ತಿಂಗಳ ಹಿಂದೆ ಗಿಡಮರಗಳ ಕೆಳಗೆ, ರಸ್ತೆಯುದ್ದಕ್ಕೂ ತರಗೆಲೆಗಳದ್ದೇ ಕಾರುಬಾರು. ಅಂಗಳದ ಎಲೆಹಾಸನ್ನು ಸರಿಸಿ ಶುಚಿಗೊಳಿಸುವ ಗೊಡವೆ ಮನೆಯವರದ್ದು. ನಿಸರ್ಗ ಸಹಜ ಎಂಬಂತೆ ತನ್ನ ಹಳೆಯ ಎಲೆ ಉದುರಿಸುವ ಮರವನ್ನು ಶಪಿಸುತ್ತಲೇ ಆ ಎಲೆಗಳ ಗುಡ್ಡೆಗೆ ಬೆಂಕಿಯ ಸ್ಪರ್ಶ ನೀಡುವುದೇ ಕೆಲಸ. ‘ಹಳೆಯ ಎಲೆ ಮುದುಡುತ್ತಿದ್ದಂತೆಯೇ ಹೊಸ ಚಿಗುರು’ ಎಂಬಂತೆ, ಆಗಲೇ ಹೊಸ ಚಿಗುರಿನ ಸೂಚನೆ ಕೊಡುವ ಭೂರಮೆ, ನಿಡುಸುಯ್ಯುವ ಬಿಸಿಲ ತಾಪವನ್ನೂ ಲೆಕ್ಕಿಸದೆ ಹಸಿರುಟ್ಟು ಚೈತನ್ಯವ ಆವಾಹಿಸಿಕೊಂಡಿದ್ದಾಳೆ.
ತರಗೆಲೆಗಳ ಜಾಗದಲ್ಲಿ ಈಗ ಹೂವ ಹಾಸು ಸ್ವಾಗತಿಸುತ್ತಿದೆ. ಹೃನ್ಮನ ಪುಳಕಗೊಳಿಸುವ ಈ ಸೋಜಿಗದ ಸಮಯಕ್ಕೆ ‘ಯುಗಾದಿ’ ಎಂದೆನ್ನಬಹುದೇ?
ಹೌದು, ಪ್ರಕೃತಿಯೊಂದಿಗೆ ಸಮ್ಮಿಳಿತಗೊಂಡಿರುವ ‘ಯುಗಾದಿ’ಯ ಬರುವಿಕೆಯನ್ನು ನಿಸರ್ಗವೇ ಜಗಕೆಲ್ಲ ಸಾರುತ್ತದೆ. ಎಲೆಗಳುದುರಿ ಬೋಳಾಗಿದ್ದ ತರುಲತೆಗಳಲ್ಲಿ ಜೀವಕಳೆ ಮರುಪೂರಣಗೊಳ್ಳುತ್ತದೆ. ಹೂ, ಕಾಯಿ, ಹಣ್ಣು ಹೊತ್ತು ಭುವಿಗೆ ಮತ್ತೆ ನೆರಳಾಗುವ ತವಕದಲ್ಲಿರುವ ಮರಗಳು ವಿಸ್ಮಯ ಮೂಡಿಸುತ್ತವೆ. ನಿಸರ್ಗದ ಈ ಚಮತ್ಕಾರಕ್ಕೊಂದು ಸಂಭ್ರಮ ಬೇಡವೇ? ಅಂತೆಯೇ ‘ಯುಗಾದಿ’ಯ ಹೆಸರಲ್ಲಿ ಆ ಸಂಭ್ರಮ ಜಗದೆಲ್ಲೆಡೆ ಕಳೆಗಟ್ಟುತ್ತದೆ.
