ದಾವಣಗೆರೆ: ‘ಕೋಮುವಾದಿ ನಿಲುವನ್ನು ಹೊಂದಿರುವ ನರೇಂದ್ರ ಮೋದಿ ಅವರಿಗೆ ಪ್ರಧಾನಿಯನ್ನಾಗಿ ಮಾಡಲು ಬೆಂಬಲ ನೀಡಬಾರದು’ ಎಂದು ತೆಲಗು ದೇಶಂ ಪಾರ್ಟಿ (ಟಿಡಿಪಿ) ಹಾಗೂ ಜೆಡಿಯು ಪಕ್ಷದ ನಾಯಕರಿಗೆ ಉಮ್ಮತ್ ಚಿಂತಕರ ವೇದಿಕೆ ಆಗ್ರಹಿಸಿದೆ.
‘ಸಮಾಜವಾದಿ ಚಿಂತನೆಯುಳ್ಳಂತಹ ಟಿಡಿಪಿ ಹಾಗೂ ಜೆಡಿಯು ಪಕ್ಷಗಳು ಇವರ ಬೆಂಬಲಕ್ಕೆ ನಿಂತಿರುವುದು ದುರದೃಷ್ಟಕರ. ಮೋದಿ ಅವರಿಗೆ ಬೆಂಬಲ ನೀಡದಂತೆ ಪಕ್ಷದ ವರಿಷ್ಠರಿಗೆ ವೇದಿಕೆಯಿಂದ ಇ–ಮೇಲ್ ಮೂಲಕ ಪತ್ರ ಬರೆಲಾಗಿದೆ’ ಎಂದು ವೇದಿಕೆಯ ಅಧ್ಯಕ್ಷ ಅನೀಸ್ ಪಾಷ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ದ್ವೇಷ ಭಾಷಣಗಳು ಮುಸ್ಲಿಮರ ಮನಸ್ಸನ್ನು ಚುಚ್ಚಿವೆ. ಲೋಕಸಭಾ ಚುನಾವಣೆ ವೇಳೆ ರಾಜಸ್ಥಾನದಲ್ಲಿ ಭಾಷಣ ಮಾಡುವ ವೇಳೆ ನರೇಂದ್ರ ಮೋದಿ ಅವರು ‘ಮುಸಲ್ಮಾನರನ್ನು ನುಸುಳುಕೋರರು’ ಎಂದು ಹೇಳುವ ಮೂಲಕ ಮುಸ್ಲಿಂ ಸಮುದಾಯವನ್ನು ಅವಮಾನ ಮಾಡಿದ್ದಾರೆ. ನಾವು ನುಸುಳುಕೋರರಲ್ಲ, ನಮ್ಮನ್ನು ಪ್ರತ್ಯೇಕಿಸಬೇಡಿ’ ಎಂದು ಹೇಳಿದ ಅವರು, ಫಲಕವನ್ನು ಪ್ರದರ್ಶಿಸಿದರು.
‘ಇಷ್ಟೆಲ್ಲಾ ದ್ವೇಷ ಭಾಷಣ ಮಾಡಿದಾಗಲೂ ಚುನಾವಣಾ ಚಕಾರ ಎತ್ತಿಲಿಲ್ಲ. ನರೇಂದ್ರ ಮೋದಿ ಅವರಿಗೆ ನೋಟಿಸ್ ಕೊಡುವ ಬದಲು ಬಿಜೆಪಿಗೆ ನೋಟಿಸ್ ನೀಡಿದೆ. ಪೊಲೀಸ್ ಇಲಾಖೆಯೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ಹಿಜಾಬ್, ಅಜಾನ್, ಲವ್ ಜಿಹಾದ್, ಜಟ್ಕಾ ಕಟ್, ಹಲಾಲ್ ಕಟ್, ಮುಸ್ಲಿಮರು ವ್ಯಾಪಾರ ಮಾಡಬಾರದು ಎಂದು ತಡೆದಾಗ, ಮುಸ್ಲಿಮರ ಮೀಸಲಾತಿ ರದ್ದುಗೊಳಿಸಿದಾಗ ನರೇಂದ್ರ ಮೋದಿ ಅವರು ಚಕಾರವೆತ್ತದೆ ಇರುವುದು ಖಂಡನೀಯ. ಆದ್ದರಿಂದ ಯಾವುದೇ ಕಾರಣಕ್ಕೂ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಬಾರದು’ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ನಸೀಮಾ ಬಾನು, ಅಲ್ಲಾಭಕ್ಷ್, ಆದಿಲ್ ಖಾನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.