ದಾವಣಗೆರೆ: ಯೂರಿಯಾ ರಸಗೊಬ್ಬರವನ್ನು ಹೊರ ಜಿಲ್ಲೆಗೆ ಪೂರೈಸಿದ ಸಗಟು ಮಾರಾಟಗಾರರ ಪರವಾನಗಿಯನ್ನು ಜಿಲ್ಲಾಡಳಿತ ರದ್ದುಪಡಿಸಿದೆ. ರೈತರಿಗೆ ನಿಗದಿಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದ ಚಿಲ್ಲರೆ ಅಂಗಡಿಗಳ ಪರವಾನಗಿಯನ್ನು ಅಮಾನಲ್ಲಿ ಇಟ್ಟಿದೆ.
ಜಿಲ್ಲೆಯ ಸಗಟು ರಸಗೊಬ್ಬರ ಮಾರಾಟಗಾರರ ಗೋದಾಮು ಮತ್ತು ಚಿಲ್ಲರೆ ರಸಗೊಬ್ಬರ ಮಾರಾಟಗಾರರ ಅಂಗಡಿಗಳ ಮೇಲೆ ಕಂದಾಯ, ಪೊಲೀಸ್ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ವ್ಯಾಪಾರಸ್ಥರು ಲೋಪ ಎಸಗಿದ್ದು ಪತ್ತೆಯಾಗಿದೆ. 8 ಸಗಟು ಮಾರಾಟಗಾರರ ಪರವಾನಗಿ ರದ್ದಾಗಿದ್ದು, 5 ಚಿಲ್ಲರೆ ರಸಗೊಬ್ಬರ ಮಾರಾಟಗಾರರ ಪರವಾನಗಿಯನ್ನು ಅಮಾನತು ಮಾಡಲಾಗಿದೆ.
ಹಂಚಿಕೆಯಾದ ರಸಗೊಬ್ಬರವನ್ನು ಸಗಟು ಮಾರಾಟಗಾರರು ಚಿಲ್ಲರೆ ಅಂಗಡಿಗಳಿಗೆ ಪೂರೈಕೆ ಮಾಡಬೇಕು. ಆದರೆ, ಕೆಲ ಸಗಟು ಮಾರಾಟಗಾರರು ಹೊರಜಿಲ್ಲೆಗೆ ರಸಗೊಬ್ಬರ ಸರಬರಾಜು ಮಾಡಿದ್ದಾರೆ. ಹೀಗೆ ಲೋಪ ಎಸಗಿದ ದಾವಣಗೆರೆಯ ಆಶಾಪೂರಿ, ರಾಥೋಡ್, ಮಲ್ಲಿಕಾರ್ಜುನ, ಕಿಶೋರ್ ಫರ್ಟಿಲೈಸರ್ಸ್, ದಿಬ್ಬದಹಳ್ಳಿ ಆಗ್ರೋ ಸರ್ವೀಸ್, ಶ್ರೀನಿವಾಸ ಆಗ್ರೋ ಟ್ರೇಡರ್ಸ್, ಚನ್ನಗಿರಿ ತಾಲ್ಲೂಕಿನ ನಲ್ಲೂರು ವೀರಭದ್ರೇಶ್ವರ ಫರ್ಟಿಲೈಸರ್ಸ್ ಹಾಗೂ ಗೋಪನಹಳ್ಳಿ ವೀರಭದ್ರೇಶ್ವರ ಟ್ರೇಡರ್ಸ್ ಪರವಾನಗಿಯನ್ನು ರದ್ದುಪಡಿಸಲಾಗಿದೆ.
ನಿಗದಿಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿದ ದಾವಣಗೆರೆಯ ಭೂಮಿಕ ಆಗ್ರೋ ಫರ್ಟಿಲೈಸರ್ಸ್, ವಿನಿತ ಆಗ್ರೋ ಏಜೆನ್ಸಿ, ಕುಮಾರ್ ಆಗ್ರೋ ಏಜೆನ್ಸಿ, ಆನಗೋಡು ಜೆನುಕಲ್ಲು ಸಿದ್ದೇಶ್ವರ ಟ್ರೇಡರ್ಸ್ ಮತ್ತು ಸೂರ್ಯ ಆಗ್ರೋ ಎಂಟರ್ ಪ್ರೈಸಸ್ ಚಿಲ್ಲರೆ ಅಂಗಡಿಗಳ ಪರವಾನಗಿ ಅಮಾನತ್ತಿನಲ್ಲಿ ಇಡಲಾಗಿದೆ.
‘ಜಿಲ್ಲೆಯಲ್ಲಿ ಶೀತದ ವಾತಾವರಣ ತಗ್ಗಿದೆ. ರಸಗೊಬ್ಬರ ಹಾಕುವ ಹಂತ ಮೀರಿ ಮೆಕ್ಕೆಜೋಳ ಬೆಳೆಯುತ್ತಿದೆ. ಭತ್ತದ ನಾಟಿ ಚಟುವಟಿಕೆ ಆರಂಭವಾಗಿದ್ದು, ನಾಟಿಗೂ ಮುನ್ನ ಯೂರಿಯಾ ಹಾಕುವುದು ವಾಡಿಕೆ. ಬೇಡಿಕೆಗಿಂತ ಹೆಚ್ಚು ಯೂರಿಯಾ ದಾಸ್ತಾನು ಇದ್ದು, ರೈತರು ಆತಂಕಪಡುವ ಅಗತ್ಯವಿಲ್ಲ. ಶಿವಮೊಗ್ಗ ಜಿಲ್ಲೆಯಿಂದ ಹೆಚ್ಚುವರಿ ರಸಗೊಬ್ಬರ ತರಿಸಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಕಂದಾಯ, ಪೊಲೀಸ್, ಕೃಷಿ ಇಲಾಖೆಯ ಜಂಟಿ ತಪಾಸಣೆ ದಾಖಲೆ ಪರಿಶೀಲಿಸಿದಾಗ ಪತ್ತೆಯಾದ ಲೋಪ ಬೇಡಿಕೆಗಿಂತ ಹೆಚ್ಚು ರಸಗೊಬ್ಬರ ದಾಸ್ತಾನು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.