ADVERTISEMENT

ವಾಹನ ಮಾರಾಟ ಶೇ 20ರಷ್ಟು ಹೆಚ್ಚಳ

ಜಿಎಸ್‌ಟಿ ದರ ಕಡಿತದ ಲಾಭ; ಸಾಲು ಹಬ್ಬಗಳ ಪರಿಣಾಮ

ಅಮೃತ ಕಿರಣ ಬಿ.ಎಂ.
Published 1 ನವೆಂಬರ್ 2025, 5:54 IST
Last Updated 1 ನವೆಂಬರ್ 2025, 5:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ದಾವಣಗೆರೆ: ಕೇಂದ್ರ ಸರ್ಕಾರ ಕಳೆದ ತಿಂಗಳು ಪ್ರಕಟಿಸಿದ ಜಿಎಸ್‌ಟಿ ದರ ಕಡಿತ ನಿರ್ಧಾರದಿಂದ ವಾಹನ ಉದ್ಯಮಕ್ಕೆ ಶುಕ್ರದೆಸೆ ಬಂದಿದೆ. ಸೆ.22ರಿಂದ ಪರಿಷ್ಕೃತ ದರಗಳು ಜಾರಿಯಾಗಿದ್ದು, ವಾಹನ ತಯಾರಿಕಾ ಕಂಪನಿಗಳು ಜಿಎಸ್‌ಟಿ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿವೆ. ಹೀಗಾಗಿ ಜಿಲ್ಲೆಯಲ್ಲಿ ವಾಹನಗಳ ಮಾರಾಟದಲ್ಲಿ ಶೇ 20ರಷ್ಟು ಹೆಚ್ಚಳ ಕಂಡುಬಂದಿದೆ.

ದಸರಾ ಹಾಗೂ ದೀಪಾವಳಿ ಹಬ್ಬಗಳಲ್ಲಿ ಜನರು ವಾಹನ ಖರೀದಿಸುವುದು ಹೆಚ್ಚು. ಈ ಬಾರಿ ಜಿಎಸ್‌ಟಿ ದರ ಕಡಿತದ ಲಾಭವೂ ಜೊತೆಯಾಗಿದ್ದರಿಂದ ವಾಹನ ಖರೀದಿಗೆ ಜನರು ಹೆಚ್ಚು ಆಸಕ್ತಿ ತೋರಿದರು. ಆಟೊಮೊಬೈಲ್ ಉತ್ಪನ್ನಗಳ ಪೈಕಿ ಕಾರು ಹಾಗೂ ಬೈಕ್‌ ಅತಿಹೆಚ್ಚು ಮಾರಾಟವಾಗಿವೆ. ಬೈಕ್ ಹಾಗೂ ಬಹುತೇಕ ಕಾರುಗಳ ಜಿಎಸ್‌ಟಿ ದರ ಶೇ 28ರಿಂದ ಶೇ 18ಕ್ಕೆ ಇಳಿಕೆಯಾಗಿದೆ.

ಸೆಪ್ಟೆಂಬರ್ 1ರಿಂದ ಹಾಗೂ ಅಕ್ಟೋಬರ್ 21ರ ನಡುವಿನ ಅವಧಿಯಲ್ಲಿ ಜಿಲ್ಲೆಯಲ್ಲಿ ಎಲ್ಲ ರೀತಿಯ 7,308 ವಾಹನಗಳು ಮಾರಾಟವಾಗಿವೆ. ಸೆಪ್ಟೆಂಬರ್ ತಿಂಗಳಲ್ಲಿ 4,344 ವಾಹನಗಳು ರಸ್ತೆಗಿಳಿದಿದ್ದರೆ, ಅಕ್ಟೋಬರ್ ತಿಂಗಳ ಮೊದಲ ಮೂರು ವಾರಗಳಲ್ಲಿ 2,964 ವಾಹನಗಳನ್ನು ಗ್ರಾಹಕರು ಖರೀದಿಸಿದ್ದಾರೆ ಎಂದು ಆರ್‌ಟಿಒ ಭಗವಾನ್‌ ದಾಸ್ ಎಚ್.ಎಸ್. ಮಾಹಿತಿ ನೀಡಿದರು.

ADVERTISEMENT

2024ರ ಸೆಪ್ಟೆಂಬರ್‌ಗೆ ಹೋಲಿಸಿದರೆ, ಈ ಬಾರಿ 1,700ಕ್ಕೂ ಹೆಚ್ಚು ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ 3,702 ಬೈಕ್‌ಗಳು ಮಾರಾಟವಾಗಿದ್ದವು. ಈ ವರ್ಷದ ಅಕ್ಟೋಬರ್‌ ತಿಂಗಳ ಇಪತ್ತು ದಿನಗಳಲ್ಲಿ 3,306 ಬೈಕ್‌ಗಳನ್ನು ಗ್ರಾಹಕರು ಮನೆಗೆ ಕೊಂಡೊಯ್ದಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ 254 ಕಾರುಗಳು ಮಾರಾಟವಾಗಿದ್ದರೆ, 2025ರ ಇದೇ ಅವಧಿಯಲ್ಲಿ 376 ಕಾರುಗಳನ್ನು ಜನರು ಖರೀದಿಸಿದ್ದಾರೆ.

