ತಾರೆ ಕೊಟ್ಟೂರು ಬಸವಪ್ಪನವರ ಪುತ್ರ ಹಾಗೂ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಎಚ್.ಕೆ.ಮಂಜುನಾಥ.
‘ಶಾಲೆಗಳಿಗೆ ಭೇಟಿ ನೀಡಿದ ವೇಳೆ ಮಕ್ಕಳು ನೆಲದ ಮೇಲೆಯೇ ಕುಳಿತಿದ್ದನ್ನು ನೋಡಿದಾಗ ಬಹಳ ಬೇಸರವಾಯಿತು. ಆಯಾ ಶಾಲೆಯ ಮುಖ್ಯ ಶಿಕ್ಷಕರ ಕೋರಿಕೆಯ ಅನುಸಾರ ಅಗತ್ಯ ಸೌಲಭ್ಯಗಳನ್ನು ಒದಗಿಸಿದ್ದೇವೆ. ಡಿಸೆಂಬರ್ 27ರಂದು ನಮ್ಮ ಮಾವ ಬಸವಪ್ಪನವರ 50ನೇ ವರ್ಷದ ಪುಣ್ಯಸ್ಮರಣೆ ಇದ್ದು, ಅವರ ಸ್ಮರಣಾರ್ಥ ಸರ್ಕಾರಿ ಶಾಲೆಗಳ ಉಳಿವಿಗೆ ನಮ್ಮ ಅಳಿಲು ಸೇವೆ ಸಾರ್ಥಕ ಭಾವ ಮೂಡಿಸಿದೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಟ್ರಸ್ಟ್ ಕಾರ್ಯದರ್ಶಿ ಎಚ್.ಎಂ.ನಾಗರತ್ನ.
ಮಳಲಕೆರೆ ಗ್ರಾಮದ ಶಾಲೆಯ ಮುಖ್ಯಶಿಕ್ಷಕ ಎಂ.ಆರ್.ಯೋಗೀಶ್ವರಯ್ಯ ಅವರು ತಮ್ಮ ಶಾಲೆಗಳ ಜೊತೆಗೆ ಇತರೆ ಶಾಲೆಗೂ ದಾನಿಗಳಿಂದ ನೆರವು ಕೊಡಿಸಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಿದೆ.
–ಹಾಲಸ್ವಾಮಿ ಮುಖ್ಯಶಿಕ್ಷಕ ಸರ್ಕಾರಿ ಪ್ರೌಢಶಾಲೆ ಗಂಗನಕಟ್ಟೆ ಗ್ರಾಮ
ಶಿಕ್ಷಕರ ಮನವಿಗೆ ಸ್ಪಂದಿಸಿ ಹರಳೆಣ್ಣೆ ಕೊಟ್ಟೂರು ಬಸವಪ್ಪ ಕುಟುಂಬದವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನೀಡಿರುವ ಕೊಡೆಗೆಯನ್ನು ಇಲಾಖೆ ಸ್ಮರಿಸುತ್ತದೆ
–ಜಿ.ಕೊಟ್ರೇಶ್ ಉಪ ನಿರ್ದೇಶಕ ಶಾಲಾ ಶಿಕ್ಷಣ ಇಲಾಖೆ ದಾವಣಗೆರೆ
ಜನಮಾನಸದಲ್ಲಿ ಹಸಿರಾಗಿರುವ ಬಸವಪ್ಪ
ಹರಳೆಣ್ಣೆ ಕೊಟ್ಟೂರು ಬಸವಪ್ಪನವರು ದಾವಣಗೆರೆಯ ಚೌಕಿಪೇಟೆಯ ಸಾಮಾನ್ಯ ವ್ಯಾಪಾರಿಯ ಪುತ್ರ. ಪುಣೆಯಲ್ಲಿ ಕಾನೂನು ಪದವಿ ಪಡೆದು ದಾವಣಗೆರೆಯಲ್ಲಿ ವಕೀಲ ವೃತ್ತಿ ಮಾಡಿದ್ದರು. ವೃತ್ತಿ ಜೀವನಕ್ಕಷ್ಟೇ ಸೀಮಿತರಾಗದೆ ಅನೇಕ ಸಂಘ–ಸಂಸ್ಥೆಗಳನ್ನು ಪ್ರಾರಂಭಿಸಿ ಮಾಡಿದ ಶೈಕ್ಷಣಿಕ ಧಾರ್ಮಿಕ ಸೇವೆಗಳು ಹಲವು. 1939ರಲ್ಲಿ ದಾವಣಗೆರೆಯ ಅಂದಿನ ಪುರಸಭೆಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಅವರು ಪುರಸಭೆ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಅದೇ ಕಟ್ಟಡ ಇಂದು ಮಹಾನಗರ ಪಾಲಿಕೆಯಾಗಿ ಮುಂದುವರಿದಿದೆ. 1974ರಲ್ಲಿ ನಿಧನರಾದ ಬಸವಪ್ಪನವರು ತಮ್ಮ ಕೆಲಸಗಳಿಂದ ಜನಮಾನಸದಲ್ಲಿ ಹಸಿರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.