ವಸಂತಾಗಮನದ ಈ ಹೊತ್ತಿನಲ್ಲಿ ಮಧ್ಯಕರ್ನಾಟಕ ಭಾಗದಲ್ಲೂ ಹಬ್ಬದ ಕಳೆ ತುಂಬುತ್ತದೆ. ಮಾವು, ಬೇವಿನ ಚಿಗುರೆಲೆಗಳ ಚೊಂಗೆಗಳನ್ನು ಕೊಯ್ದು ತಂದು ಮನೆ ಬಾಗಿಲಿಗೆ ನೇತು ಹಾಕಿದರೆ ಹಬ್ಬದ ಸಡಗರ ಮನೆ ಹೊಕ್ಕಂತೆಯೇ. ಹಬ್ಬಕ್ಕೆ ಮುನ್ನುಡಿ ಬರೆದಂತೆಯೇ. ದೀಪಾವಳಿ ಸಮಯದಲ್ಲಿ ನಡೆಯುವ ಅಭ್ಯಂಜನ ಸ್ನಾನದ ಸಂಪ್ರದಾಯ ಯುಗಾದಿ ಹಬ್ಬದಲ್ಲೂ ಇರುತ್ತದೆ. ಮೈಗೆಲ್ಲ ಎಣ್ಣೆ ಪೂಸಿಕೊಂಡು ಎಳೆ ಬಿಸಿಲಿಗೆ ಮೈಯೊಡ್ಡಿ, ಬಳಿಕ ಬಿಸಿ ನೀರಿಗೆ ಮಾವು, ಬೇವಿನ ಎಲೆ ಹಾಕಿ ಸ್ನಾನ ಮಾಡುವ ಸಂಪ್ರದಾಯ ದಾವಣಗೆರೆ, ಶಿವಮೊಗ್ಗ, ಹಾವೇರಿ ಭಾಗಗಳಲ್ಲಿ ಹಾಸುಹೊಕ್ಕಾಗಿದೆ.
ಹಬ್ಬದ ದಿನ ಬೇವು– ಬೆಲ್ಲವ ಸವಿಯುವುದು ಅನೂಚಾನವಾಗಿ ನಡೆದುಬಂದ ಪದ್ಧತಿ. ಇದು ನೋವು ನಲಿವನ್ನು ಸಮನಾಗಿ ಸ್ವೀಕರಿಸಬೇಕೆಂಬ ಜನಪದರ ನುಡಿಗಟ್ಟು. ಇಲ್ಲಿ ಬೇವು– ಬೆಲ್ಲ ಎಂದರೆ ಬೇವಿನ ಎಲೆ– ಬೆಲ್ಲ ಮಾತ್ರವಲ್ಲ. ಆ ಖಾದ್ಯದ ಖದರ‍್ರೇ ಬೇರೆ. ಪುಟಾಣಿ ಪುಡಿಗೆ ಬೆಲ್ಲದ ಪುಡಿ, ಒಣಕೊಬ್ಬರಿ, ಗಸಗಸೆ, ಗೋಡಂಬಿ, ಬಾದಾಮಿ ಪುಡಿ, ಒಣ ಶುಂಠಿ ಪುಡಿ, ಏಲಕ್ಕಿ ಪುಡಿ ಹಾಕಿ ಹುಡಿಹುಡಿಯಾದ ಪುಡಿ ತಯಾರಿಸಲಾಗುತ್ತದೆ. ಇದಕ್ಕೆ ‘ಬೇವು’ ಎಂದೆನ್ನುತ್ತಾರೆ. ಆ ಪುಡಿಗೆ ಸ್ವಲ್ಪವೇ ಬೇವಿನ ಚಿಗುರೆಲೆ ಹಾಗೂ ಹೂವುಗಳನ್ನು ಬೆರೆಸಿ ಸವಿಯಲಾಗುತ್ತದೆ. ಇದಕ್ಕೆ ಮಧ್ಯಕರ್ನಾಟಕ ಭಾಗದಲ್ಲಿ ‘ಬೇವು– ಬೆಲ್ಲ’ ಎಂಬ ನಾಮಧೇಯ.
ಇನ್ನು ಹಬ್ಬದಲ್ಲಿ ಶಾವಿಗೆ ಸವಿಯದಿದ್ದರೆ ಹಬ್ಬ ಅಪೂರ್ಣ. ಬಸಿದ ಹೊಸ ಶಾವಿಗೆಗೆ ‘ಬೇವು’, ತುಪ್ಪ, ಹಾಲು ಸೇರಿಸಿ ಸವಿದರೆ ನಾಲಿಗೆಯ ರುಚಿಮೊಗ್ಗು ಅರಳುತ್ತದೆ.
ಇನ್ನು ಕೆಲವರು ಮಣ್ಣಿನ ಮಡಕೆ ಇಟ್ಟು ಅದಕ್ಕೆ ಅಲಂಕಾರ ಮಾಡಿ ಅದರಲ್ಲಿ ನೀರು, ಬೇವಿನ ಮೊಗ್ಗು, ಹೂಗಳನ್ನು ಹಾಕಿ ಬೆಲ್ಲ, ಮಾವಿನಕಾಯಿ ಚೂರು, ಉತ್ತತ್ತಿ, ಬಾದಾಮಿ, ಕೊಬ್ಬರಿ ಸೇರಿಸಿ ಪಾನಕ ಮಾಡುತ್ತಾರೆ. ಪೂಜೆಯ ಬಳಿಕ ಅದನ್ನು ಮನೆಯವರೆಲ್ಲರೂ ಸವಿಯುತ್ತಾರೆ. ಬೇಸಿಗೆಯ ಬಿಸಿಲಿನ ತಾಪ ದೂರಮಾಡಿ ದೇಹವನ್ನು ತಂಪಾಗಿಸುವ ಈ ಪೇಯ ಆರೋಗ್ಯ ವೃದ್ಧಿಗೂ ಸಹಕಾರಿ.
