ADVERTISEMENT

ನಡೆಯದ ನಡ್ಡಾ–ವಾಲ್ಮೀಕಿ ಶ್ರೀ ಭೇಟಿ

ಸ್ವಲ್ಪ ಹೊತ್ತು ಕಾದು ಹರಪನಹಳ್ಳಿಗೆ ತೆರಳಿದ ಪ್ರಸನ್ನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಜನವರಿ 2023, 19:45 IST
Last Updated 6 ಜನವರಿ 2023, 19:45 IST
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠಕ್ಕೆ ಪ್ರಸನ್ನಾನಂದ ಸ್ವಾಮೀಜಿ ಅನುಪಸ್ಥಿತಿಯಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಭೇಟಿ ನೀಡಿ ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರು. ಸಚಿವ ಬೈರತಿ ಬಸವರಾಜ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್, ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್, ಸಂಸದ ಜಿ.ಎಂ. ಸಿದ್ದೇಶ್ವರ ಇದ್ದರು. –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್

ದಾವಣಗೆರೆ: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಿಗ್ಗೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿರುವ ವಿವಿಧ ಸಮುದಾಯಗಳ ಮಠಗಳಿಗೆ ತೆರಳಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಅವರ ಭೇಟಿ ಸಾಧ್ಯವಾಗಲಿಲ್ಲ.

ವಾಲ್ಮೀಕಿ ಜಾತ್ರೆಯ ಅಂಗವಾಗಿ ಹರಪನಹಳ್ಳಿಯಲ್ಲಿ ಸಮಾಜದ ಸಭೆಯಲ್ಲಿ ಭಾಗವಹಿಸಬೇಕಿರುವುದರಿಂದ ನಿಗದಿಗಿಂತ ಮೊದಲೇ ವಾಲ್ಮೀಕಿ ಪೀಠಕ್ಕೆ ಬರುವಂತೆ ಪ್ರಸನ್ನಾನಂದ ಸ್ವಾಮೀಜಿ ಅವರು ನಡ್ಡಾ ಅವರಿಗೆ ಸಂದೇಶ ರವಾನಿಸಿದ್ದರು. ಆದರೆ, ಹರಿಹರ ತಾಲ್ಲೂಕಿನ ಬೆಳ್ಳೂಡಿಯ ಕನಕಗುರು ಪೀಠದ ನಿರಂಜನಾನಂದ ಪುರಿ ಶ್ರೀಗಳೂ ತಮ್ಮ ಮಠಕ್ಕೆ ಬೇಗನೆ ಬರುವಂತೆ ಕೋರಿದ್ದರಿಂದ ನಡ್ಡಾ ಅವರು ಮೊದಲು ಕನಕ ಗುರುಪೀಠದ ಶಾಖಾ ಮಠಕ್ಕೆ ತೆರಳಿದರು.

ತಾವು ಸೂಚಿಸಿದ ಸಮಯದಿಂದ ಒಂದಷ್ಟು ಹೊತ್ತು ಕಾದರೂ ನಡ್ಡಾ ಅವರು ಮಠಕ್ಕೆ ಬಾರದೇ ಇರುವುದರಿಂದ ಬೇಸತ್ತ ಪ್ರಸನ್ನಾನಂದ ಸ್ವಾಮೀಜಿ, ಹರಪನಹಳ್ಳಿಗೆ ತೆರಳಿದರು. ವಾಲ್ಮೀಕಿ ಪೀಠದಿಂದ ಸ್ವಾಮೀಜಿ ತೆರಳಿದ ಮಾಹಿತಿ ಲಭಿಸಿದ್ದರಿಂದ ನಡ್ಡಾ ಅವರು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ADVERTISEMENT

ಸ್ವಾಮೀಜಿ ಇಲ್ಲದಿದ್ದರೂ ನಂತರ ವಾಲ್ಮೀಕಿ ಪೀಠಕ್ಕೆ ಭೇಟಿ ನೀಡಿದ ನಡ್ಡಾ, ಲಿಂಗೈಕ್ಯ ಪುಣ್ಯಾನಂದಪುರಿ ಶ್ರೀಗಳ ಗದ್ದುಗೆ ದರ್ಶನ ಪಡೆದು ಪೂಜೆ ಸಲ್ಲಿಸಿ ದಾವಣಗೆರೆಗೆ ವಾಪಸಾದರು.

ಜೆ.ಪಿ.ನಡ್ಡಾ ಅವರ ಪ್ರವಾಸದಲ್ಲಿ ಮೊದಲು ಪಂಚಮಸಾಲಿ ಪೀಠ, ನಂತರ ಕಾಗಿನೆಲೆ ಪೀಠ ಹಾಗೂ ಮೂರನೆಯದಾಗಿ ವಾಲ್ಮೀಕಿ ಗುರುಪೀಠಕ್ಕೆ ಭೇಟಿ ನೀಡಲು ಕಾರ್ಯಕ್ರಮ ನಿಗದಿಯಾಗಿತ್ತು. ಇಬ್ಬರೂ ಸ್ವಾಮೀಜಿಗಳ ಮನವಿಯ ಮೇರೆಗೆ ಕಾರ್ಯಕ್ರಮದಲ್ಲಿ ಅಲ್ಪ ಬದಲಾವಣೆ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.