ADVERTISEMENT

ನಿರುದ್ಯೋಗ ತಾಂಡವವಾಡುತ್ತಿದೆ, ನಮ್ಮ ರಾಜ್ಯ ಮತ್ತೊಂದು ನೇಪಾಳ ಆಗಲಿದೆ: ಯತ್ನಾಳ

ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಳವಳ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 7:37 IST
Last Updated 26 ಸೆಪ್ಟೆಂಬರ್ 2025, 7:37 IST
ದಾವಣಗೆರೆಯ ನಿಟುವಳ್ಳಿಯ ಸಿದ್ದೇಶ್ವರ ಮಿಲ್ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ದೇವನಗರಿ ದಸರಾ ಮಹೋತ್ಸವದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು
ದಾವಣಗೆರೆಯ ನಿಟುವಳ್ಳಿಯ ಸಿದ್ದೇಶ್ವರ ಮಿಲ್ ಆವರಣದಲ್ಲಿ ಗುರುವಾರ ಏರ್ಪಡಿಸಿದ್ದ ದೇವನಗರಿ ದಸರಾ ಮಹೋತ್ಸವದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು   

ದಾವಣಗೆರೆ: ರಾಜ್ಯದಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ನಿರುದ್ಯೋಗ ತಾಂಡವವಾಡುತ್ತಿದೆ. ಹಿಂದೂಗಳ ಮೇಲೆ ದೌರ್ಜನ್ಯ ವ್ಯಾಪಕವಾಗಿ ನಡೆಯುತ್ತಿದೆ. ಕರ್ನಾಟಕ ಮತ್ತೊಂದು ನೇಪಾಳವಾಗುವ ಕಾಲ ದೂರವಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ನಿಟುವಳ್ಳಿಯ ಸಿದ್ದೇಶ್ವರ ಮಿಲ್ ಆವರಣದಲ್ಲಿ ಜೋಡಿ ಬನ್ನಿ ಮಹಾಂಕಾಳಿ ದುರ್ಗಾಪರಮೇಶ್ವರಿ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಗುರುವಾರ ಏರ್ಪಡಿಸಿದ್ದ ದೇವನಗರಿ ದಸರಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದ್ದಾರೆ. ಅವರ ಜಾತ್ಯತೀತ ನಿಲುವಿಗೆ ತಕರಾರು ಇಲ್ಲ. ಆದರೆ, ಒಂದು ಧರ್ಮದ ಜನರನ್ನು ಓಲೈಕೆ ಮಾಡುವುದಕ್ಕೆ ಆಕ್ಷೇಪವಿದೆ. ಗಣಪತಿ ಮೆರವಣಿಗೆಯ ಮೇಲೆ ಕಲ್ಲು ಬೀಳುತ್ತಿದ್ದರೂ ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹಾಳಾಗಿದೆ. ಮುಂಬರುವ ಚುನಾವಣೆಯಲ್ಲಿ ಇದಕ್ಕೆ ತಕ್ಕ ಉತ್ತರ ಸಿಗಲಿದೆ’ ಎಂದು ಹೇಳಿದರು.

ADVERTISEMENT

‘ಗಣಪತಿ ಉತ್ಸವಕ್ಕೆ ನೂರೆಂಟು ನಿರ್ಬಂಧ ವಿಧಿಸಲಾಗುತ್ತಿದೆ. ಹಿಂದೂ ಧರ್ಮದ ಹುಡುಗರು ನೃತ್ಯ ಮಾಡಲು ಅವಕಾಶ ಇರುವುದು ಗಣಪತಿ ಹಬ್ಬದಲ್ಲಿ ಮಾತ್ರ. ಈ ಹಬ್ಬಕ್ಕೆ ಡಿ.ಜೆ ನಿಷೇಧ ಹೇರುವುದು ಅಕ್ಷಮ್ಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇವರಿಗೆ ಐ ಲವ್’ ಅಂತ ಹೇಳುವುದು ನಮ್ಮ ಧರ್ಮವಲ್ಲ. ದೇವರಿಗೆ ಇಂತಹ ಪದಗಳನ್ನು ಬಳಸುವುದು ಅಶಾಂತಿ ಸೃಷ್ಟಿಸುವ ಹುನ್ನಾರ. ಇಂತಹವರ ವಿರುದ್ಧ ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಕಿಡಿಕಾರಿದರು.

