ADVERTISEMENT

ವೀರಭದ್ರೇಶ್ವರ ಸ್ವಾಮಿ ರಥೋತ್ಸವ: ಗುಗ್ಗುಳ ಸೇವೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2024, 5:27 IST
Last Updated 23 ಏಪ್ರಿಲ್ 2024, 5:27 IST
ದಾವಣಗೆರೆಯ ಹಳೇಪೇಟೆಯಲ್ಲಿ ಸೋಮವಾರ ನಡೆದ ವೀರಭದ್ರೇಶ್ವರ ದೇವರ ಗುಗ್ಗಳ ಮತ್ತು ಅಗ್ನಿಕುಂಡ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕೆಂಡ ಹಾಯುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್
ದಾವಣಗೆರೆಯ ಹಳೇಪೇಟೆಯಲ್ಲಿ ಸೋಮವಾರ ನಡೆದ ವೀರಭದ್ರೇಶ್ವರ ದೇವರ ಗುಗ್ಗಳ ಮತ್ತು ಅಗ್ನಿಕುಂಡ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಕೆಂಡ ಹಾಯುತ್ತಿರುವುದು –ಪ್ರಜಾವಾಣಿ ಚಿತ್ರ/ ಸತೀಶ ಬಡಿಗೇರ್   

ದಾವಣಗೆರೆ: ನಗರದ ಹಳೇಪೇಟೆಯ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ಗುಗ್ಗಳ ಮತ್ತು ಕೆಂಡ ತುಳಿಯುವ ಕಾರ್ಯಕ್ರಮ ಸೋಮವಾರ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಉತ್ಸವದ ಹಿನ್ನೆಲೆಯಲ್ಲಿ ದೇವಸ್ಥಾನದ ಆವರಣವನ್ನು ತೆಂಗಿನ ಗರಿ, ಮಾವಿನ ಚಪ್ಪರ, ಬಾಳೆಕಂದು, ಬಗೆ ಬಗೆಯ ಹೂವುಗಳು ಮತ್ತು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು. ದೇಗುಲ ಮುಂಭಾಗದಲ್ಲಿ ಅಗ್ನಿಕುಂಡವನ್ನು ನಿರ್ಮಿಸಲಾಗಿತ್ತು.

‘ಶ್ರೀ ವೀರಭದ್ರೇಶ್ವರ ಮಹಾರಾಜಕೀ ಜೈ’, ‘ಹರ ಹರ ಮಹಾದೇವ’ ಘೋಷಣೆಗಳು ಕೇಳಿಬಂದವು. ವಾದ್ಯಗಳ ಸದ್ದು ಆವರಿಸಿತ್ತು. ಭಕ್ತರು ಬರಿಗಾಲಿನಲ್ಲಿ ದೈವ ಸನ್ನಿಧಿಗೆ ಬಂದಿದ್ದರು. ಹಣ್ಣು, ತೆಂಗಿನಕಾಯಿ, ಹೂವು, ಎಡೆಯನ್ನು ತಂದಿದ್ದರು. ಕೆಲವರು ವೀರಭದ್ರ ದೇವರ ಹಲಗೆಯೊಂದಿಗೆ ಬಂದಿದ್ದರು. ಮಹಿಳೆಯರು, ಮಕ್ಕಳು ಸೇರಿ ಕುಟುಂಬದ ಸದಸ್ಯರೆಲ್ಲ ಭಾಗಿಯಾಗಿದ್ದರು.

ADVERTISEMENT

ಪುರವಂತರು ದೇಗುಲಕ್ಕೆ ಆಗಮಿಸಿ ಮೊದಲು ಸ್ವಾಮಿಯ ದರ್ಶನ ಪಡೆದರು. ನಂತರ ದೇವರ ನಿಶಾನಿಯನ್ನು ಹರಾಜು ಮಾಡಲಾಯಿತು. ಅಗ್ನಿ ಕುಂಡದಲ್ಲಿ ಮೊದಲು ಪುರವಂತರು ಕೆಂಡ ತುಳಿದರು. ನಂತರ ದೇವರ ಮೂರ್ತಿಯನ್ನು ಹೊತ್ತುಕೊಂಡವರು ಅಗ್ನಿಕುಂಡದ ಮೂಲಕ ಹಾದು ಹೋದರು. ಗುಗ್ಗಳದ ಕೊಡವನ್ನು ತರಲಾಯಿತು.

