ADVERTISEMENT

ರೇಣುಕಾಚಾರ್ಯರಿಂದ ತುಘಲಕ್ ದರ್ಬಾರ್

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 11:45 IST
Last Updated 6 ಜೂನ್ 2020, 11:45 IST
ಎಚ್‌.ಬಿ. ಮಂಜಪ್ಪ
ಎಚ್‌.ಬಿ. ಮಂಜಪ್ಪ   

ದಾವಣಗೆರೆ: ‘ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ನಿಷೇಧಾಜ್ಞೆ ಇದ್ದರೂ ಸೈರನ್ ಹಾಕಿಕೊಂಡು ಹೋಗುವ ಮೂಲಕ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಆರೋಪಿಸಿದರು.

‘ಹೊನ್ನಾಳಿಯಲ್ಲಿ ಕೊರೊನಾ ಜಾಗೃತಿ ಮೂಡಿಸುವ ನೆಪದಲ್ಲಿ ಚುನಾವಣಾ ಪ್ರಚಾರ ಮಾಡುವ ಗಿಮಿಕ್ ರಾಜಕಾರಣ ಮಾಡುತ್ತಿದ್ದಾರೆ. ಕೊರೊನಾ ವಾರಿಯರ್ಸ್‌ಗಳು ಜೀವದ ಹಂಗು ತೊರೆದು ಹೋರಾಟ ಮಾಡುತ್ತಿದ್ದರೆ. ಆದರೆ ರೇಣುಕಾಚಾರ್ಯ ಅವರು ಪತ್ನಿಯ ಜೊತೆ ಸೇರಿಕೊಂಡು ಹೂಮಳೆ ಸುರಿಸಿಕೊಳ್ಳುತ್ತಿದ್ದಾರೆ. ನಿಷೇಧಾಜ್ಞೆ ಇದ್ದರೂ ಹೆಚ್ಚಿನ ಜನ ಸೇರಿಸಿಕೊಂಡು ಸಮಾರಂಭ ಮಾಡುತ್ತಿದ್ದಾರೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

‘ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ದೇವರಾಜ ಅರಸು ಅವರ ನಂತರ 5 ವರ್ಷಗಳ ಆಡಳಿತವನ್ನು ಪೂರ್ಣಗೊಳಿಸಿದ ಸಿದ್ದರಾಮಯ್ಯ ಅವರು ‘ಅನ್ನಭಾಗ್ಯ’ ‘ಕ್ಷೀರಭಾಗ್ಯ’ದಂತಹ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ಬಗ್ಗೆ ಮಾತನಾಡಿದರೆ ರಾಜ್ಯದಾದ್ಯಂತ ಸಿದ್ದರಾಮಯ್ಯ ಅವರ ಅಭಿಮಾನಿಗಳಿಂದ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

‘ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹಗಲುಗನಸು ಕಾಣುತ್ತಿದ್ದಾರೆ ಎಂದು ಹೇಳಿರುವುದು ಖಂಡನೀಯ. 150 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ದೇಶ ಹಾಗೂ ರಾಜ್ಯದಲ್ಲಿ ಸುಭದ್ರ ಆಡಳಿತ ನೀಡಿದೆ. ಆಪರೇಷನ್ ಮಾಡಿ ಹಿಂಬಾಗಿಲ ರಾಜಕಾರಣ ಮಾಡುವುದು ಕಾಂಗ್ರೆಸ್‌ ಸಂಸ್ಕೃತಿಯಲ್ಲ. ಅದು ಏನಿದ್ದರೂ ಬಿಜೆಪಿ ಸಂಸ್ಕೃತಿ. ಸುಭದ್ರವಾಗಿದ್ದ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಹಲವು ಶಾಸಕರ ರಾಜೀನಾಮೆ ಕೊಡಿಸಿ ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ’ಎಂದು ಆರೋಪಿಸಿದರು.

‘ರೇಣುಕಾಚಾರ್ಯ ಅವರು 2013ರಲ್ಲಿ ಯಡಿಯೂರಪ್ಪ ಅವರ ಮಾನಸ ಪುತ್ರ ಎಂದು ಹೇಳಿಕೊಂಡೇ ಯಡಿಯೂರಪ್ಪ ಅವರ ಕಾಲೆಳೆದರು. ಅನೇಕ ಶಾಸಕರನ್ನು ರೆಸಾರ್ಟ್‌ಗಳಲ್ಲಿ ಶಾಸಕರನ್ನು ಇಟ್ಟಿದ್ದನ್ನು ಜನ ಮರೆಯುವುದಿಲ್ಲ. ಯಡಿಯೂರ‌ಪ್ಪ ಅವರನ್ನು ಕೆಳಗೆ ಇಳಿಸಲು 25 ಶಾಸಕರು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ’ ಎಂದು ಆರೋಪಿಸದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಮಾತನಾಡಿ, ‘ಮೇಯರ್ ಅಜಯ್‌ಕುಮಾರ್ ಅವರು ಅಧಿಕಾರಕ್ಕೆ ಬಂದು 4 ತಿಂಗಳಾದರೂ ಉತ್ತಮ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ತೆರಿಗೆ ಹೆಚ್ಚಿಸಿದ್ದಾರೆ. ದುರ್ಗಾಂಬಿಕಾ ಜಾತ್ರೆಗೆ ಸೌಲಭ್ಯ ಕಲ್ಪಿಸಿಲ್ಲ. ಆ ಮೂಲಕ ಆಡಳಿತದಲ್ಲಿ ಅನುಭವ ಇಲ್ಲ ಎಂಬುದನ್ನು ನಿರೂಪಿಸಿದ್ದಾರೆ. ತೆರಿಗೆ ಹೆಚ್ಚಿಸುವುದನ್ನು ಇಳಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್, ಮಹಿಳಾ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷೆ ಅನಿತಾಬಾಯಿ ಮಾಲತೇಶ್, ಆಶಾ ಮುರುಳಿ, ಅಯೂಬ್ ಪೈಲ್ವಾನ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.