ADVERTISEMENT

ಅಂಗಾಂಗ ಹೋಲಿಸಿ ಹೇಳುವ ಜಾತಿ ಪದ್ಧತಿಯಲ್ಲಿ ತಾರತಮ್ಯ ಇಲ್ಲ: ಸಿರಿಗೆರೆ ಶ್ರೀ

ವಾಲ್ಮೀಕಿ ಜಾತ್ರೆ ಧರ್ಮಸಭೆಯಲ್ಲಿ ಸಿರಿಗೆರೆ ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 4:36 IST
Last Updated 10 ಫೆಬ್ರುವರಿ 2023, 4:36 IST
ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಪ್ರಸನ್ನಾನಂದ ಶ್ರೀ, ವಚನಾನಂದ ಶ್ರೀ, ಶಾಂತವೀರ ಶ್ರೀ ಸೇರಿದಂತೆ ನಾಡಿನ ವಿವಿಧ ಮಠಾಧೀಶರಿದ್ದರು.
ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಧರ್ಮಸಭೆಯಲ್ಲಿ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಪ್ರಸನ್ನಾನಂದ ಶ್ರೀ, ವಚನಾನಂದ ಶ್ರೀ, ಶಾಂತವೀರ ಶ್ರೀ ಸೇರಿದಂತೆ ನಾಡಿನ ವಿವಿಧ ಮಠಾಧೀಶರಿದ್ದರು.   

ಹರಿಹರ: ‘ಶಿರ, ಭುಜ, ತೊಡೆ, ಕಾಲುಗಳನ್ನು ಹೋಲಿಸಿ ಜಾತಿಗಳನ್ನು ಗುರುತಿಸುವ ಸಂಪ್ರದಾಯದಲ್ಲಿ ತಾರತಮ್ಯ ಇಲ್ಲ’ ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಗುರುಪೀಠದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಮೇಲ್ವರ್ಗ, ಕೆಳವರ್ಗ ಎಂದು ಗುರುತಿಸುವ ಬದಲು ಅವರವರ ವೃತ್ತಿಯನ್ನಾಧರಿಸಿ ಇಂತಹ ಉದಾಹರಣೆ ನೀಡಲಾಗಿದೆ. ಮೇಲ್ವರ್ಗದವರನ್ನು ತಲೆಗೆ, ಕ್ಷತ್ರಿಯರನ್ನು ಭುಜಕ್ಕೆ, ವ್ಯಾಪಾರಿಗಳನ್ನು ತೊಡೆಗೆ, ಶೂದ್ರರನ್ನು ಕಾಲಿಗೆ ಹೋಲಿಸಿರುವುದು ಶೋಷಣೆ ಮಾಡುವ ಕಾರಣಕ್ಕೆ ಅಲ್ಲ. ಈ ಎಲ್ಲ ಅಂಗಗಳಿದ್ದರೆ ಒಬ್ಬ ವ್ಯಕ್ತಿ ಪರಿಪೂರ್ಣವಾಗಿರಲು ಸಾಧ್ಯ. ಹಿರಿಯರಿಗೆ ಕಾಲು ಮುಟ್ಟಿ ನಮಸ್ಕರಿಸುತ್ತಾರೆಯೇ ಹೊರತು ತಲೆ ಮುಟ್ಟಿ ನಮಸ್ಕರಿಸುವುದಿಲ್ಲ’ ಎಂದು ಸ್ವಾಮೀಜಿ ವಿವರಿಸಿದರು.

ADVERTISEMENT

‘ಮಠಾಧೀಶರ ನಡುವೆ ಹಿಂದುಳಿದ ಮುಂದುವರಿದವರೆಂಬ ಗುರುತಿಸುವಿಕೆ ಇರಬಾರದು. ಮಠಾಧೀಶರೆಂದರೆ ಎಲ್ಲರೂ ಒಂದೇ. ಅವರಲ್ಲಿ ಹಿಂದುಳಿದವರು, ಮುಂದುವರಿದಿರುವ ಮಠಾಧೀಶರು ಎಂಬ ಕಲ್ಪನೆ ಬಂದರೆ ಅದು ಬಸವಣ್ಣನವರ ತತ್ವಕ್ಕೆ ವಿರುದ್ಧವಾಗುತ್ತದೆ’ ಎಂದರು.

‘ದಲಿತ ಶ್ರೀಗಳೆಂದರೆ ಮತ್ತೆ ಶೋಷಣೆಗೆ ಅವಕಾಶ ಸಿಕ್ಕ ಹಾಗಾಗುತ್ತದೆ. ಎಲ್ಲ ಮಠಾಧೀಶರು ಒಂದೇ ಎಂಬ ಭಾವ ಇರಲಿ. ತಲೆ ಎತ್ತಿ ಬಾಳುವ ಹಕ್ಕು ಎಲ್ಲರಿಗೂ ಇದೆ. ಈ ಹಿಂದೆ ಅಜ್ಞಾನದ ಕಾಲದಲ್ಲಿ ತಾರತಮ್ಯ ಇತ್ತು. ಆದರೆ ಈಗ ಅಂತಹ ವಾತಾವರಣವಿಲ್ಲ’ ಎಂದರು.