ನಂತರ ಹರಕೆ ಹೊತ್ತಿದ್ದ ಭಕ್ತರು ಒಬ್ಬೊಬ್ಬರಾಗಿ ವೀರಭದ್ರ ದೇವರ ಸ್ಮರಣೆ ಮಾಡುತ್ತ ಕೆಂಡ ತುಳಿದರು. ಅವರಲ್ಲಿ ಹಲವರು ಮಹಿಳೆಯರೂ ಇದ್ದರು. ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಪ್ರತಿ ವರ್ಷದಂತೆ ಈ ಬಾರಿಯೂ ಕೆಂಡ ತುಳಿದು ಹರಕೆ ತೀರಿಸಿದರು. ಅವರ ಮಕ್ಕಳೂ ಅವರನ್ನು ಅನುಸರಿಸಿದರು. ಡಾ.ಪ್ರಭಾ ಮಲ್ಲಿಕಾರ್ಜುನ್, ಉದ್ಯಮಿ ಎಸ್.ಎಸ್. ಗಣೇಶ್ ಇನ್ನಿತರ ಗಣ್ಯರು ಪಾಲ್ಗೊಂಡರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಲ್ಲಿಕಾರ್ಜುನ್, ನಾಡಿನಲ್ಲಿ ಒಳ್ಳೆಯ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದಾಗಿ ತಿಳಿಸಿದರು. ದೇವಸ್ಥಾನದ ನೂತನ ಕಲ್ಯಾಣ ಮಂಟಪ ನಿರ್ಮಾಣಕ್ಕೆ ದಾವಣಗೆರೆ ದಕ್ಷಿಣ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ₹3 ಕೋಟಿ ಅನುದಾನ ನೀಡಿದ್ದಾರೆ ಎಂದು ತಿಳಿಸಿದರು.

ಶ್ರೀ ವೀರಭದ್ರೇಶ್ವರ ಸ್ವಾಮಿಯ ರಥೋತ್ಸವ ಮಂಗಳವಾರ ಸಂಜೆ 7 ಗಂಟೆಗೆ ನಡೆಯಲಿದೆ. ಬುಧವಾರ ರಾತ್ರಿ 8ಕ್ಕೆ ಓಕಳಿ ಉತ್ಸವ ಹಮ್ಮಿಕೊಳ್ಳಲಾಗಿದೆ.

ಪಲ್ಲಕ್ಕಿ ಉತ್ಸವ: ಶ್ರೀ ವೀರಭದ್ರೇಶ್ವರ ಸ್ವಾಮಿಯ ಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನಡೆಯಿತು. ಪುಷ್ಪಾಲಂಕೃತವಾಗಿದ್ದ ಪಲ್ಲಕ್ಕಿಯು ದೇವಸ್ಥಾನದಿಂದ ಹೊರಟು ಶ್ರೀ ಕನ್ನಿಕಾ ಪರಮೇಶ್ವರಿ ರಸ್ತೆ, ಪಾತಾಳೇಶ್ವರ ದೇವಸ್ಥಾನ ರಸ್ತೆ, ಕಾಯಿಪೇಟೆ, ವಿಜಯಲಕ್ಷ್ಮೀ ರಸ್ತೆ, ಚೌಕಿಪೇಟೆ, ಮಹಾರಾಜ ಪೇಟೆ, ಕಾಳಿಕಾ ದೇವಿ ರಸ್ತೆ, ಅನೇಕೊಂಡ ಪೇಟೆ ಮೂಲಕ ದೇವಸ್ಥಾನಕ್ಕೆ ವಾಪಸಾಯಿತು. ನಂತರ ಗುಗ್ಗಳ ಕೊಡಕ್ಕೆ ಹಾಲು ಉಕ್ಕಿಸಲಾಯಿತು.

