ಜಗಳೂರು: ಪಟ್ಟಣದಲ್ಲಿ ಶುಕ್ರವಾರ ಅಂಗಡಿಗಳ ಮುಂದೆ ಯೂರಿಯಾ ರಸಗೊಬ್ಬರ ಪಡೆಯಲು ರೈತರು ದಿನವಿಡೀ ಉದ್ದದ ಸಾಲುಗಳಲ್ಲಿ ಮುಗಿಬಿದ್ದಿದ್ದರು.
ರೈತರ ಒತ್ತಡದ ಮೇರೆಗೆ ಮೂರು ದಿನಗಳ ನಂತರ ಪಟ್ಟಣಕ್ಕೆ ಶುಕ್ರವಾರ 6 ಲಾರಿಗಳಲ್ಲಿ 200 ಟನ್ ಯೂರಿಯಾ ಬರುತ್ತಿದ್ದಂತೆ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ರೈತರು ಖರೀದಿಗೆ ಅಂಗಡಿ ಮುಂದೆ ಮುಗಿಬಿದ್ದಿದ್ದರು. ಇದರಿಂದ ನೂಕು ನುಗ್ಗಲು ಉಂಟಾಯಿತು. ಪೊಲೀಸರು ಮಧ್ಯ ಪ್ರವೇಶಿಸಿ ಸರದಿ ಸಾಲುಗಳ ವ್ಯವಸ್ಥೆ ಮಾಡಿ ರೈತರಿಗೆ ವಿತರಿಸಲು ಕ್ರಮ ಕೈಗೊಂಡರು.
ಯೂರಿಯಾ ಸಿಗದೆ ಆಕ್ರೋಶಗೊಂಡಿದ್ದ ರೈತರು ರಸಗೊಬ್ಬರ ಅಂಗಡಿಗಳ ಮುಂದೆ ಮೂರು ದಿನದ ಹಿಂದೆ ಪ್ರತಿಭಟನೆ ನಡೆಸಿದ್ದಾಗ ಉದ್ವಿಗ್ನ ಪರಿಸ್ಥಿತಿ ನಿರ್ಮಣವಾಗಿತ್ತು. ಉಪ ವಿಭಾಗಾಧಿಕಾರಿ ಸಂತೋಷ್ ನೇತೃತ್ವದಲ್ಲಿ ಅಧಿಕಾರಿಗಳು ಭೇಟಿ ನೀಡಿ, ತಾಳ್ಮೆ ವಹಿಸಲು ರೈತರಲ್ಲಿ ಮನವಿ ಮಾಡಿಕೊಂಡಿದ್ದರು.
ಕೃಷಿ ಸಚಿವ ಚಲುವರಾಯಸ್ವಾಮಿ ಅವರೊಂದಿಗೆ ಶಾಸಕ ಬಿ. ದೇವೇಂದ್ರಪ್ಪ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿ ತಾಲ್ಲೂಕಿಗೆ ಅಗತ್ಯ ಯೂರಿಯಾ ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದರು.
‘200 ಟನ್ ಯೂರಿಯಾ ಬಂದಿದ್ದು ಪಟ್ಟಣದ 3 ಖಾಸಗಿ ರಸಗೊಬ್ಬರ ಮಾರಾಟ ಕೇಂದ್ರಗಳಿಗೆ ಹಾಗೂ ತಾಲ್ಲೂಕಿನ ಬಿಳಿಚೋಡು, ಪಲ್ಲಾಗಟ್ಟೆ ಮತ್ತು ಸೊಕ್ಕೆ ಗ್ರಾಮದ ಖಾಸಗಿ ವಿತರಣಾ ಕೇಂದ್ರಗಳಿಗೂ ಸಹ ಯೂರಿಯಾ ವಿತರಣೆ ಮಾಡಲಾಗಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ಅವರು ‘ಪ್ರಜಾವಾಣಿ‘ಗೆ ಮಾಹಿತಿ ನೀಡಿದರು.
ತಾಲ್ಲೂಕಿನ ಕಸಬಾ ಮತ್ತು ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಪ್ರಸಕ್ತ ಮುಂಗಾರು ಮಳೆ ಸ್ವಲ್ಪ ತಡವಾಗಿ ಸುರಿದ ಪರಿಣಾಮ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ ಬೆಳೆಗೆ ಯೂರಿಯಾ ಬೇಡಿಕೆ ಹೆಚ್ಚಿದ್ದು, ನಿತ್ಯ ಸಾವಿರಾರು ರೈತರು ರಸಗೊಬ್ಬರ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.
ಕೃಷಿ ಸಚಿವರಿಗೆ ಶಾಸಕರು ಇಲ್ಲಿನ ವಸ್ತುಸ್ಥಿತಿಯ ಕುರಿತು ಮನವರಿಕೆ ಮಾಡಿದ್ದರಿಂದ ಹೆಚ್ಚುವರಿ ಯೂರಿಯಾ ಪೂರೈಕೆಯಾಗಿದೆ. ತಾಲ್ಲೂಕಿನಲ್ಲಿ ಅಂದಾಜು 4 ಸಾವಿರ ಟನ್ ಯೂರಿಯಾ ವಿತರಿಸಲಾಗಿದೆಶ್ವೇತಾ ಸಹಾಯಕ ನಿರ್ದೇಶಕಿ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.