ಗ್ರಾಹಕರಿಗೆ ತಗ್ಗಿದ ಹೊರೆ:

350 ಸಿಸಿ ಸಾಮರ್ಥ್ಯದ ಒಳಗಿನ ಬೈಕ್‌ಗಳಿಗೆ ಇದ್ದ ತೆರಿಗೆಯಲ್ಲಿ ಶೇ 10ರಷ್ಟು ಕಡಿತವಾಗಿದೆ. ಗ್ರಾಹಕರಿಗೆ ₹ 7,000ದಿಂದ ₹ 10,000ದವರೆಗೂ ಉಳಿತಾಯವಾಗಿದೆ. ಇನ್ನು, ರಾಯಲ್‌ ಎನ್‌ಫೀಲ್ಡ್‌ ಶ್ರೇಣಿಯ ಅಧಿಕ ಸಾಮರ್ಥ್ಯದ ಬೈಕ್ ಗ್ರಾಹಕರಿಗೆ ₹ 25,000ದವರೆಗೂ ಹಣ ಮಿಕ್ಕಿದೆ. ಕೆಲವು ಶೋರೂಂಗಳಲ್ಲಿ ತರಿಸಿದ್ದ ಎಲ್ಲ ವಾಹನಗಳು ಹಬ್ಬಗಳು ಮತ್ತು ಜಿಎಸ್‌ಟಿ ದರ ಕಡಿತದ ಕಾರಣಕ್ಕೆ ಸಂಪೂರ್ಣ ಮಾರಾಟವಾಗಿದ್ದು, ಹೊಸದಾಗಿ ಖರೀದಿಸುವವರು ಬುಕ್ಕಿಂಗ್ ಮಾಡಬೇಕಿದೆ. 

ಕೆಲವಕ್ಕೆ ಜಿಎಸ್‌ಟಿ ಹೆಚ್ಚಳ:

ಆದರೆ 350 ಸಿಸಿಗಿಂತ ಹೆಚ್ಚು ಸಾಮರ್ಥ್ಯದ ಬೈಕ್‌ಗಳ ಜಿಎಸ್‌ಟಿಯನ್ನು ಶೇ 28ರಿಂದ ಶೇ 40ಕ್ಕೆ ಹೆಚ್ಚಿಸಲಾಗಿದೆ. ಹಿಮಾಲಯನ್ ಸೇರಿದಂತೆ ಪ್ರೀಮಿಯಂ ಶ್ರೇಣಿಯ ಬೈಕ್‌ಗಳು ದುಬಾರಿಯಾಗಿವೆ. ಆದರೂ ಅವುಗಳಿಗೆ ತನ್ನದೇ ಆದ ಗ್ರಾಹಕ ವರ್ಗವಿದೆ. ಹೀಗಾಗಿ ದರ ಹೆಚ್ಚಳವು ಮಾರಾಟದ ಮೇಲೆ ಪರಿಣಾಮ ಬೀರದು ಎಂದೇ ಅಂದಾಜಿಸಲಾಗಿದೆ. ಆದರೂ, ಹಬ್ಬದ ಋತು ಕಳೆದ ಬಳಿಕ ಅಧಿಕ ಪ್ರೀಮಿಯಂ ಬೈಕ್‌ಗಳ ಬಗ್ಗೆ ಗ್ರಾಹಕರ ಒಲವು ಹೇಗಿದೆ ಎಂಬುದು ತಿಳಿಯಲಿದೆ ಎಂದು ನಗರದ ಪಿ.ಬಿ. ರಸ್ತೆಯ ರಾಯಲ್‌ ಎನ್‌ಫೀಲ್ಡ್ ಶೋರೂಂನ ಆಂಟೊನಿ ರಾಜ್ ಹೇಳಿದರು.

ಸಾಂದರ್ಭಿಕ ಚಿತ್ರ

ಕಾರ್ ಗ್ರಾಹಕರಿಗೆ 1.90 ಲಕ್ಷದವರೆಗೆ ಉಳಿತಾಯ

ಜಿಲ್ಲೆಯ ಬಹುತೇಕ ಕಾರ್‌ ಶೋರೂಮ್‌ಗಳಲ್ಲಿ ಶೇ 15ರಿಂದ ಶೇ20ರಷ್ಟು ಮಾರಾಟ ವೃದ್ಧಿಯಾಗಿದೆ. 1200 ಸಿಸಿ ಸಾಮರ್ಥ್ಯದ ಪೆಟ್ರೋಲ್ ಹಾಗೂ 1500 ಸಿಸಿ ಸಾಮರ್ಥ್ಯದ ಡೀಸೆಲ್ ಎಂಜಿನ್‌ನ ಸಣ್ಣ ಕಾರ್‌ಗಳನ್ನು ಖರೀದಿಸಿದವರಿಗೆ ಅವುಗಳ ಬೆಲೆಯ ಮೇಲೆ ₹ 60000ದಿಂದ ₹ 1.90 ಲಕ್ಷದವರೆಗೂ ಉಳಿತಾಯವಾಗಿದೆ.  2000 ಸಿಸಿ ಹಾಗೂ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಪ್ರೀಮಿಯಂ ಕಾರುಗಳಿಗೆ ಈ ಹಿಂದೆ ಇದ್ದ ಶೇ 48ರಷ್ಟು (ಶೇ 28ರಷ್ಟು ಜಿಎಸ್‌ಟಿ ಹಾಗೂ ಸೆಸ್‌ ಸೇರಿ) ತೆರಿಗೆಯನ್ನು ಶೇ 40ಕ್ಕೆ ಇಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.