ADVERTISEMENT

ದಾವಣಗೆರೆ: ಹೊರರಾಜ್ಯದ ಟ್ಯೂಷನ್ ಸಂಸ್ಥೆಗಳ ಹೆಚ್ಚಳ

ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಮೋಹನ್ ಆಳ್ವ ಕಳವಳ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:18 IST
Last Updated 13 ಸೆಪ್ಟೆಂಬರ್ 2025, 4:18 IST
ದಾವಣಗೆರೆಯ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು
ಪ್ರಜಾವಾಣಿ ಚಿತ್ರ
ದಾವಣಗೆರೆಯ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ನಡೆದ ರಾಜ್ಯಮಟ್ಟದ ಸಮಾವೇಶವನ್ನು ಗಣ್ಯರು ಉದ್ಘಾಟಿಸಿದರು ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉತ್ತರ ಭಾರತ ಸೇರಿದಂತೆ ಇತರೆ ರಾಜ್ಯಗಳ ಟ್ಯೂಷನ್ ಸಂಸ್ಥೆಗಳು ತಮ್ಮ ಶಾಖೆಗಳನ್ನು ಹೆಚ್ಚಿಸಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಹೊರರಾಜ್ಯಗಳ ಟ್ಯೂಷನ್ ಸಂಸ್ಥೆ ಹಾಗೂ ಕಾಲೇಜುಗಳಿಗೆ ರಾಜ್ಯ ಸರ್ಕಾರ ಕಡಿವಾಣ ಹಾಕುವುದು ಅಗತ್ಯವಾಗಿದೆ’ ಎಂದು ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ (ಕುಪ್ಮಾ) ಅಧ್ಯಕ್ಷ ಎಂ. ಮೋಹನ್ ಆಳ್ವ ಹೇಳಿದರು. 

ಇಲ್ಲಿನ ಬಿಐಇಟಿ ಕಾಲೇಜಿನ ಎಸ್.ಎಸ್. ಮಲ್ಲಿಕಾರ್ಜುನ್ ಸಾಂಸ್ಕೃತಿಕ ಭವನದಲ್ಲಿ ಶುಕ್ರವಾರ ನಡೆದ ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. 

‘ಬೇರೆ ಬೇರೆ ರಾಜ್ಯಗಳ ಶಿಕ್ಷಣ ಸಂಸ್ಥೆಗಳು ಇಲ್ಲಿಗೆ ಬರುತ್ತಿವೆ. ಅದರಲ್ಲೂ ವ್ಯಾಪಾರ ಮನೋಧರ್ಮದವರು ಶಿಕ್ಷಣ ಸಂಸ್ಥೆ ಆರಂಭಿಸುತ್ತಿದ್ದಾರೆ. ಇದರಿಂದಾಗಿ ಶೈಕ್ಷಣಿಕ ಮೌಲ್ಯಗಳು ಮರೆಯಾಗುತ್ತಿವೆ. ಸ್ಥಳೀಯ ಪದವಿ ಪೂರ್ವ ಕಾಲೇಜಿನ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಎಚ್ಚರಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು. 

ADVERTISEMENT

‘ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದಿರುವ ಟ್ಯೂಷನ್ ಸಂಸ್ಥೆಗಳು ಎಲ್ಲೋ ದಾಖಲಾತಿ ಮಾಡಿಸಿಕೊಂಡು, ಇನ್ನೆಲ್ಲೋ ತರಬೇತಿ ನೀಡಿ, ಮತ್ತೆಲ್ಲೋ ಪರೀಕ್ಷೆ ನಡೆಸುತ್ತಿವೆ’ ಎಂದು ಆರೋಪಿಸಿದರು. 

ರಾಜ್ಯದಲ್ಲಿ ಸಾವಿರಾರು ಅನುದಾನ ರಹಿತ ಖಾಸಗಿ ಪಿಯು ಕಾಲೇಜುಗಳಿವೆ. ಆದರೂ, ನಮ್ಮ ಸಂಘದಲ್ಲಿ ಕೇವಲ 300 ಆಡಳಿತ ಮಂಡಳಿಗಳು ನೋಂದಾಯಿಸಿಕೊಂಡಿವೆ. ಅನುದಾನ ರಹಿತ ಖಾಸಗಿ ಪಿಯು ಕಾಲೇಜುಗಳು ಸಂಘದಲ್ಲಿ ನೋಂದಾಯಿಸಿಕೊಂಡರೆ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಲು ಸಹಾಯಕವಾಗಲಿದೆ ಎಂದರು. 

ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಬಹುದೊಡ್ಡ ಲಾಭ ದೊರೆತಿದೆ. ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಸರ್ಕಾರಿ ಕಾಲೇಜುಗಳಿಗಿಂತ ಖಾಸಗಿ ಕಾಲೇಜುಗಳಿಗೆ ಹೆಚ್ಚಿನ ಫಲಿತಾಂಶ ಬಂದಿದೆ ಎಂದು ತಿಳಿಸಿದರು. 

