ADVERTISEMENT

ಗ್ರಾಹಕರಿಗೆ ಬೆಲೆ ಏರಿಕೆ ‘ಬರೆ’

ಹದಿನೈದು ದಿನಗಳಲ್ಲೇ ಶೇ 20ರಿಂದ 40ರಷ್ಟು ಹೆಚ್ಚಾದ ತರಕಾರಿ ಬೆಲೆ

ವಿನಾಯಕ ಭಟ್ಟ‌
Published 18 ಮೇ 2022, 16:19 IST
Last Updated 18 ಮೇ 2022, 16:19 IST
ದಾವಣಗೆರೆಯ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರು ಗ್ರಾಹಕರಿಗಾಗಿ ಕಾಯುತ್ತಿರುವುದು.
ದಾವಣಗೆರೆಯ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರು ಗ್ರಾಹಕರಿಗಾಗಿ ಕಾಯುತ್ತಿರುವುದು.   

ದಾವಣಗೆರೆ: ಮದುವೆಯೂ ಸೇರಿದಂತೆ ಹಲವು ಶುಭಕಾರ್ಯಗಳು ಎಲ್ಲೆಡೆ ನಡೆಯುತ್ತಿರುವ ಈ ಕಾಲದಲ್ಲೇ ತರಕಾರಿ ಬೆಲೆಯೂ ಗಗನಕ್ಕೇರಿರುವುದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಹದಿನೈದು ದಿನಗಳಲ್ಲೇ ಹಲವು ತರಕಾರಿಗಳ ಬೆಲೆಯು ಶೇ 20ರಿಂದ ಶೇ 40ರಷ್ಟು ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸುತ್ತಿದೆ.

ಬೀನ್ಸ್‌ನ ಬೆಲೆಯು ಶತಕದ ಗಡಿಯನ್ನು ದಾಟಿದ್ದು, ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆಯಲ್ಲಿ ಒಂದು ಕೆ.ಜಿ.ಗೆ ₹ 120ರಂತೆ ಮಾರಾಟವಾಗುತ್ತಿದೆ. ಹದಿನೈದು ದಿನಗಳ ಹಿಂದೆ ₹ 80 ಇದ್ದ ಬೆಲೆಯು ಗಮನಮುಖಿಯಾಗುತ್ತಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.

ನವಿಲುಕೋಲು ಬೆಲೆಯೂ ಶತಕದ ಗಡಿಗೆ ಬಂದು ನಿಂತಿದೆ. ಟೊಮೆಟೊ ಬೆಲೆಯು ₹ 80ಕ್ಕೆ ತಲುಪಿದೆ. ಹದಿನೈದು ದಿನಗಳಲ್ಲಿ ಬಹುತೇಕ ತರಕಾರಿಗಳ ಬೆಲೆಯು ಒಂದು ಕೆ.ಜಿ.ಗೆ ₹ 20ರಿಂದ ₹ 40ರವರೆಗೂ ಹೆಚ್ಚಾಗಿರುವುದರಿಂದ ಗೃಹಿಣಿಯರ ಕೈಸುಡುತ್ತಿದೆ. ಕ್ಯಾರೆಟ್‌, ಹಿರೇಕಾಯಿ, ಚವಳಿಕಾಯಿ, ಹಾಗಲಕಾಯಿ, ಸೌತೆಕಾಯಿ, ಬೆಂಡೇಕಾಯಿಯ ಬೆಲೆ ₹ 20ರಷ್ಟು ಹೆಚ್ಚಾಗಿದ್ದು, ಪಲ್ಯ, ಸಬ್ಜಿ ಪ್ರಿಯರ ಕಣ್ಣಲ್ಲಿ ನೀರು ತರಿಸುತ್ತಿದೆ.

ADVERTISEMENT

ಆಲುಗಡ್ಡೆ, ಬೀಟ್‌ರೂಟ್‌ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಬೆಲೆ ಏರಿಕೆಯ ನಡುವೆಯೇ ಹಸಿಮೆಣಸಿನಕಾಯಿ ಬೆಲೆಯು ₹ 80ರಿಂದ ₹ 60ಕ್ಕೆ ಇಳಿಕೆಯಾಗಿದೆ. ಈರುಳ್ಳಿ ಬೆಲೆಯಲ್ಲೂ ಅಲ್ಪ ಪ್ರಮಾಣದ ಇಳಿಕೆಯಾಗಿದೆ. ಮಧ್ಯಮ ಗಾತ್ರದ ತೆಂಗಿನಕಾಯಿ ಬೆಲೆಯು ₹ 25ರಿಂದ ₹ 20ಕ್ಕೆ ಕುಸಿದಿದೆ.

