ದಾವಣಗೆರೆ: ಜಾಗತಿಕ ಮಟ್ಟದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇದೆ. ಪೈಪೋಟಿ ಎದುರಿಸಿ ಮುನ್ನುಗ್ಗಿದರೆ ಭವಿಷ್ಯದ ದಾರಿ ಸುಲಭವಾಗುತ್ತದೆ. ಓದಿನ ಜೊತೆ ವ್ಯವಹಾರ ಜ್ಞಾನ, ವೃತ್ತಿ ಕೌಶಲ್ಯ, ಸಂವಹನ ಕಲೆ ರೂಢಿಸಿಕೊಳ್ಳಬೇಕು ಎಂದು ನೇತ್ರ ತಜ್ಞ ಡಾ.ಶ್ರೀನಿವಾಸ ಜೋಶಿ ಸಲಹೆ ನೀಡಿದರು.
ನಗರದ ಹೊರವಲಯದ ದಾವಣಗೆರೆ ವಿಶ್ವವಿದ್ಯಾನಿಲಯ ವ್ಯವಹಾರ ನಿರ್ವಹಣೆ ಅಧ್ಯಯನ ವಿಭಾಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಉದ್ಯಮ ವಿಶ್ಲೇಷಣೆ ಸ್ಪರ್ಧೆ ಉತ್ಕರ್ಷ-2025 ಉದ್ಘಾಟಿಸಿ ಮಾತನಾಡಿದರು.
‘ತಂತ್ರಜ್ಞಾನ ವ್ಯಾಪಕವಾಗುತ್ತಿದೆ. ಕೃತಕ ಬುದ್ಧಿಮತ್ತೆ ಮತ್ತು ಡಿಜಿಟಲ್ ಪರಿವರ್ತನೆಗಳತ್ತ ಗಮನ ಹರಿಸಬೇಕು. ಪ್ರತಿ ಉದ್ಯಮದ ಮೇಲೆ ಇವು ಪರಿಣಾಮ ಬೀರುವ ಸಾಧ್ಯತೆ ಇದೆ’ ಎಂದರು.
‘ವಿದ್ಯಾರ್ಥಿಗಳು ಓದು, ಅಂಕಗಳಿಗಷ್ಟೇ ಆದ್ಯತೆ ನೀಡದೆ ದೈಹಿಕ ಮತ್ತು ಮಾನಸಿಕ ಆರೋಗ್ಯದತ್ತಲೂ ಗಮನ ಕೊಡಬೇಕು. ಉತ್ತಮ ಆಹಾರ ಕ್ರಮ, ವ್ಯಾಯಾಮಗಳ ಜೊತೆ ಒತ್ತಡ ನಿವಾರಿಸಿಕೊಳ್ಳಬೇಕು. ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಅರಿತು ಪ್ರಗತಿಯನ್ನು ಮೌಲ್ಯಮಾಪನ ಮಾಡಿಕೊಳ್ಳಬೇಕು’ ಎಂದು ಹೇಳಿದರು.
ಬೆಂಗಳೂರಿನ ಫಿನ್‌ಟೆಕ್ ಏಕ್ಸ್‌ಪರ್ಟ್ ಸಂಸ್ಥೆಯ ಉಪಾಧ್ಯಕ್ಷ ಮಂಜುನಾಥ ಉದ್ಯಾವರ, ವಿಜ್ಞಾನ ನಿಕಾಯದ ಡೀನ್ ಪ್ರೊ.ಯು.ಎಸ್.ಮಹಾಬಲೇಶ್ವರ ಮಾತನಾಡಿದರು. ಪ್ರೊ.ಜೆ.ಕೆ.ರಾಜು, ಪ್ರಾಧ್ಯಾಪಕರಾದ ಸುನಿತಾ, ಆಸೀಫ್ ಉಲ್ಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.