ದಾವಣಗೆರೆ: ಶಕ್ತಿ ದೇವತೆಗಳನ್ನು ಆರಾಧಿಸುವ ನವರಾತ್ರಿ ಉತ್ಸವ ವಿಜಯದಶಮಿ ಮೂಲಕ ಗುರುವಾರ ಸಂಪನ್ನಗೊಂಡಿತು. ಆಯುಧ ಪೂಜೆ, ಶಮಿ ವೃಕ್ಷ ಪೂಜೆ ಹಾಗೂ ಅಂಬು ಛೇದನದೊಂದಿಗೆ ದಸರಾ ಹಬ್ಬಕ್ಕೆ ತೆರೆ ಬಿದ್ದಿತು.
ನವರಾತ್ರಿ ಅಂಗವಾಗಿ ಈ ವರ್ಷ 11 ದಿನ ಉತ್ಸವ ಜರುಗಿತು. ಪ್ರತಿದಿನ ಮನೆ, ದೇಗುಲಗಳಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ದೇವತೆಗಳ ಮೂರ್ತಿಗಳು ನಿತ್ಯವೂ ಒಂದೊಂದು ಅಲಂಕಾರದಲ್ಲಿ ಕಂಗೊಳಿಸಿದವು. ಬುಧವಾರ ಆಯುಧ ಪೂಜೆ ನೆರವೇರಿತು. ನಗರದ ಬೀರಲಿಂಗೇಶ್ವರ ದೇವಸ್ಥಾನದ ಬಳಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರು ಗುರುವಾರ ಅಂಬು ಛೇದನ ಮಾಡಿದರು.
‘ಸಾಮಾಜಿಕ ಜಾಲತಾಣ ಮತ್ತು ಆಧುನಿಕತೆಯ ಭರಾಟೆ ಬದುಕು ಆವರಿಸುತ್ತಿವೆ. ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆಯ ನಡುವೆ ಸಂಸ್ಕೃತಿ, ಆಚರಣೆಗಳು ನಶಿಸಿಹೋಗುತ್ತಿವೆ. ಸಂಸ್ಕೃತಿ ರಕ್ಷಣೆಗೆ ನಾಡಹಬ್ಬದ ಆಚರಣೆ ಅಗತ್ಯ’ ಎಂದು ಗಂಗಾಧರಸ್ವಾಮಿ ಅಭಿಪ್ರಾಯಪಟ್ಟರು.
‘ಸಾಮಾಜಿಕ ಜಾಲತಾಣಗಳು ಸಮಯ ಹಾಳು ಮಾಡುತ್ತವೆ. ಪುಸ್ತಕ, ದಿನಪತ್ರಿಕೆ ಓದು ಕಡಿಮೆಯಾಗಿ ಜ್ಞಾನ ಕುಂಠಿತವಾಗುತ್ತಿದೆ. ಮೊಬೈಲ್ ಫೋನ್ ಅತಿಯಾದ ಬಳಕೆಯಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತಿದೆ. ಜೀವನಕ್ಕೆ ಮಾಕರವಾಗುವ ಸಾಮಾಜಿಕ ಜಾಲತಾಣ, ಮೊಬೈಲ್ ಫೋನ್ ಬಳಕೆಯ ಬಗ್ಗೆ ಎಚ್ಚರ ಅಗತ್ಯ’ ಎಂದು ಸಲಹೆ ನೀಡಿದರು.
‘ದಾವಣಗೆರೆ ದಾನ–ಧರ್ಮಕ್ಕೆ ಹೆಸರಾದ ಊರು. ಇಲ್ಲಿರುವಷ್ಟು ಧರ್ಮಛತ್ರಗಳು ಬೇರೆಲ್ಲೂ ಇಲ್ಲ. ಇಲ್ಲಿನ ಜನ ಸಂಸ್ಕೃತಿ ವಿಶೇಷವಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕೆ ಯುವಸಮೂಹ ಸರಿ ದಾರಿಯಲ್ಲಿ ಸಾಗಬೇಕು. ಎಲ್ಲ ಪಾಲಕರು ತಮ್ಮ ಮಕ್ಕಳನ್ನು ಸತ್ಯದ ದಾರಿಯಲ್ಲಿ ಕರೆದೊಯ್ಯಬೇಕು’ ಎಂದು ಹೇಳಿದರು.
ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಉದ್ಯಮಿ ಎಂ.ಆನಂದ್, ಪಾಲಿಕೆ ಮಾಜಿ ಸದಸ್ಯ ಆರ್.ಎಲ್. ಶಿವಪ್ರಕಾಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.