
ದಾವಣಗೆರೆ: ‘ಅಧಿಕಾರಶಾಹಿ ಮನಸು ಮಾಡಿದರೆ ಜನರ ಸಮಸ್ಯೆಗಳಿಗೆ ಕಿವಿಯಾಗಬಹುದು. ಅವರ ಆಶೋತ್ತರಗಳನ್ನು ಈಡೇರಿಸಬಹುದು. ಅದಕ್ಕಾಗಿ ರಾಜಕಾರಣಿಗಳ ಆದೇಶಕ್ಕೇ ಕಾಯುತ್ತ ಕುಳಿತುಕೊಳ್ಳುವ ಅಗತ್ಯವಿಲ್ಲ’ ಎಂಬ ಮಾತಿದೆ.
ಈ ಮಾತನ್ನು ಸತ್ಯ ಮಾಡುವ ಹಾದಿಯಲ್ಲಿ ಜಿಲ್ಲೆಯ ಅತ್ಯುನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ಸಾಗಿದ್ದಾರೆ. ಜಿಲ್ಲೆಯ ಮೂವರು ಹಿರಿಯ ಅಧಿಕಾರಿಗಳಾದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುತ್ತ ಜನಮನ ಗೆಲ್ಲುತ್ತಿದ್ದಾರೆ.
ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳಾಗಿರುವ ಇವರ ಪೈಕಿ ಒಬ್ಬರಾದರೂ ನಿತ್ಯ ಹಳ್ಳಿಗಾಡಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಸ ವಿಲೇವಾರಿ, ಕುಡಿಯುವ ನೀರು ಪೂರೈಕೆ ಸೇರಿದಂತೆ ಗ್ರಾಮೀಣರ ಮೂಲಸೌಲ್ಯಗಳ ಅಹವಾಲು ಆಲಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ, ತಹಶೀಲ್ದಾರ್ ಕಚೇರಿ, ಉಪನೋಂದಣಾಧಿಕಾರಿ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆ, ಕಾಲೇಜು, ಅಂಗನವಾಡಿ, ತಾಲ್ಲೂಕು, ಹೋಬಳಿ ಮಟ್ಟದಲ್ಲಿರುವ ಪೊಲೀಸ್ ಠಾಣೆ, ಹಾಸ್ಟೆಲ್‌ಗಳಿಗೆ ಭೇಟಿ ನೀಡುತ್ತಿರುವ ಈ ಅಧಿಕಾರಿಗಳು ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕೆಲಸ ಮಾಡುತ್ತಿದ್ದಾರೆ.
ಜಿಲ್ಲೆಯ ದಾವಣಗೆರೆ, ಜಗಳೂರು, ಹರಿಹರ, ಚನ್ನಗಿರಿ, ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕುಗಳ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಾದ್ಯಂತ ಈ ಅಧಿಕಾರಿಗಳ ಭೇಟಿ ಮುಂದುವರಿದಿದೆ.
ಕಳೆದ ವಾರ ದಾವಣಗೆರೆಯ ಕುಂದವಾಡ ರಸ್ತೆಯಲ್ಲಿರುವ ಸರ್ಕಾರಿ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ನಂತರ ಚನ್ನಗಿರಿಯಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಅಲ್ಲಿನ ಅವ್ಯವಸ್ಥೆ ಕಂಡು ಕಿಡಿಕಾರಿದರಲ್ಲದೆ, ವ್ಯವಸ್ಥೆ ಸರಿಪಡಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಿತ್ಯ ಬೆಳಗಿನಜಾವ ನಗರದ ವಿವಿಧ ಸ್ಥಳಗಳತ್ತ ವಾಯುವಿಹಾರಕ್ಕೆ ಒಬ್ಬಂಟಿಯಾಗಿ ತೆರಳುವ ಜಿಲ್ಲಾಧಿಕಾರಿ, ಜನರು ಎದುರಿಸುವ ಬವಣೆ, ಜನಜೀವನ ಅವಲೋಕಿಸಿ ಅಹವಾಲನ್ನೂ ಸ್ವೀಕರಿಸುತ್ತಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಗ್ರಾಮೀಣ ಪ್ರದೇಶಗಳಿಗೆ ತೆರಳುವುದನ್ನು ರೂಢಿಸಿಕೊಂಡು ಗಮನ ಸೆಳೆದಿದ್ದಾರೆ.
