ADVERTISEMENT

ವಾಜಪೇಯಿ ನಿಸ್ವಾರ್ಥ ರಾಜಕಾರಣಿ: ಶಾಸಕ ಎಸ್.ಎ. ರವೀಂದ್ರನಾಥ್ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2020, 16:45 IST
Last Updated 16 ಆಗಸ್ಟ್ 2020, 16:45 IST
ಎಸ್‌.ಎ.ರವೀಂದ್ರನಾಥ್‌
ಎಸ್‌.ಎ.ರವೀಂದ್ರನಾಥ್‌   

ದಾವಣಗೆರೆ: ಅಟಲ್ ಬಿಹಾರಿ ವಾಜಪೇಯಿ ಅವರು ಚಾಣಾಕ್ಷತೆ ಜತೆಗೆ ಉತ್ತಮ ವಾಗ್ಮಿ ಆಗಿದ್ದರು. ಅವರ ಮಾತಿಗೆ ವಿರೋಧ ಪಕ್ಷದವರು ಕೂಡ ತಲೆದೂಗುತ್ತಿದ್ದರು.ಅಟಲ್ ಬಿಹಾರಿ ವಾಜಪೇಯಿ ಸ್ವಚ್ಛ ಹಾಗೂ ನಿಸ್ವಾರ್ಥದ ರಾಜಕಾರಣ ಮಾಡಿದವರು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಬಣ್ಣಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಟಲ್ ಬಿಹಾರಿ ವಾಜಪೇಯಿ ಅವರ ಎರಡನೇ ವರ್ಷದ ಪುಣ್ಯತಿಥಿ ಆಚರಣೆ ವೇಳೆ ಮಾತನಾಡಿದರು.

ದೇಶ ಮೊದಲು ಪಕ್ಷ ಆಮೇಲೆ ಎಂಬುದು ಅವರ ನಂಬಿಕೆ ಆಗಿತ್ತು. ಭಾರತೀಯ ಜನಸಂಘ ಭಾರತೀಯ ಜನತಾ ಪಕ್ಷದಲ್ಲಿ ವಿಲೀನವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

‘ಧಾರ್ಮಿಕ, ಆಧ್ಯಾತ್ಮ, ಸಾಂಸ್ಕೃತಿಕ ಎಲ್ಲವನ್ನೂ ಅಳವಡಿಸಿಕೊಂಡು ಉತ್ತಮ ರಾಜಕಾರಣ ಮಾಡಿದ್ದ ವಾಜಪೇಯಿ, ತಾವೆಂದೂ ಪ್ರಧಾನಿಯಾಗುವ ಹಂಬಲ ವ್ಯಕ್ತಪಡಿಸಲಿಲ್ಲ. ಮೊರಾರ್ಜಿ ದೇಸಾಯಿ, ಅಡ್ವಾಣಿ, ಚಂದ್ರಶೇಖರ್, ಬಾಬು ಜಗಜೀವನರಾಂ ಅವರ ಹೆಸರು ಪ್ರಸ್ತಾಪಿಸುತ್ತಿದ್ದರು’ ಎಂದು ಸ್ಮರಿಸಿದರು.

‘ಪಕ್ಷವನ್ನು ಶಕ್ತಿಯುತವಾಗಿ ಬೆಳೆಸಿದ್ದರು. ಎನ್‌ಡಿಎ ಮೈತ್ರಿಕೂಟವನ್ನು ಸಮರ್ಥವಾಗಿ ನಿಭಾಯಿಸಿದ್ದರು. ‘ಹಳ್ಳಿಗಳಲ್ಲಿಯೇ ಕೆಲಸ ಮಾಡಿ, ದೆಹಲಿಗೆ ಹೋದರೆ ಹದಗೆಡುತ್ತೀರಿ’ ಎಂದು ಮುಖಂಡರಿಗೆ ಹೇಳುತ್ತಿದ್ದರು. ನಾಲ್ಕನೆ ಬಾರಿಗೆ ಪ್ರಧಾನಿ ಆಗಿದ್ದರೆ ಗಂಗಾ-ಕಾವೇರಿ ನದಿ ಜೋಡಣೆ ಕಾರ್ಯಸಾಧು ಆಗಿರುತ್ತಿತ್ತು’ ಎಂದು ಹೇಳಿದರು.

ಶಾಸಕ ಪ್ರೊ.ಎಂ. ಲಿಂಗಣ್ಣ ಮಾತನಾಡಿ, ‘ವಾಜಪೇಯಿ ಪಕ್ಷದ ಸಂಘಟನೆ ಹಾಗೂ ರಾಜಕಾರಣದಲ್ಲಿ ಬದ್ಧತೆ ಉಳಿಸಿಕೊಂಡಿದ್ದರು. ಅವರು ನಿರ್ವಹಿಸಿದ ಕೆಲಸಗಳನ್ನು ಕಾರ್ಯಕರ್ತರು ಉಳಿಸಬೇಕು. ಅವರ ಗುಣ, ಕಾರ್ಯಶೀಲತೆಯನ್ನು ಪಾಲನೆ ಮಾಡಬೇಕು’ ಎಂದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ‘ವಾಜಪೇಯಿಯವರು ತಾವೇ ಪ್ರಧಾನಿ ಹುದ್ದೆ ಅಲಂಕರಿಸುವ ಕುರಿತಂತೆ ಗುಂಪುಗಾರಿಕೆ ನಡೆಸಲಿಲ್ಲ. ಬಿಜೆಪಿ ದುಸ್ಥಿತಿಯಲ್ಲಿದ್ದ ಹಂತದಲ್ಲೇ ಭವಿಷ್ಯದಲ್ಲಿ 300 ಸೀಟು ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದರು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ನಿಕಟಪೂರ್ವ ಅಧ್ಯಕ್ಷ ಯಶವಂತರಾವ್ ಜಾಧವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.