ADVERTISEMENT

ಕೋವಿಡ್‌ ಲಸಿಕೆ: ಶೇ 58 ಮಂದಿಗೆ ಮೊದಲ ಡೋಸ್‌ ಸಿಕ್ಕಿಲ್ಲ

ಜಿಲ್ಲೆಯಲ್ಲಿ ಕೋವಿಡ್‌ ನಿರೋಧಕ ಲಸಿಕೆ ಎರಡನೇ ಡೋಸ್ ಪಡೆದವರ ಪ್ರಮಾಣ ಶೇ 7 ಮಾತ್ರ

ಬಾಲಕೃಷ್ಣ ಪಿ.ಎಚ್‌
Published 8 ಜುಲೈ 2021, 19:30 IST
Last Updated 8 ಜುಲೈ 2021, 19:30 IST
ಮಹಾಂತೇಶ ಬೀಳಗಿ
ಮಹಾಂತೇಶ ಬೀಳಗಿ   

ದಾವಣಗೆರೆ: ಜಿಲ್ಲೆಯಲ್ಲಿ ಇನ್ನೂ ಕೋವಿಡ್‌ ನಿರೋಧಕ ಲಸಿಕೆ ಮೊದಲ ಡೋಸ್‌ ಹಾಕಿಸಿಕೊಳ್ಳದವರ ಪ್ರಮಾಣ ಸುಮಾರು ಶೇ 58 ಇದೆ. ಎರಡೂ ಡೋಸ್‌ಗಳನ್ನು ಕೇವಲ ಶೇ 7 ರಷ್ಟು ಮಂದಿ ಹಾಕಿಸಿಕೊಂಡಿದ್ದಾರೆ.

18 ವರ್ಷದ ದಾಟಿದವರ ಸಂಖ್ಯೆ 12 ಲಕ್ಷ ಇದೆ. ಅದರಲ್ಲಿ ಬುಧವಾರದ ವರೆಗೆ 4,89,494 ಮಂದಿ (ಶೇ 40.07) ಮಾತ್ರ ಲಸಿಕೆ ಹಾಕಿಸಿಕೊಂಡಿದ್ದಾರೆ.87,346 ಮಂದಿ (ಶೇ 7.27) ಎರಡನೇ ಡೋಸ್‌ ಹಾಕಿಸಿಕೊಂಡಿದ್ದಾರೆ. ಶಾಮನೂರು ಕುಟುಂಬದಿಂದ ಮತ್ತು ಆಸ್ಪತ್ರೆಗಳಲ್ಲಿ 25 ಸಾವಿರ ಮಂದಿ ಮೊದಲ ಲಸಿಕೆ, 1 ಸಾವಿರ ಮಂದಿ ಎರಡನೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದೆಲ್ಲ ಸೇರಿದರೂ ಮೊದಲ ಡೋಸ್‌ ಪಡೆದವರ ಪ್ರಮಾಣ ಶೇ 42 ಅಷ್ಟೇ ಆಗಿದೆ.

ಆರಂಭದಲ್ಲಿ 60 ವರ್ಷ ಮೇಲಿನವರಿಗೆ, 45 ವರ್ಷ ದಾಟಿದ ಬೇರೆ ರೋಗಗಳಿರುವವರಿಗೆ ಮಾತ್ರ ಲಸಿಕೆ ನೀಡಲು ಅವಕಾಶ ಇತ್ತು. ಆಗ ಜನ ಬರುತ್ತಿರಲಿಲ್ಲ. ಬಳಿಕ 45 ವರ್ಷ ದಾಟಿದ ಎಲ್ಲರಿಗೂ ಲಸಿಕೆ ನೀಡಲು ಮಾರ್ಗಸೂಚಿ ಬಂತು. 45 ವರ್ಷ ದಾಟಿದವರ ಸಂಖ್ಯೆ 4 ಲಕ್ಷ ಇದೆ. ಅದರಲ್ಲಿ ಶೇ 90ರಷ್ಟು ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ. 18 ವರ್ಷದಿಂದ 44 ವರ್ಷದವರೆಗಿನವರೇ 8 ಲಕ್ಷ ಮಂದಿ ಇದ್ದಾರೆ. ಅವರಿಗೆ ಎಲ್ಲರಿಗೂ ನೀಡಲು ಅವಕಾಶ ಇರಲಿಲ್ಲ. ಪೋರ್ಟಲ್‌ನಲ್ಲಿ ಬ್ಲಾಕ್‌ ಮಾಡಲಾಗಿತ್ತು. ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ ಮಾತ್ರ ನೀಡಲು ಅವಕಾಶ ಇತ್ತು. ಹಾಗಾಗಿ 18ರಿಂದ 44 ವರ್ಷದವರಿಗೆ ಲಸಿಕೆಯಲ್ಲಿ ಸಹಜವಾಗಿಯೇ ಕಡಿಮೆಯಾಗಿದೆ ಎಂದು ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯಾಧಿಕಾರಿ ಡಾ.ಕೆ.ಎಸ್‌. ಮೀನಾಕ್ಷಿ ತಿಳಿಸಿದರು.

