ADVERTISEMENT

3.29 ಲಕ್ಷ ಜಾನುವಾರಿಗೆ ಸೆ.1ರಿಂದ ಲಸಿಕೆ

ಜಿಲ್ಲೆಗೆ 3.28 ಡೋಸ್ ಲಸಿಕೆ* ಒಂದು ತಿಂಗಳು ಪೂರ್ತಿ ಕಾರ್ಯಕ್ರಮ

ಡಿ.ಕೆ.ಬಸವರಾಜು
Published 19 ಆಗಸ್ಟ್ 2022, 3:52 IST
Last Updated 19 ಆಗಸ್ಟ್ 2022, 3:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಜಾನುವಾರುಗಳಿಗೆ ಕಾಣಿಸಿಕೊಳ್ಳುವ ಕಾಲು–ಬಾಯಿ ರೋಗಕ್ಕೆ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 1ರಿಂದ 20 ದಿನಗಳ ಕಾಲ ಉಚಿತ ಲಸಿಕಾಕಾರಣ ಕಾರ್ಯ ನಡೆಯಲಿದ್ದು, ಈ ಸಂಬಂಧ ಸಿದ್ಧತೆ ನಡೆಯುತ್ತಿದೆ.

‘ಎತ್ತು, ಆಕಳು, ಎಮ್ಮೆ, ಕೋಭ ಮತ್ತು ಕರುಗಳು ಸೇರಿ ಜಿಲ್ಲೆಯಲ್ಲಿ 3.29 ಲಕ್ಷ ಜಾನುವಾರುಗಳಿವೆ. ಸೆಪ್ಟೆಂಬರ್‌ 20ರವರೆಗೆ ಲಸಿಕಾಕರಣ ನಡೆಯಲಿದ್ದು, 20 ರಿಂದ 30ರವರೆಗೆ ಕೂಂಬಿಂಗ್ ಮೂಲಕ ಲಸಿಕೆ ಹಾಕದೇ ಉಳಿದಿರುವ ಜಾನುವಾರುಗಳಿಗೆ ರೈತರ ಕೊಟ್ಟಿಗೆಗಳಿಗೆ ತೆರಳಿ ಲಸಿಕೆ ಹಾಕಲಾಗುವುದು’ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ ಸುಂಕದ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳೆದ ಬಾರಿ ಶೇ 91ಕ್ಕೂ ಹೆಚ್ಚು ಲಸಿಕೆ ಹಾಕಲಾಗಿದೆ. ಈ ಬಾರಿ ಶೇ 90 ಕ್ಕೂ ಅಧಿಕ ಪ್ರಮಾಣದ ಗುರಿ ಇಟ್ಟುಕೊಳ್ಳಲಾಗಿದೆ. ಆಗಸ್ಟ್ ತಿಂಗಳ ಕೊನೆಯ ವೇಳೆಗೆ 3.28 ಲಕ್ಷ ಡೋಸ್ ಲಸಿಕೆ ಬರುವ ನಿರೀಕ್ಷೆ ಇದೆ. ದಿನಪತ್ರಿಕೆ ಹಾಗೂಕರಪತ್ರಗಳಮೂಲಕಗ್ರಾಮ ಪಂಚಾಯಿತಿ ಮಟ್ಟದಲ್ಲಿ ರೈತರಿಗೆ ಲಸಿಕೆ ಕುರಿತು ಜಾಗೃತಿಮೂಡಿಸಲಾಗುವುದು’ಎಂದು ಮಾಹಿತಿ ನೀಡಿದರು.

ADVERTISEMENT

‘ಪ್ರತಿ ಜಾನುವಾರಿನ ಕಿವಿಗೆ ಟ್ಯಾಗ್ ಹಾಕಿ ಒಂದು ಸಂಖ್ಯೆ ನೀಡುತ್ತಿದ್ದು, ಇಲಾಖೆಯ ಸಿಬ್ಬಂದಿ ಆ ಸಂಖ್ಯೆಯನ್ನು ಆ್ಯಪ್‌ನಲ್ಲಿ ನೋಂದಣಿ ಮಾಡುತ್ತಾರೆ. ಲಸಿಕೆ ಹಾಕಿದ ಬಳಿಕ ಅದು ನಮೂದಾಗುತ್ತದೆ’ ಎಂದು ಅವರು ತಿಳಿಸಿದರು.

ಮೈಕ್ರೋಪ್ಲಾನ್: ‘ಲಸಿಕಾಕರಣ ಕಾರ್ಯಕ್ಕೆ 200ರಿಂದ 300 ಜಾನುವಾರುಗಳಿಗೆ ಒಂದು ವಾರ್ಡ್‌ನಂತೆ ಜಿಲ್ಲೆಗಳಲ್ಲಿ 300 ಕ್ಕೂ ಹೆಚ್ಚು ವಾರ್ಡ್‌ಗಳನ್ನು ಸಿದ್ಧಪಡಿಸಿ ಯೋಜನೆ ರೂಪಿಸಲಾಗುವುದು. 300 ಸಿಬ್ಬಂದಿಯ ಜೊತೆಗೆ ಮೈತ್ರಿ ಕಾರ್ಯಕರ್ತರನ್ನು ಬಳಸಿಕೊಳ್ಳಲಿದ್ದು, ಅವರಿಗೂ ತರಬೇತಿ ನೀಡಲಾಗಿದೆ’ ಎಂದರು.

‘ನಾಟಿ ಔಷಧಿಯಲ್ಲಿ ನಂಬಿಕೆ, ಲಸಿಕೆ ಹಾಕಿದರೆ ಗರ್ಭಾಪಾತವಾಗುತ್ತದೆ ಎನ್ನುವ ಮೂಢನಂಬಿಕೆಯಿಂದ ರೈತರು ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಲು ಹಿಂಜರಿಯುತ್ತಾರೆ. ಕಳೆದ ವರ್ಷ ಜಿಲ್ಲೆಯ 13ರಿಂದ 14 ಗ್ರಾಮಗಳಲ್ಲಿ ಕಾಲುಬಾಯಿ ಜ್ವರ ಕಾಣಿಸಿಕೊಂಡು ಜಾನುವಾರು ಮೃತಪಟ್ಟಿದ್ದವು. ಆದ್ದರಿಂದ ರೈತರು ತಪ್ಪದೇ ಲಸಿಕೆ ಹಾಕಿಸಬೇಕು’ ಎಂದು ಮನವಿ ಮಾಡಿದರು.

ರೋಗದ ಲಕ್ಷಣಗಳು

‘ಜಾನುವಾರಿಗೆ ತೀವ್ರ ಜ್ವರ, ಬಾಯಲ್ಲಿ ಜೊಲ್ಲು, ನಾಲಿಗೆಯಲ್ಲಿ ಉಣ್ಣು, ಕಾಲು ಗೊರಸಿನಲ್ಲಿ ಗಾಯವಾಗುವುದು ಕಾಲು–ಬಾಯಿ ಲಕ್ಷಣಗಳಾಗಿದ್ದು, ರೋಗ ಲಕ್ಷಣ ಕಾಣಿಸಿಕೊಂಡಾಗ ಹಾಲು ಕಡಿಮೆಯಾಗುತ್ತಿದೆ. ಮೇವು ತಿನ್ನಲು ಆಗುವುದಿಲ್ಲ. ಇದರಿಂದಾಗಿ ಸುಸ್ತು ಕಾಣಿಸಿಕೊಳ್ಳುತ್ತದೆ’ ಎಂದು ಡಾ.ಚಂದ್ರಶೇಖರ ಸುಂಕದ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.