ದಾವಣಗೆರೆ: ‘ತುಂಗಭದ್ರಾ ನದಿ ಕಲುಷಿತಗೊಳ್ಳುವುದನ್ನು ತಡೆಯಲು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ನದಿ ಹರಿದು ಹೋಗಿರುವ ಕ್ಷೇತ್ರಗಳ ಶಾಸಕರ ಸಭೆ ಕರೆಯಬೇಕು. ಕನ್ನಡಿಗರ ಜೀವನಾಡಿಯಾಗಿರುವ ನದಿಯನ್ನು ಉಳಿಸಲು ಸರ್ಕಾರ ಪ್ರಯತ್ನಿಸಬೇಕು’ ಎಂದು ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ ಮನವಿ ಮಾಡಿದರು.
‘ತುಂಗಭದ್ರಾ ನದಿ ಉಳಿವಿಗೆ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನ ಮತ್ತು ಪರ್ಯಾವರಣ ಟ್ರಸ್ಟ್ ವತಿಯಿಂದ ‘ನಿರ್ಮಲ ತುಂಗ–ಭದ್ರಾ ಅಭಿಯಾನ’ ನಡೆಸಲಾಗುತ್ತಿದೆ. ನದಿ ನೀರು ಕಲುಷಿತಗೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗಿದೆ. ಸರ್ಕಾರದ ಜೊತೆಗೆ ಸಾರ್ವಜನಿಕರು ಕೈಜೋಡಿಸಿದರೆ ಮಾತ್ರ ನದಿಗೆ ಮೋಕ್ಷ ಸಿಗಲಿದೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.
‘ತುಂಗಾ ಮತ್ತು ಭದ್ರಾ ನದಿಗಳ ಉಗಮ ಸ್ಥಾನವಾದ ಚಿಕ್ಕಮಗಳೂರು ಜಿಲ್ಲೆಯ ಗಂಗಡಿಕಲ್ಲು ಬೆಟ್ಟ ನಾಶವಾಗುತ್ತಿದೆ. ಈ ಬೆಟ್ಟದ ಪ್ರತಿ ಮರಗಳು ಪ್ರತಿ ವರ್ಷ 4,500 ಲೀಟರ್ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಈ ಬೆಟ್ಟವನ್ನು ಉಳಿಸಿಕೊಳ್ಳದೇ ಹೋದರೆ ನದಿ ಮೂಲಕ್ಕೆ ಧಕ್ಕೆ ಉಂಟಾಗಲಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
‘ನಿರ್ಮಲ ತುಂಗ–ಭದ್ರಾ ಅಭಿಯಾನ’ ವನ್ನು ಎರಡು ಹಂತದಲ್ಲಿ ನಡೆಸಲಾಗಿದೆ. ಕೊಪ್ಪಳ ಜಿಲ್ಲೆಯ ಕಿಷ್ಕಿಂದೆಯವರೆಗೆ 2ನೇ ಹಂತದ ಅಭಿಯಾನ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆದಿದೆ. 3ನೇ ಹಂತದ ಅಭಿಯಾನವನ್ನು ಮಂತ್ರಾಲಯದವರೆಗೆ ನಡೆಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ’ ಎಂದು ಮಾಹಿತಿ ನೀಡಿದರು.
‘430 ಕಿ.ಮೀ ಉದ್ದದ ಈ ನದಿ ಹರಿಹರ ದಾಟಿದ ಬಳಿಕ ಹೆಚ್ಚು ಮಲಿನಗೊಳ್ಳುತ್ತಿದೆ. ದೊಡ್ಡ ಕಾರ್ಖಾನೆಗಳು ತ್ಯಾಜ್ಯವನ್ನು ನೇರವಾಗಿ ನದಿಗೆ ಬಿಡುತ್ತಿವೆ. ನದಿ ಇಕ್ಕೆಲಗಳ ಗ್ರಾಮ, ನಗರಗಳಿಂದಲೂ ಕೊಳಚೆ ನೀರು ನದಿಗೆ ಹರಿದುಬರುತ್ತಿದೆ’ ಎಂದು ಅಭಿಯಾನದ ಅಧ್ಯಕ್ಷ ಪ್ರೊ.ಬಿ.ಎಂ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಅಭಿಯಾನದ ಮುಖಂಡರಾದ ಎಂ.ಶಂಕರ್, ಮಾಧವನ್, ಲೋಕೇಶಪ್ಪ, ವಾಸು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.