ನವ ವಸಂತಕ್ಕೆ ಮುನ್ನುಡಿ ಬರೆಯುವ ಯುಗಾದಿಯ ಸಮಯದಲ್ಲಿ ರೈತನೂ ತನ್ನ ಜಮೀನಿನಲ್ಲಿ ಹೊಸ ಬೇಸಾಯ ಹೂಡುವ ಮೂಲಕ ಹೊಸ ಉಳುಮೆಗೆ ನಾಂದಿ ಹಾಡುತ್ತಾನೆ. ಮಲೆನಾಡು, ಅರೆಮಲೆನಾಡಿನ ಭಾಗಗಳಲ್ಲಿ ಹಬ್ಬದ ದಿನ ‘ಹೊಸ ಬೇಸಾಯ’ ಹೂಡುವುದು ಸಂಪ್ರದಾಯ. ಆಗತಾನೇ ಹಸಿರುಡಲು ಶುರುವಿಟ್ಟ ಭೂರಮೆಗೆ ಮಳೆ– ಬೆಳೆ ಚೆನ್ನಾಗಲಿ, ಮನೆಯ ಆದಾಯ ವೃದ್ಧಿಸಲಿ ಎಂದು ಉಳುವ ಯೋಗಿ ಮನದಲ್ಲೇ ಪ್ರಾರ್ಥಿಸುವ ಈ ಸಮಯ ನಿಸರ್ಗ ಹಾಗೂ ರೈತನ ಅನುಬಂಧವನ್ನು ಸಾರುತ್ತದೆ.
‘ಚಾಂದ್ರಮಾನ ಯುಗಾದಿ’ ಎಂಬ ವಿಶೇಷಣ ಅಂಟಿಸಿಕೊಂಡಿರುವ ಈ ಹಬ್ಬದಲ್ಲಿ ಚಂದ್ರನ ನೋಡದಿದ್ದರೆ ಹೇಗೆ? ಅಮವಾಸ್ಯೆಯ ಮರುದಿನ ಮುಸ್ಸಂಜೆ ಹೊತ್ತಲ್ಲಿ ಚಂದ್ರನ ನೋಡುವ ಸಂಪ್ರದಾಯವೇ ಸೋಜಿಗ. ಮೋಡದ ಮರೆಯಲ್ಲಿ ಅಡಗಿಕೊಂಡಿರುವ, ತೆಳು ಗೆರೆಯಂತೆ ಮೂಡುವ ಚಂದಿರನ ಹುಡುಕುವ ಸವಾಲು ಎಲ್ಲರ ಕಣ್ಣುಗಳಿಗೆ ಹೊಸ ಅನುಭವ ನೀಡುವುದೂ ದಿಟ.
ಸಂಜೆಯಾಗುತ್ತಿದ್ದಂತೆಯೇ ಹೊಸಬಟ್ಟೆ ತೊಟ್ಟು, ಮನೆ ಮಂದಿಯೆಲ್ಲ ರಸ್ತೆಗಿಳಿದು ಪಶ್ಚಿಮದ ಕಡೆಗೆ ದೃಷ್ಟಿ ಹರಿಸಿ ಚಂದ್ರಾಮನನ್ನು ಹುಡುಕುವುದೇ ಕಣ್ಣಿಗೂ, ಮನಕ್ಕೂ ಹಬ್ಬ. ಆ ಬೀದಿಯಲ್ಲಿ ಮೊದಲು ಚಂದ್ರನ ಕಂಡವರು ಬೀಗುತ್ತಾ ಇತರರಿಗೆ ತೋರಿಸುವ ಪರಿಯೇ ಚಂದ. ವಯಸ್ಸಾದವರು ಚಂದ್ರನ ಕಾಣದೆ ನಿರಾಸೆಯ ಭಾವದಲ್ಲಿ ಹಿಂದಿರುಗುತ್ತಾರೆ. ಹಿಂದೆ ಕೆಲ ಹಿರಿಯರು ಚಂದ್ರನನ್ನು ನೋಡಿ ಭವಿಷ್ಯದ ಮಾರುಕಟ್ಟೆ ಧಾರಣೆ ನಿರ್ಧರಿಸುತ್ತಿದ್ದರು. ಬೆಳ್ಳಿ, ಬಂಗಾರ, ದವಸ, ಧಾನ್ಯಗಳ ದರವನ್ನು ಚಂದ್ರ ಮೂಡಿರುವ ರೀತಿಯನ್ನು ನೋಡಿ ಹೇಳುತ್ತಿದ್ದರು. ಈ ಅಂದಾಜು ಲೆಕ್ಕಾಚಾರ ಇಂದಿಗೂ ನಿಗೂಢದ ಗೂಡಂತಿದೆ.