ದಾವಣಗೆರೆಯ ಹಳೇಪೇಟೆಯಲ್ಲಿ ಸೋಮವಾರ ನಡೆದ ವೀರಭದ್ರೇಶ್ವರ ದೇವರ ಗುಗ್ಗಳ ಮತ್ತು ಅಗ್ನಿಕುಂಡ ಮಹೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರ ಪುತ್ರಿ ಶ್ರೇಷ್ಠ (ಕೆಂಪು ಬಣ್ಣದ ಬಟ್ಟೆ ತೊಟ್ಟವರು) ಕೆಂಡ ಹಾಯುತ್ತಿರುವುದು –ಪ್ರಜಾವಾಣಿ ಚಿತ್ರ/ಸತೀಶ ಬಡಿಗೇರ್

ಸಂಸದ ಜಿ.ಎಂ. ಸಿದ್ದೇಶ್ವರ ಚೊಂಬು: ಮಲ್ಲಿಕಾರ್ಜುನ್ ಟೀಕೆ

ದಾವಣಗೆರೆ: ಸಂಸದ ಜಿ.ಎಂ. ಸಿದ್ದೇಶ್ವರ ಅವರು ಪ್ರಧಾನಿ ನರೇಂದ್ರ ಮೋದಿ ಫೋಟೊ ಇಟ್ಟುಕೊಂಡು ತೋರಿಸುತ್ತಿದ್ದಾರೆಯೇ ಹೊರತು ಸಂಸದರಾಗಿ ವೈಯಕ್ತಿಕವಾಗಿ ಇವರು ಮಾಡಿರುವ ಅಭಿವೃದ್ಧಿ ಕಾರ್ಯಗಳು ಶೂನ್ಯ. ಈ ಮನುಷ್ಯ ಚೊಂಬು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಟೀಕಿಸಿದರು. ‘ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಬಡವರು ಹಾಗೂ ಮಹಿಳೆಯರಿಗೆ ಅನುಕೂಲವಾಗಿದ್ದು ಮಹಿಳೆಯರು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ನಾವು ಕೆಲಸ ಮಾಡಿ ಮತ ಹಾಕಿ ಎಂದು ಕೇಳುತ್ತಿದ್ದೇವೆ. ನಮ್ಮ ಯೋಜನೆಗಳಿಂದ ಆರ್ಥಿಕವಾಗಿ ಜನರು ಸುಧಾರಣೆ ಆಗುತ್ತಾರೆ’ ಎಂದು ಹೇಳಿದರು. ‘ನಾವು ಯಾರನ್ನೂ ಆಪರೇಷನ್ ಮಾಡಿ ಪಕ್ಷಕ್ಕೆ ಬರ ಮಾಡಿಕೊಂಡಿಲ್ಲ. ಅವರು ದರ್ಪ ದವಲತ್ತು ಬಿಡಬೇಕು. ಹಣದಿಂದ ಖರೀದಿ ಮಾಡಲು ಹೋದರೆ ಇದೇ ತರಹ ಆಗೋದು. ಹಿರಿಯ ಮುಖಂಡರಿಗೂ ಅಸಮಾಧಾನ ಇತ್ತು. ಬಿ.ಎಸ್.ಯಡಿಯೂರಪ್ಪ ಅವರು ಬಂದು ಸಂಧಾನ ಮಾಡಿದರೂ ಜಾತಿಗೆ ಒಬ್ಬರಂತೆ ಮುಖಂಡರನ್ನು ಕರೆಸುತ್ತಿದ್ದಾರೆ. ‘ನನ್ನ ಹೆಸರಿನಲ್ಲೂ ಹಿಂದೆ ಹಲವರು ನಾಮಪತ್ರ ಹಾಕಿಸಿದ್ದರು. ಯಾರೋ ವೈಯಕ್ತಿಕವಾಗಿ ನಾಮ ಪತ್ರ ಸಲ್ಲಿಸಿರಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ‘ಈ ಹಿಂದೆ ಬಿಜೆಪಿ ಆಡಳಿತದ ಅವಧಿಯಲ್ಲಿ ಜಿಲ್ಲೆಯ ಶಾಸಕರು ಸಚಿವರಾಗಲು ಬಿಡಲಿಲ್ಲ. ದುಡ್ಡಿನ ಭ್ರಮೆಯಲ್ಲಿ ಗೆಲ್ಲುತ್ತೆವೆ ಎಂದುಕೊಂಡಿದ್ದಾರೆ. ಆದರೆ ಜನರು ತೀರ್ಮಾನ ಮಾಡುತ್ತಾರೆ’ ಎಂದು ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.