ದಾವಣಗೆರೆ: ವಿದ್ಯಾನಗರದ ವಿನಾಯಕ ಬಡಾವಣೆಯಲ್ಲಿ ಬುಧವಾರ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬೈಕಲ್ಲಿ ಬಂದವರು ಇಬ್ಬರು ಮಹಿಳೆಯರ ಕುತ್ತಿಗೆಗೆ ಕೈ ಹಾಕಿ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ವಿನಾಯಕ ಬಡಾವಣೆಯ ಬಿ. ಬ್ಲಾಕ್‌ನ 1ನೇ ಮೈನ್ 3ನೇ ಕ್ರಾಸ್ ನಿವಾಸಿ ಎಂ. ಪ್ರಕಾಶ್ ಅವರ ಪತ್ನಿ ವಿಜಯಾ ಎಚ್.ಬಿ. (55) ತಮ್ಮ ಸಾಕು ನಾಯಿಯನ್ನು ಹಿಡಿದುಕೊಂಡು ಬುಧವಾರ ಸಂಜೆ ಮನೆ ಮುಂದಿನ ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಬೈಕ್ ಬಂದು ನಿಂತಿದ್ದು, ಹಿಂಬದಿ ಸವಾರ ಇಳಿದು ಲಕ್ಷ್ಮೀ ಬಡಾವಣೆ ಎಲ್ಲಿ ಎಂದು ವಿಳಾಸ ಕೇಳಿದ್ದಾನೆ. ಅವರು ಉತ್ತರ ಕೊಡುವ ಹೊತ್ತಲ್ಲೇ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಬೈಕಲ್ಲಿ ಪರಾರಿಯಾಗಿದ್ದಾರೆ. ₹ 1.8 ಲಕ್ಷ ಮೌಲ್ಯದ 60 ಗ್ರಾಂ ಚಿನ್ನ ಕಳ್ಳರ ಕೈ ಸೇರಿದೆ.
ಇನ್ನೊಂದು ಪ್ರಕರಣ: ವಿನಾಯಕ ಬಡಾವಣೆಯ ವಿಎಂಜಿ ಲೇಔಟ್ ನಿವಾಸಿ ಗುರುಮೂರ್ತಿ ಅವರ ಪತ್ನಿ ರತ್ನಮ್ಮ ಎಚ್.ಆರ್. (45) ಅವರು ಮಳಲ್ಕೆರೆಯಲ್ಲಿರುವ ಮಗಳ ಮನೆಯಿಂದ ಬಂದವರು ವಿದ್ಯಾನಗರದಲ್ಲಿ ಬಸ್ಸಿನಿಂದ ಇಳಿದು ವಿದ್ಯಾನಗರ 15ನೇ ಕ್ರಾಸ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಹಿಂದಿನಿಂದ ಬಂದ ಬೈಕ್ ಅವರ ಹತ್ತಿರದಿಂದ ಸಾಗುವಾಗ ಹಿಂಬದಿ ಸವಾರ ಕುತ್ತಿಗೆಗೆ ಕೈ ಹಾಕಿ ಮಾಂಗಲ್ಯ ಸರ ಎಳೆದಿದ್ದಾನೆ. ಕೂಡಲೇ ರತ್ನಮ್ಮ ಸರ ಹಿಡಿದುಕೊಂಡಿದ್ದರಿಂದ ಅರ್ಧ ಸರ ಉಳಿದಿದೆ. ₹ 40 ಸಾವಿರ ಮೌಲ್ಯದ 1.5 ತೊಲ ಬಂಗಾರ ಕಿತ್ತುಕೊಂಡು ಹೋಗಿದ್ದಾರೆ.
ಸಿಲ್ವರ್ ಬಣ್ಣದ ಬೈಕಲ್ಲಿ ಬಂದ 25ರಿಂದ 30 ವರ್ಷದೊಳಗಿನ ಯುವಕರು ಈ ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದು ಮೇಲ್ನೋಟಕ್ಕೆ ಕಂಡು ಬಂದಿದೆ. ಎರಡೂ ಪ್ರಕರಣಗಳು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.