ADVERTISEMENT

‘ತುಂಗಭದ್ರಾ ಹಿನ್ನೀರು ಯೋಜನೆ: ಶಾಸಕರ ಆರೋಪದಲ್ಲಿ ಹುರುಳಿಲ್ಲ’

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 3:26 IST
Last Updated 22 ಡಿಸೆಂಬರ್ 2020, 3:26 IST
ಎಚ್.ಪಿ. ರಾಜೇಶ್
ಎಚ್.ಪಿ. ರಾಜೇಶ್   

ಜಗಳೂರು: ‘ತುಂಗಭದ್ರಾ ಹಿನ್ನೀರಿನಿಂದ ಜಗಳೂರು ಸೇರಿ ಗಡಿಭಾಗದ ತಾಲ್ಲೂಕುಗಳಿಗೆ ₹ 2, 500 ಕೋಟಿ ವೆಚ್ಚದ ಕುಡಿಯುವ ನೀರು ಪೂರೈಕೆ ಯೋಜನೆ ತಾಲ್ಲೂಕಿಗೆ ಕೈತಪ್ಪಲು ನನ್ನ ನಿರ್ಲಕ್ಷ್ಯ ಕಾರಣ ಎಂಬ ಶಾಸಕ ಎಸ್.ವಿ. ರಾಮಚಂದ್ರ ಅವರ ಆರೋಪ ಸತ್ಯಕ್ಕೆ ದೂರ’ ಎಂದು ಮಾಜಿ ಶಾಸಕ ಎಚ್.ಪಿ. ರಾಜೇಶ್ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಅವರು, ‘ನಾನು ಶಾಸಕನಾಗಿದ್ದ ಅವಧಿಯಲ್ಲಿ ತಾಲ್ಲೂಕಿನ 157 ಹಳ್ಳಿಗಳಿಗೆ ನೀರು ಪೂರೈಕೆಯ ಬಹುಗ್ರಾಮ ಕುಡಿಯುವ ನೀರು ಪೂರೈಕೆಯ ಯೋಜನೆಯಡಿ ಟೆಂಡರ್ ಹಂತದಲ್ಲಿತ್ತು. ಆ ಸಮಯದಲ್ಲಿ ತುಂಗಭದ್ರಾ ಹಿನ್ನೀರಿನ ₹ 2500 ಕೋಟಿ ವೆಚ್ಚದ ಯೋಜನೆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಿದ್ದೆ. ಆದರೆ ಅಂದಿನ ಕಾನೂನು ಸಚಿವರು ಬಹುಗ್ರಾಮ ವಿಶೇಷ ಯೋಜನೆ ಮಂಜೂರಾಗಿದ್ದು, ಮತ್ತೊಂದು ಯೋಜನೆ ಅಗತ್ಯವಿಲ್ಲ ಎಂದಿದ್ದರು’ ಎಂದು ವಿವರಿಸಿದರು.

‘ನನ್ನ ಆಡಳಿತ ಅವಧಿಯಲ್ಲಿ ಭದ್ರಾಮೇಲ್ದಂಡೆ ಯೋಜನೆಯಡಿ 2.4 ಟಿಎಂಸಿ ಅಡಿಗೆ ಹೆಚ್ಚಿಸಲಾಗಿತ್ತು. ಸಿರಿಗೆರೆ ಶ್ರೀ ಆಶೀರ್ವಾದದಿಂದ 57 ಕೆರೆ ನೀರು ತುಂಬಿಸುವ ಯೋಜನೆಗೆ ₹ 40 ಲಕ್ಷ ಹಣಭರಿಸಿ ಡಿಪಿಆರ್ ಮಾಡಿಸುವಲ್ಲಿ ನನ್ನ ಶ್ರಮವಿದೆ. ಈ ಬಗ್ಗೆ ದಾಖಲೆಗಳಿವೆ’ ಎಂದರು.

ADVERTISEMENT

‘ನಮ್ಮ ಅವಧಿಯಲ್ಲಿ ಭದ್ರಾಮೇಲ್ದಂಡೆ ಯೋಜನೆಯಡಿ ₹ 12 ಕೋಟಿ ಅನುದಾನವನ್ನು ಎಸ್.ಸಿ, ಎಸ್.ಟಿ. ಕಾಲೊನಿಗಳಿಗೆ ರಸ್ತೆ ಮಾಡಲು ಬಳಸಲಾಗಿದೆ. ಆದರೆ ಶಾಸಕರು ಈ ಅನುದಾನವನ್ನು ಕೆರೆಗಳ ಆಭಿವೃದ್ದಿ ಹೆಸರಲ್ಲಿ ಹೂಳೆತ್ತಲು ಬಳಸಿದ್ದು, ಗ್ರಾಮೀಣ ಭಾಗದ ಪರಿಶಿಷ್ಟ ಕಾಲೊನಿಗಳ ಅಭಿವೃದ್ಧಿ ಕುಂಠಿತವಾಗಿದೆ’ ಎಂದು ಆರೋಪಿಸಿದರು.

ಕೆಪಿಸಿಸಿ ಎಸ್ ಟಿ ಘಟಕದ ಅಧ್ಯಕ್ಷ ಕೆ.ಪಿ. ಪಾಲಯ್ಯ, ‘ಭದ್ರಾ ಮೇಲ್ದಂಡೆ ಮಂಜೂರಾತಿಯ ಹಿಂದೆ ತಾಲ್ಲೂಕಿನ ವಿವಿಧ ಸಂಘಟನೆಗಳ ಅವಿರತ ಹೋರಾಟದ ಪಾತ್ರ ಇದೆ’ ಎಂದರು.

ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್‌ ಮಾತನಾಡಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ತಿಪ್ಪೇಸ್ವಾಮಿ ಗೌಡ , ಬಿ. ಲೊಕೇಶ್, ಗೋಡೆ ಪ್ರಕಾಶ ಎಲ್.ಬಿ. ಬೈರೇಶ್, ತಿಪ್ಪೇಸ್ವಾಮಿ, ಪಲ್ಲಾಗಟ್ಟೆ ಶೇಖರಪ್ಪ , ಗಿರೀಶ್ ಒಡೆಯರ್, ಬಂಗಾರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.