ADVERTISEMENT

ಹೊನ್ನಾಳಿ| ಸಮೃದ್ಧ ಸಾಹಿತ್ಯ ಕೊಟ್ಟವರು ಮಹರ್ಷಿ ವಾಲ್ಮೀಕಿ: ಶಾಸಕ ಶಾಂತನಗೌಡ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 5:24 IST
Last Updated 8 ಅಕ್ಟೋಬರ್ 2025, 5:24 IST
ಹೊನ್ನಾಳಿ ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿಯವರ ಜಯಂತಿಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು.
ಹೊನ್ನಾಳಿ ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ನಡೆದ ಮಹರ್ಷಿ ವಾಲ್ಮೀಕಿಯವರ ಜಯಂತಿಯಲ್ಲಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿದರು.   

ಹೊನ್ನಾಳಿ: ಮಹರ್ಷಿ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯ ಬರೆಯುವ ಮೂಲಕ ದೇಶಕ್ಕೆ ಸಮೃದ್ಧವಾದ ತತ್ವ ಆದರ್ಶಗಳನ್ನು ಕೊಟ್ಟು ಹೋಗಿದ್ದಾರೆ. ನಮ್ಮ ದೇಶಕ್ಕಿರುವ ಭವ್ಯವಾದ ಇತಿಹಾಸ ಜಗತ್ತಿನ ಯಾವ ದೇಶಕ್ಕೂ ಇಲ್ಲ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.

ಮಂಗಳವಾರ ಪಟ್ಟಣದ ಕನಕದಾಸ ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಮಾತ್ರ ಬಡವರ ಪರ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವ ಸಮುದಾಯಕ್ಕೂ ಅನ್ಯಾಯ ಮಾಡಿಲ್ಲ. ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡುವ ಪ್ರಸ್ತಾಪವನ್ನು ಅಂದಿನ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಕಳುಹಿಸಿ ಕೊಟ್ಟಿತ್ತು. ಅಲ್ಲಿಂದ ಕೆಲವೊಂದು ಸ್ಪಷ್ಟನೆ ಬಯಸಿ ರಾಜ್ಯ ಸರ್ಕಾರಕ್ಕೆ ವಾಪಸ್ ಕಳುಹಿಸಿದೆ. ಈಗ ಸಿದ್ದರಾಮಯ್ಯ ಅದನ್ನು ಶಿಫಾರಸ್ಸು ಮಾಡುತ್ತಿದ್ದಾರೆ ಅಷ್ಟೆ. ಕಾಗಿನೆಲೆ ಕನಕಗುರು ಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿಯವರು ಇತ್ತೀಚೆಗೆ ಎಸ್‌ಟಿ ಸಮುದಾಯಕ್ಕೆ ಕೊಟ್ಟಿರುವ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿ ಆ ಜನಾಂಗಕ್ಕೆ ಅನ್ಯಾಯವಾಗದಂತೆ ಕುರುಬರಿಗೆ ಎಸ್‌ಟಿ ಮೀಸಲಾತಿ ಕೊಡಿಸುವ ಆಲೋಚನೆಯಲ್ಲಿದ್ದಾರೆ ಎಂದರು.

ADVERTISEMENT

ರಾಜ್ಯ ಬಯಲು ಸೀಮೆ ಪ್ರದೇಶಾಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಮಹರ್ಷಿ ವಾಲ್ಮೀಕಿ ಆದರ್ಶ ಸಮಾಜವನ್ನು ಕಟ್ಟಿಕೊಡುವ ಕೆಲಸವನ್ನು ತಮ್ಮ ಮಹಾಕಾವ್ಯದಲ್ಲಿ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ವಾಲ್ಮೀಕಿಯವರ ಕುರಿತು ಉಪನ್ಯಾಸ ಮಾಡುವವರು ವಾಲ್ಮೀಕಿ ಒಬ್ಬ ದರೋಡೆಕೋರ, ಕಳ್ಳ, ಬೇಟೆಗಾರ, ಮುನಿಗಳ ಮಗ ಎಂದು ಹೇಳುವ ಮೂಲಕ ಗೊಂದಲ ಸೃಷ್ಟಿಸಿದ್ದಾರೆ. ಆದ್ದರಿಂದ ನಾನು ಅವರಿಗೆ ಹೇಳ ಬಯಸುವುದೇನೆಂದರೆ, ವಾಲ್ಮೀಕಿಯವರ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಇರುವ ಗೊಂದಲಗಳನ್ನು ನಿವಾರಿಸಬೇಕು ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಸುನಿಲ್‍ಕುಮಾರ್ ಮನವಿ ಮಾಡಿದರು.

ತಹಶೀಲ್ದಾರ್ ರಾಜೇಶ್ ಕುಮಾರ್, ತಾಲ್ಲೂಕು ವಾಲ್ಮೀಕಿ ಸಮುದಾಯದ ಅಧ್ಯಕ್ಷ ನಾಗೇಂದ್ರಪ್ಪ ಮಾತನಾಡಿದರು. ಪ್ರಾಂಶುಪಾಲ ಬಸವರಾಜಪ್ಪ ಉಪನ್ಯಾಸ ನೀಡಿದರು.  ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಮುಖಂಡರಾದ ಎಚ್.ಎ. ಉಮಾಪತಿ, ಟಿಎಪಿಸಿಎಂಎಸ್ ಅಧ್ಯಕ್ಷ ಶೇಖರಪ್ಪ, ಬಿಇಒ ಕೆ.ಟಿ. ನಿಂಗಪ್ಪ, ಬೆಸ್ಕಾಂ ಎಇಇ ಜಯಣ್ಣ, ಮುಖ್ಯ ಪಶುವೈದ್ಯಾಧಿಕಾರಿ ರಾಜೇಶ್, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಉಮಾ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಇಲಾಖೆಯ ಆಡಳಿತಾಧಿಕಾರಿ ಉಮಾದೇವಿ, ವಾರ್ಡ್‍ನ್ ಸತೀಶ, ಮಂಜುಳಾ, ಸುಶೀಲಮ್ಮ, ಜಯಶೀಲಾ ನೇಕಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.