‘ಸುಖ–ದುಃಖಗಳನ್ನು ಸಮಾನಾಗಿ ಸ್ವೀಕರಿಸು’, ‘ನಿಸರ್ಗದೊಂದಿಗೆ ಸಹಜೀವನ ನಡೆಸು’ ಎಂಬ ಸಾರವನ್ನು ಹೊತ್ತು ಮತ್ತೆ ಬಂದಿದೆ ಯುಗಾದಿ. ಬೇವು– ಬೆಲ್ಲವ ಮೆದ್ದು, ಹೂರಣದ ಹೋಳಿಗೆಯ ಸವಿದು, ಚಂದಿರನ ಕಣ್ಮನ ತುಂಬಿಕೊಳ್ಳುತ್ತಲೇ ಮರೆಗೆ ಸರಿಯುವ ‘ಯುಗಾದಿ’ ಮರಳಿ ಮರಳಿ ಬರುತಿದೆ.. ಇಳೆಗೆ ಹೊಸ ಕಳೆಯ ತರುತಿದೆ...
ದಾವಣಗೆರೆಯ ವಿದ್ಯಾನಗರದ ನೂತನ ಕಾಲೇಜು ಮುಖ್ಯರಸ್ತೆ ಬದಿಯಲ್ಲಿನ ಮರದಲ್ಲಿ ಅರಳಿರುವ ವಿವಿಧ ಬಣ್ಣದ ಹೂವುಗಳು
ಚೈತ್ರದ ಚಿಗುರಿನೊಂದಿಗೆ ವಿವಿಧ ಗಿಡ–ಮರಗಳಲ್ಲಿ ಅರಳಿ ನಿಂತ ಹೂಗಳದ್ದೂ ಬಗೆಬಗೆಯ ಬಣ್ಣ. ಹಳದಿ ಬಿಳಿ ನೇರಳೆ ಗುಲಾಬಿ ಕೆಂಪು ಬಣ್ಣದ ಚಿತ್ತಾಕರ್ಷಕ ಹೂಗಳು ಇಳೆಯ ಕಳೆಯನ್ನು ಇಮ್ಮಡಿಗೊಳಿಸುವುದಲ್ಲದೇ ನೋಡುಗರ ಕಣ್ಮನವನ್ನೂ ತಣಿಸುತ್ತವೆ. ನೋಡನೋಡುತ್ತಿದ್ದಂತೆಯೇ ಎಲೆಗಳುದುರಿ ಮೊಗ್ಗು ಅರಳಿ ನಿಲ್ಲುತ್ತದೆ. ಕೆಲ ದಿನ ಬೋಳಾದ ಮರಗಳಲ್ಲಿ ನಳನಳಿಸುವ ಹೂಗಳ ರಾಶಿ ಅದೆಷ್ಟು ದುಂಬಿಗಳನ್ನು ಆಕರ್ಷಿಸುತ್ತದೋ? ದಾರಿಹೋಕರ ನೋಡುಗರ ಕಣ್ಣುಗಳನ್ನು ಆಕರ್ಷಿಸಿ ಮನಸಿಗೆ ಮುದ ನೀಡುತ್ತದೆ. ಅದಕ್ಕೇ ಕವಿಮನಗಳು ಹೇಳಿರುವುದು ಯುಗಾದಿ ಹೊಸತನ್ನು ಸೆಳೆದು ತರುತ್ತದೆ ಎಂದು.
ದಾವಣಗೆರೆಯ ಶಾಮನೂರು ರಸ್ತೆಯ ಲಕ್ಷ್ಮೀ ಫ್ಲೋರ್ ಮಿಲ್ ಬಳಿ ರಸ್ತೆ ಬದಿಯಲ್ಲಿನ ಮರದಲ್ಲಿ ಅರಳಿರುವ ಗುಲಾಬಿ ಬಣ್ಣದ ಹೂವುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.