‘ವಾಲ್ಮೀಕಿ ಸಮುದಾಯದವರಿಗೆ ದೇವಸ್ಥಾನಗಳಲ್ಲಿ ಗೋತ್ರ ಯಾವುದೆಂದು ಕೇಳಿದರೆ ಅಂಜುವ ಅಗತ್ಯವಿಲ್ಲ. ಮಹರ್ಷಿ ವಾಲ್ಮೀಕಿ ಗೋತ್ರ ಎಂದು ಹೆಮ್ಮೆಯಿಂದ ಹೇಳಿ. ಹಿಂದುಳಿದವರು ಗೋತ್ರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಬಸವಣ್ಣವರು 12ನೇ ಶತಮಾನದಲ್ಲೇ ತಮ್ಮ ವಚನಗಳ ಮೂಲಕ ಸಾರಿದ್ದಾರೆ’ ಎಂದರು.

‘ಉದ್ಯಮ ಸ್ಥಾಪನೆಗೆ ರೈತರಿಂದ ಜಮೀನು ಸ್ವಾಧೀನ ಪಡಿಸಿಕೊಳ್ಳುವಾಗ ಜಮೀನು ನೀಡಿದ ರೈತರನ್ನು ಉದ್ಯಮದಲ್ಲಿ ಪಾಲುದಾರರಾಗಿ ಸೇರಿಸಿಕೊಂಡು, ನಿಯಮಿತವಾಗಿ ಆದಾಯ ನೀಡಬೇಕು. ಉದ್ಯಮ ಬಂದ್ ಆದರೆ, ಆ ಜಮೀನನ್ನು ರೈತರಿಗೆ ಮತ್ತೆ ವಾಪಸ್ ನೀಡುವಂತಹ ಕಾನೂನು ರಚಿಸಲು ಈಚೆಗೆ ಮಠಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಸ್ವಾಮೀಜಿ ಹೇಳಿದರು.

‘ನಾಯಕ ಸಮುದಾಯದವರೆಂದರೆ ಕೆಚ್ಚೆದೆಯ ಸಿಂಹವಿದ್ದ ಹಾಗೆ. ಈ ಜಾತ್ರೆಯಲ್ಲಿ ತೇರನ್ನು ಎಳೆದಿದ್ದೀರಿ.ತೇರಿನ ನಾಲ್ಕು ಚಕ್ರಗಳಂತೆ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಆಧ್ಯಾತ್ಮಿಕ ಪ್ರಗತಿಯನ್ನು ಸಾಧಿಸುವ ನಿಜವಾದ ತೇರನ್ನು ಎಳೆಯುವುದು ಬಾಕಿ ಇದೆ’ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

‘ವಾಲ್ಮೀಕಿ, ಸಿಂಧೂರ ಲಕ್ಷ್ಮಣ, ರಾಜಾ ವೆಂಕಟಪ್ಪ ನಾಯಕ, ಬೇಡರ ಕಣ್ಣಪ್ಪ, ಮದಕರಿ ನಾಯಕ ಅವರಂತಥವರ ವಂಶಸ್ಥರು ನಾವೆಂಬ ಹೆಮ್ಮೆ ನಾಯಕ ಸಮುದಾದಯದವರಿಗೆ ಇರಬೇಕು’ ಎಂದು ಹರಿಹರ ಪಂಚಮಸಾಲಿ ಮಠದ ವಚನಾನಂದ ಶ್ರೀ ಹೇಳಿದರು.

ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ, ಭೋವಿ ಪೀಠದ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ, ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಶ್ರೀ, ಮಾಚಿದೇವ ಪೀಠದ ಬಸವ ಮಡಿವಾಳ ಮಾಚಿದೇವ ಶ್ರೀ, ಬಂಜಾರ ಪೀಠದ ಸರ್ದಾರ್ ಸೇವಾಲಾಲ್ ಶ್ರೀ, ಜೇವರ್ಗಿಯ ಸಿದ್ದಬಸವ, ಅಥಣಿ ಗಚ್ಚಿನ ಮಠದ ಶಿವಬಸವ ಶ್ರೀ, ಪುಣ್ಯಕೋಟಿ ಮಠದ ಬಾಲಯೋಗಿ ಜಗದೀಶ್ವರ ಶ್ರೀ ಸೇರಿದಂತೆ ನಾಡಿನ ವಿವಿಧ ಮಠಾಧೀಶರು ಮಾತನಾಡಿದರು. ಜಾತ್ರಾ ಸಮಿತಿ ಅಧ್ಯಕ್ಷ ಎಸ್.ವಿ. ರಾಮಚಂದ್ರ, ಸಂಚಾಲಕ ಕೆ.ಪಿ. ಪಾಲಯ್ಯ ಇದ್ದರು.

‘ದಲಿತ, ಹಿಂದುಳಿದವರೆಂದು ಹೇಳಿಕೊಳ್ಳಿ’
‘ಹಿಂದುಳಿದ, ದಲಿತ ಸಮುದಾಯದ ಗುರುಪೀಠಗಳ ಮಠಾಧೀಶರು ತಾವು ದಲಿತ, ಹಿಂದುಳಿದವರೆಂದು ಹೇಳಿಕೊಳ್ಳಬೇಕಾಗುತ್ತದೆ. ಶೋಷಿತ ವರ್ಗದವರ ಮಠಗಳಾಗಿದ್ದರಿಂದ ಹಾಗೆ ಹೇಳಿಕೊಳ್ಳುವುದರಲ್ಲಿ ತಪ್ಪಿಲ್ಲ’ ಎಂದು ಹೊಸದುರ್ಗದ ಕುಂಚಿಟಿಗ ಸಂಸ್ಥಾನದ ಶಾಂತವೀರ ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.