ಆರು ತಿಂಗಳ ಹಿಂದೆ ವರ್ಗಾ ಆಗಿ ಬಂದ ಜಿಲ್ಲಾ ಪಂಚಾಯಿತಿ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಒಂದಿಲ್ಲೊಂದು ಗ್ರಾಮಕ್ಕೆ ಅನಿರೀಕ್ಷಿತ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳ ಪರಿಶೀಲನೆ ನಡೆಸುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 6ಕ್ಕೆ ವಾಯುವಿಹಾರಕ್ಕೆ ಹಾಗೂ ತಮ್ಮ ನೆಚ್ಚಿನ ಬ್ಯಾಡ್ಮಿಂಟನ್ ಆಟಕ್ಕೆ ತೆರಳುವ ಬದಲು, ಯಾವುದಾದರೊಂದು ತಾಲ್ಲೂಕಿನಲ್ಲಿರುವ ಗ್ರಾಮಗಳತ್ತ ಮುಖ ಮಾಡುತ್ತಿರುವ ಇವರು, ಮತ್ತೆ 10ಕ್ಕೆ ವಾಪಸಾಗಿ ತಮ್ಮ ಕಚೇರಿಯಲ್ಲಿ ಆಸೀನರಾಗುತ್ತಿದ್ದಾರೆ.
ಕಳೆದ ವಾರ ಸಂತೇಬೆನ್ನೂರಿಗೆ ತೆರಳಿದ್ದ ಗಿತ್ತೆ ಮಾಧವ ಅವರು, ಸೋಮವಾರ ಬಸವಾಪಟ್ಟಣ, ತ್ಯಾವಣಿಗಿ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿದ್ದರಲ್ಲದೆ, ಮಂಗಳವಾರ ಕುಕ್ಕುವಾಡ, ಹದಡಿ ಸೇರಿದಂತೆ ಸುತ್ತಮುತ್ತಲ ಐದು ಗ್ರಾಮಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಯನ್ನು ಸ್ವತಃ ಅವಲೋಕಿಸಿದ್ದಾರೆ.
ಬಸವಾಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಔಷಧ ಕೊರತೆಯನ್ನು ಗಮನಿಸಿ ತಕ್ಷಣಕ್ಕೇ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದರು. ಕೆಟ್ಟು ನಿಂತ ಆಂಬ್ಯುಲೆನ್ಸ್ ದುರಸ್ತಿಗೂ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಮೆಟ್ರಿಕ್‌ಪೂರ್ವ ವಿದ್ಯಾರ್ಥಿನಿಲಯಕ್ಕೆ ದಿಢೀರ್ ತೆರಳಿ ವಿದ್ಯಾರ್ಥಿಗಳೊಂದಿಗೆ ನೆಲದ ಮೇಲೆ ಕುಳಿತು ಬೆಳಗಿನ ಉಪಾಹಾರ ಸೇವಿಸುವ ಮೂಲಕ ಅಲ್ಲಿ ಒದಗಿಸುವ ಊಟೋಪಹಾರದ ಗುಣಮಟ್ಟವನ್ನು ಪರಿಶೀಲಿಸಿದ್ದಾರೆ.