ಪಂಚಮಸಾಲಿ ಸಮುದಾಯದ ಮುಖಂಡ ಅಶೋಕ್ ಗೋಪನಾಳ್, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್‌, ಚಿಂದೋಡಿ ಚಂದ್ರಧರ, ಜಗದೀಶ್, ಎಸ್.ಟಿ. ವೀರೇಶ್, ಹನಗವಾಡಿ ವೀರೇಶ್, ಶ್ರೀನಿವಾಸ್ ದಾಸ್ ಕರಿಯಪ್ಪ, ಗುಂಡಿ ಪುಷ್ಪಾ ಸಿದ್ದೇಶ್ ಹಾಜರಿದ್ದರು.

ನವರಾತ್ರಿಯ 9 ದಿನವೂ ಧಾರ್ಮಿಕ ಕೈಂಕರ್ಯ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಉಪವಾಸ ಮಾಡುತ್ತಿದ್ದಾರೆ. ಅವರ ಧಾರ್ಮಿಕ ಶ್ರದ್ಧ ಅನುಕರಣೀಯ

–ಜಿ.ಎಂ. ಸಿದ್ದೇಶ್ವರ ಕೇಂದ್ರದ ಮಾಜಿ ಸಚಿವ

ಅಧಿಕಾರಿಗಳನ್ನು ಬಿಟ್ಟು ಬೆದರಿಸುವ ಜಿಲ್ಲಾ ಉಸ್ತುವಾರಿ ಸಚಿವರ ವರ್ತನೆಯಿಂದ ಯಾರೊಬ್ಬರೂ ಹೆದರಿಲ್ಲ. ಮುಂದಿನ ದಿನಗಳಲ್ಲಿ ಹಿಂದೂ ವಿರೋಧಿಗಳನ್ನು ಮನೆಗೆ ಕಳುಹಿಸುತ್ತೇವೆ

–ಬಿ.ಪಿ.ಹರೀಶ್ ಶಾಸಕ ಹರಿಹರ

ಬಸನಗೌಡ ಪಾಟೀಲ ಯತ್ನಾಳ ಬೇರೆ ರೀತಿಯ ರಾಜಕಾರಣಿ ಅಲ್ಲ. ಅವರ ನೇರ ನಿಷ್ಠೂರ ವ್ಯಕ್ತಿತ್ವವನ್ನು ಜನರು ಒಪ್ಪಿದ್ದಾರೆ. ಭವಿಷ್ಯದಲ್ಲಿ ರಾಜ್ಯ ಮುನ್ನಡೆಸುವ ಶಕ್ತಿ ಅವರಿಗಿದೆ

–ಜಯಮೃತ್ಯುಂಜಯ ಸ್ವಾಮೀಜಿ

ವೇದಿಕೆ ಹಂಚಿಕೊಂಡ ನಾಯಕರು

ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರೊಂದಿಗೆ ಪಕ್ಷದ ನಾಯಕರು ವೇದಿಕೆ ಹಂಚಿಕೊಂಡರು. ಪ್ರತಿಯೊಬ್ಬರು ಭಾಷಣದಲ್ಲಿ ಯತ್ನಾಳ ಅವರ ಗುಣಗಾನ ಮಾಡಿದರು. ‘ಹಿಂದೂ ಹುಲಿ ಯತ್ನಾಳ್‌ಜಿ’ ಎಂಬ ಘೋಷಣೆ ಕೂಗಿದ ಶಾಸಕ ಬಿ.ಪಿ. ಹರೀಶ್ ‘ಸಮಸ್ತ ಕರ್ನಾಟಕ ಅವರೊಂದಿಗೆ ಇದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.