ಜಿಲ್ಲಾ ಘಟಕ ರಚನೆ

ಕರ್ನಾಟಕ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ಜಿಲ್ಲಾ ಘಟಕವನ್ನು ರಚಿಸಲಾಗಿದೆ. ಸರ್‌ಎಂ.ವಿ. ಕಾಲೇಜಿನ ಎಸ್.ಎಂ. ಶ್ರೀಧರ್ (ಅಧ್ಯಕ್ಷ), ವಿಶ್ವಚೇತನ ಕಾಲೇಜಿನ ವಿಜಯಲಕ್ಷ್ಮಿ ವೀರಮಾಚಿನೇನಿ, ಮಾನ್ಯತಾ ಕಾಲೇಜಿನ ನಾಡಗೌಡ, ತಿಮ್ಮಾರೆಡ್ಡಿ ಕಾಲೇಜಿನ ತಿಮ್ಮಾರೆಡ್ಡಿ (ಉಪಾಧ್ಯಕ್ಷರು), ಸಿದ್ಧಗಂಗಾ ಕಾಲೇಜಿನ ಡಿ.ಎಸ್. ಜಯಂತ್ (ಕಾರ್ಯದರ್ಶಿ), ದವನ್- ನೂತನ್ ಕಾಲೇಜಿನ ವೀರೇಶ್ ಪಟೇಲ್, ವಿನ್ನರ್ಸ್‌ ಅಕಾಡೆಮಿಯ ವೈ.ವಿ.ವಿನಯ್ (ಸಹ ಕಾರ್ಯದರ್ಶಿ), ಟೀಂ ಅಕಾಡೆಮಿಯ ಕೆ.ಎಸ್. ಮಂಜಪ್ಪ (ಖಜಾಂಚಿ) ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಮಾಗನೂರು ಬಸಪ್ಪ ಕಾಲೇಜಿನ ಜಿ.ಎನ್‌ಕುಮಾರ್, ಜಿ.ಬಿ. ಪಿಯು ಕಾಲೇಜಿನ ಎನ್.ಸಿ. ಪ್ರಶಾಂತ್, ಸಪ್ತಗಿರಿ ಕಾಲೇಜಿನ ರಾಮಮೂರ್ತಿ, ಆನಂದ್ ಕಾಲೇಜಿನ ಆನಂದ್ ಪೂತಿನ, ರಾಘವೇಂದ್ರ ಪಿಯು ಕಾಲೇಜಿನ ಎಂ.ಆರ್. ಅನಿಲ್‌ಕುಮಾರ್ ಆಯ್ಕೆಯಾಗಿದ್ದಾರೆ.  

ಸಂಘದ ಪದಾಧಿಕಾರಿಗಳಾದ ಎಂ.ಬಿ. ಸತೀಶ್, ಜಯರಾಮ್ ಶೆಟ್ಟಿ, ಪಿ.ವಿಶ್ವನಾಥ್, ಬಿ.ಕೆ. ದೇವರಾಜ್, ಸುಧಾಕರ ಶೆಟ್ಟಿ, ಯುವರಾಜ್ ಜೈನ್, ಮಂಜುನಾಥ್ ರೇವಣಕರ್, ಸುಬ್ರಹ್ಮಣ್ಯ ನಾಡೋಜ, ವಿಶ್ವನಾಥ್ ಶೇಷಾಚಲ, ಫಾ.ವಿನ್ಸೆಂಟ್ ಕಾಸ್ಟ್ ಇದ್ದರು.

ಇನ್ನೊಂದು ವರ್ಷದೊಳಗೆ ಎಲ್ಲಾ ಖಾಸಗಿ ಕಾಲೇಜುಗಳನ್ನು ನಮ್ಮ ಸಂಘಕ್ಕೆ ನೋಂದಣಿ ಮಾಡಿಸುವುತ್ತ ಗಮನ ಹರಿಸಬೇಕು. ಪ್ರತಿ ಜಿಲ್ಲೆಯಲ್ಲೂ ನಮ್ಮ ಸಂಘವು ಜಿಲ್ಲಾ ಘಟಕವನ್ನು ಹೊಂದಬೇಕಿದೆ.
– ನರೇಂದ್ರ ನಾಯಕ್, ಕಾರ್ಯದರ್ಶಿ ಕುಪ್ಮಾ
ಕೋವಿಡ್‌ ವೇಳೆ ಸರ್ಕಾರದ ಆದೇಶದಿಂದ ಸಾಕಷ್ಟು ಗೊಂದಲ ಏರ್ಪಟಿತ್ತು. ಸಂಘಟಿತರಾಗದಿದ್ದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂಬುದನ್ನು ಅರಿತು ಈ ಸಂಘವನ್ನು ರಚಿಸಲಾಯಿತು.
– ಎಂ.ಬಿ. ಪುರಾಣಿಕ್, ಗೌರವಾಧ್ಯಕ್ಷ ಕುಪ್ಮಾ
ಶಿಕ್ಷಣ ಸಂಸ್ಥೆಗಳು ದೊಡ್ಡ ಮಟ್ಟದಲ್ಲಿ ಬೆಳೆದಿರುವ ಕಾರಣ ದಾವಣಗೆರೆಯನ್ನು ಶಿಕ್ಷಣ ಕಾಶಿ ಎನ್ನಲಾಗುತ್ತಿದೆ. ರಾಜ್ಯದ ಬೇರೆ ಬೇರೆ ಭಾಗದಿಂದ ವಿದ್ಯಾರ್ಥಿಗಳು ವೈದ್ಯಕೀಯ ಎಂಜಿನಿಯರಿಗ್ ಫಾರ್ಮಸಿ ಕಲಿಯಲು ಇಲ್ಲಿಗೆ ಬರುತ್ತಿದ್ದಾರೆ.
– ಎಸ್.ಎಂ.ಶ್ರೀಧರ್, ಜಿಲ್ಲಾ ಘಟಕದ ಅಧ್ಯಕ್ಷ ಕುಪ್ಮಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.