ಜಿಲ್ಲಾಧಿಕಾರಿ, ಸಿಇಒ, ಎಸ್‌ಪಿ ಭೇಟಿಯ ಹಿನ್ನೆಲೆಯಲ್ಲಿ ಪಿಡಿಒ, ತಾ.ಪಂ. ಇಒ, ಎಂಜಿನಿಯರ್‌ಗಳು, ಪೌರಕಾರ್ಮಿಕರು, ಸರ್ಕಾರಿ ಆಸ್ಪತ್ರೆಗಳ ವೈದ್ಯರು ಒಳಗೊಂಡಂತೆ ಬಹುತೇಕ ಸಿಬ್ಬಂದಿ, ತಹಶೀಲ್ದಾರರು, ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು, ಗ್ರಾ.ಪಂ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸದಸ್ಯರು ಬೆಳ್ಳಂಬೆಳಿಗ್ಗೆ ಹಾಜರಿದ್ದು, ಸ್ಥಳೀಯರ ಜೀವನ ಮಟ್ಟ, ಆರೋಗ್ಯ ಸ್ಥಿತಿಗತಿ, ಸಮಸ್ಯೆಗಳು, ಕುಂದುಕೊರತೆಗಳ ಬಗ್ಗೆ ಅರಿಯುವಂತಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಜಿಲ್ಲೆಯ ವಿವಿಧೆಡೆ ಇರುವ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ಮೂಲಕ ಅಲ್ಲಿನ ಸ್ಥಿತಿಗತಿ ಅವಲೋಕಿಸುತ್ತಿದ್ದಾರೆ. ಸಾರ್ವನಿಕರ ಅಹವಾಲು ಆಲಿಸುತ್ತಿದ್ದಾರೆ. ಜನರೊಂದಿಗೆ ಪೊಲೀಸರ ನಡವಳಿಕೆ, ಅಪರಾಧ ಪ್ರಕರಣಗಳ ತನಿಖೆಯ ಹಾದಿ, ಅವುಗಳ ನಿಯಂತ್ರಣಕ್ಕೆ ಅಗತ್ಯವಿರುವ ಮಾರ್ಗೋಪಾಯಗಳ ಕುರಿತ ಚರ್ಚೆಯಲ್ಲಿ ತೊಡಗುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸುತ್ತಿದ್ದಾರೆ.
ಜಿಲ್ಲೆಯ ಪ್ರಮುಖ ಅಧಿಕಾರಿಗಳ ಹಳ್ಳಿಗಳ ಭೇಟಿ, ಜನರ ಹತ್ತಿರಕ್ಕೆ ಹೋಗುವ ಈ ನಡೆ, ಜಿಲ್ಲೆಯಾದ್ಯಂತ ಜನರ ಮೆಚ್ಚುಗೆಗೂ ಪಾತ್ರವಾಗಿದ್ದು, ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಮೇಲ್ಪಂಕ್ತಿಯಾಗಿದ್ದಲ್ಲದೆ, ಮಿಂಚಿನ ಸಂಚಲನವನ್ನಂತೂ ಮೂಡಿಸಿದೆ.
‘ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಿ
’ ಹಿರಿಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಗ್ರಾಮೀಣ ಪಟ್ಟಣ ಪ್ರದೇಶಗಳಿಗೆ ದಿಢೀರ್ ಭೇಟಿ ನೀಡುತ್ತಿರುವುದು ಅಭಿನಂದನೀಯ. ಇವರ ಈ ದಿಟ್ಟಹೆಜ್ಜೆಯು ಕೆಳಹಂತದ ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡಲು ಅನುಕೂಲಕರ. ವ್ಯವಸ್ಥೆಯನ್ನು ಸರಿಪಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಇವರು ಕೆಲವೆಡೆ ಅವ್ಯಾಹತವಾಗಿ ನಡೆದಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವತ್ತಲೂ ಗಮನ ಹರಿಸಬೇಕಿದೆ. ಅಕ್ರಮ ಮರಳುಗಾರಿಕೆ ಕಲ್ಲು ಗಣಿಗಾರಿಕೆ ಕಾಮಗಾರಿಗಳಲ್ಲಿನ ಅಕ್ರಮ ಸಾಮಗ್ರಿಗಳ ವಿತರಣೆಯಲ್ಲಿನ ಅಕ್ರಮದ ಕುರಿತೂ ಗಮನಿಸಬೇಕು ಎಂದು ಸಾರ್ವಜನಿಕರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.