ADVERTISEMENT

‘ಸರ್ಕಾರದಿಂದ ಕಾಲಕಾಲಕ್ಕೆ ಬರುವ ಮಾರ್ಗಸೂಚಿಗಳ ಅನ್ವಯ ನಾವು ಲಸಿಕೆ ನೀಡಬೇಕಾಗುತ್ತದೆ. ಶೇ 50ರಷ್ಟು ಲಸಿಕೆಯನ್ನು ಕಾಲೇಜು ಮಕ್ಕಳಿಗೆ ಮೀಸಲಿಡಬೇಕು. ಶೇ 50ರಷ್ಟು ಸಾರ್ವಜನಿಕರಿಗೆ ನೀಡಬೇಕು. ಸಾರ್ವಜನಿಕರಿಗೆ ನೀಡುವಾಗ ಎರಡನೇ ಡೋಸ್‌ ಪಡೆಯುವವರಿಗೆ ಆದ್ಯತೆ ನೀಡಬೇಕು ಎಂಬುದು ಈಗಿನ ಮಾರ್ಗಸೂಚಿಯಾಗಿದೆ ಅದರಂತೆ ನೀಡುತ್ತಿದ್ದೇವೆ’ ಎಂದು ಮಾಹಿತಿ ನೀಡಿದರು.

‘ನಮ್ಮಲ್ಲಿ ಲಸಿಕೆ ಆರಂಭದಲ್ಲಿ ಸ್ವಲ್ಪ ವೇಸ್ಟೇಜ್‌ ಆಗಿದ್ದವು. ಈಗ ವೇಸ್ಟೇಜ್‌ ಇಲ್ಲ. ಪ್ರತಿ ಶೀಷೆಯಲ್ಲಿ 10 ಡೋಸ್‌ ನೀಡಬಹುದು. ಆದರೆ ಕೆಲವು ಶೀಷೆಗಳು 11 ಡೋಸ್ ನೀಡುವಷ್ಟು ದೊಡ್ಡದಿರುತ್ತವೆ. ಹಾಗಾಗಿ ಬಂದ ಶೀಷೆ ಲೆಕ್ಕದಲ್ಲಿ ನೀಡಬೇಕಿದ್ದಕ್ಕಿಂತ ಶೇ 3ರಿಂದ 4ರಷ್ಟು ಹೆಚ್ಚುವರಿಯಾಗಿ ಆಗಿದೆ. ಕೇಂದ್ರ ಸರ್ಕಾರದಿಂದ ಲಸಿಕೆಗಳನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ಜಿಲ್ಲೆಗಳಿಗೆ ಹಂಚಿಕೆ ಮಾಡುತ್ತದೆ. ದಾವಣಗೆರೆ ಜಿಲ್ಲೆಗೆ ಬಂದಿರುವಷ್ಟು ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗರಾಜ್ ವಿವರಿಸಿದರು.

***

ಜಿಲ್ಲೆಗೆ ಎಷ್ಟು ಲಸಿಕೆ ಕಳುಹಿಸಿದ್ದಾರೋ ಅಷ್ಟನ್ನು ಒಂದೂ ವ್ಯರ್ಥವಾಗದಂತೆ ಹಾಕಿಸಿದ್ದೇವೆ. ಜಾಸ್ತಿ ಲಸಿಕೆ ಪೂರೈಸಬೇಕು ಎಂಬ ಬೇಡಿಕೆ ನಿರಂತರವಾಗಿ ಇಟ್ಟಿದ್ದೇವೆ.

-ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.