‘ಹದಿನೈದು ದಿನಗಳಿಂದ ಈಚೆಗೆ ತರಕಾರಿ ಪೂರೈಕೆಯಲ್ಲಿ ಕುಸಿತವಾಗಿದ್ದರಿಂದ ಬೆಲೆ ಏರಿಕೆಯಾಗುತ್ತಿದೆ. ಈ ಮೊದಲು ನಾವು ದಿನಕ್ಕೆ ₹ 4 ಸಾವಿರದಿಂದ ₹ 5 ಸಾವಿರ ಕೊಟ್ಟು ದಲ್ಲಾಳಿಗಳಿಂದ ತರಕಾರಿಗಳನ್ನು ಖರೀದಿಸುತ್ತಿದ್ದೆವು. ಈಗ ಅಷ್ಟೇ ಪ್ರಮಾಣದ ಮಾಲು ಖರೀದಿಸಲು ₹ 8 ಸಾವಿರ ನೀಡಬೇಕಾಗುತ್ತಿದೆ. ಬೆಲೆ ಏರಿಕೆಯಾಗಿದ್ದರಿಂದ ಗ್ರಾಹಕರೂ ತರಕಾರಿ ಖರೀದಿಸುವ ಪ್ರಮಾಣವನ್ನು ತಗ್ಗಿಸಿದ್ದಾರೆ. ಕೆಲ ಬಾರಿ ತರಕಾರಿ ಮಾರಾಟವಾಗದೇ ಉಳಿಯುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ನಷ್ಟವೂ ಆಗುತ್ತಿದೆ’ ಎಂದು ಎಪಿಎಂಸಿ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಬಸಮ್ಮ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸೊಪ್ಪು ತುಸು ತುಟ್ಟಿ: ಸೊಪ್ಪಿನ ಬೆಲೆಯಲ್ಲೂ ತುಸು ಏರಿಕೆಯಾಗಿದೆ. ಒಂದು ಕಟ್ಟು ಕೊತ್ತಂಬರಿ ಸೊಪ್ಪಿನ ಬೆಲೆಯು ₹ 4ರಿಂದ ₹ 7ಕ್ಕೆ; ಎಳೆ ಹರಿವೆ ₹ 3ರಿಂದ ₹ 4ಕ್ಕೆ; ಪಾಲಕ್‌ ₹ 3ರಿಂದ ₹ 5ಕ್ಕೆ; ಪುದೀನಾ ₹ 4ರಿಂದ ₹ 5ಕ್ಕೆ ಹಾಗೂ ಸಬ್ಬಸಗಿ ಸೊಪ್ಪು ₹ 2ರಿಂದ ₹ 3ಕ್ಕೆ ಹೆಚ್ಚಾಗಿದೆ.

‘ಈ ಮೊದಲು 100 ಕಟ್ಟು ಕೊತ್ತಂಬರಿ ಸೊಪ್ಪು ₹ 200ಕ್ಕೆ ನಮಗೆ ಖರೀದಿಗೆ ಸಿಗುತ್ತಿತ್ತು. ಈಗ ಇದರ ಬೆಲೆಯು ₹ 700ಕ್ಕೆ ಹೋಗಿದೆ. ಸೊಪ್ಪಿನ ಬೆಲೆಯು ದಿನಾಲೂ ಏರಿಳಿತವಾಗುತ್ತದೆ. ಮಳೆ ಬರುತ್ತಿರುವುದರಿಂದ ಸೊಪ್ಪು ಕೊಳೆಯುವ ಸಾಧ್ಯತೆ ಇದೆ. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾದರೆ ಸೊಪ್ಪಿನ ಬೆಲೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎನ್ನುತ್ತಾರೆ ಸೊಪ್ಪಿನ ವ್ಯಾಪಾರಿ ಮಹಾಂತೇಶ್‌.

‘ಕಳೆದ ಒಂದು ತಿಂಗಳಿಂದ ತರಕಾರಿ ಬೆಲೆ ನಿಧಾನಕ್ಕೆ ಏರಿಕೆಯಾಗುತ್ತಿದೆ. ಬೀನ್ಸ್‌ ಬೆಲೆ ನೂರರ ಗಡಿ ದಾಟಿದೆ. ಇದೀಗ ಬೆಲೆ ಏರಿಕೆಯ ಬಿಸಿ ತರಕಾರಿಯಿಂದಲೂ ನಮಗೆ ತಗುಲುತ್ತಿದೆ. ಮೊದಲು ಅರ್ಧ ಕೆ.ಜಿ. ಬೀನ್ಸ್‌ ತೆಗೆದುಕೊಳ್ಳುತ್ತಿದ್ದರೆ ಈಗ ಕಾಲು ಕೆ.ಜಿ. ಖರೀದಿಸುತ್ತಿದ್ದೇವೆ. ಮಳೆ ಬೀಳುತ್ತಿರುವುದರಿಂದ ತರಕಾರಿ ಬೆಳೆ ಹಾನಿಯಾದರೆ ರೈತರಿಗೂ ನಷ್ಟವಾಗಲಿದೆ. ಆಗ ಇನ್ನಷ್ಟು ಬೆಲೆಯೂ ಏರಿಕೆಯಾಗಲಿದೆ’ ಎಂದು ನಗರದ ಗ್ರಾಹಕ ಬಸವರಾಜಯ್ಯ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.