ADVERTISEMENT

ದಾವಣಗೆರೆ ಮೇಯರ್ ಆಗಿ ವಿನಾಯಕ ಪೈಲ್ವಾನ್

ದಾವಣಗೆರೆ ಮೇಯರ್ ಆಗಿ ವಿನಾಯಕ ಪೈಲ್ವಾನ್

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2023, 4:11 IST
Last Updated 5 ಮಾರ್ಚ್ 2023, 4:11 IST
ವಿನಾಯಕ ಪೈಲ್ವಾನ್
ವಿನಾಯಕ ಪೈಲ್ವಾನ್   

ದಾವಣಗೆರೆ: ಮೇಯರ್ ಆಯ್ಕೆಗಾಗಿ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಶನಿವಾರ ನಡೆದ ಚುನಾವಣೆ ಹಲವು ಪ್ರಹಸನಗಳಿಗೆ ಸಾಕ್ಷಿಯಾಯಿತು.

ಬಹುಮತ ಇದ್ದರೂ ಮೇಯರ್‌ ಸ್ಥಾನಕ್ಕೆ ಮೀಸಲಾಗಿದ್ದ ಪರಿಶಿಷ್ಟ ಪಂಗಡದ ಸದಸ್ಯರಿಲ್ಲದ ಕಾರಣ ಬಿಜೆಪಿಯು ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದ 7ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ವಿನಾಯಕ ಪೈಲ್ವಾನ್‌ ಅವರನ್ನು ತನ್ನತ್ತ ಸೆಳೆದು ಕಾಂಗ್ರೆಸ್‌ಗೆ ಆಘಾತ ನೀಡಿತು.

ಸೋಲಿನ ಮುಜುಗರಕ್ಕೆ ಒಳಗಾಗುವುದನ್ನು ತಪ್ಪಿಸಿಕೊಳ್ಳಲು ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಕೆ.ಎನ್‌. ಸವಿತಾ ಅವರು ಸಲ್ಲಿಸಿದ್ದ ನಾಮಪತ್ರ ಹಿಂದಕ್ಕೆ ಪಡೆದುಕೊಂಡಿದ್ದರಿಂದ, ವಿನಾಯಕ ಪೈಲ್ವಾನ್‌ ಮೇಯರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದರು. ಉಪ ಮೇಯರ್ ಆಗಿ 27ನೇ ವಾರ್ಡ್‌ನ ಬಿಜೆಪಿ ಸದಸ್ಯೆ ಯಶೋದಾ ಯಗ್ಗಪ್ಪ ಅವರು ಕಾಂಗ್ರೆಸ್‌ ಅಭ್ಯರ್ಥಿ ಶಿವಲೀಲಾ ಕೊಟ್ರಯ್ಯ ಅವರನ್ನು 5 ಮತಗಳ ಅಂತರದಿಂದ ಸೋಲಿಸಿ ಚುನಾಯಿತರಾದರು.

ADVERTISEMENT

ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಆಯ್ಕೆ ಘೋಷಿಸಿದರು.

ಮೇಯರ್ ಯಾವ ಪಕ್ಷ?: ಮೇಯರ್ ಆಯ್ಕೆ ಪೂರ್ಣಗೊಳ್ಳುತ್ತಿದ್ದಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರ ನಡುವೆ ಕಿತ್ತಾಟ ಶುರುವಾಯಿತು. ‘ನೂತನ ಮೇಯರ್ ನಮ್ಮ ಪಕ್ಷದವರು’ ಎಂದು ಕಾಂಗ್ರೆಸ್ ಸದಸ್ಯರು ವಾದಿಸಿದರೆ, ‘ನಾವು ಬೆಂಬಲ ನೀಡಿ ಗೆಲ್ಲಿಸಿದ್ದೇವೆ’ ಎಂದು ಬಿಜೆಪಿ ಸದಸ್ಯರು ವಾದಿಸಿದ್ದರಿಂದ ಉಭಯ ಪಕ್ಷಗಳ ಸದಸ್ಯರ ನಡುವೆ ಕಿತ್ತಾಟ ನಡೆಯಿತು. ಆ ಬಳಿಕ ಎರಡು ಪಕ್ಷಗಳ ಸದಸ್ಯರು ಮೇಯರ್ ನಮ್ಮ ಪಕ್ಷದವರೆಂದು ಅಭಿನಂದಿಸಿದರು.

ಪಾಲಿಕೆ ಆವರಣದಲ್ಲಿ ಹೈಡ್ರಾಮ: ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆ ಸಂದರ್ಭದಲ್ಲಿ ಹೈಡ್ರಾಮ ನಡೆಯಿತು. ಮೇಯರ್ ಸ್ಥಾನಕ್ಕೆ ವಿನಾಯಕ ಪೈಲ್ವಾನ್ ನಾಮಪತ್ರ ಸಲ್ಲಿಕೆಯಿಂದ ಹಿಡಿದು ಮೇಯರ್‌ಯಾಗಿ ಆಯ್ಕೆಯಾದ ನಂತರವೂ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ಮಾತಿನ ಚಕಮಕಿ, ಆರೋಪ-ಪ್ರತ್ಯಾರೋಪ, ತಳ್ಳಾಟ, ನೂಕಾಟ ನಿಲ್ಲಲೇ ಇಲ್ಲ.

ವಿನಾಯಕ ಪೈಲ್ವಾನ್ ನಾಮಪತ್ರ ಸಲ್ಲಿಕೆಗೆ ಬಿಜೆಪಿ ಸದಸ್ಯರಾದ ಎಸ್.ಟಿ. ವೀರೇಶ್, ಪ್ರಸನ್ನಕುಮಾರ್, ಸೋಗಿ ಶಾಂತಕುಮಾರ್ ಅವರೊಂದಿಗೆ ಪಾಲಿಕೆ ಕಚೇರಿಗೆ ಹೊರಡುವ ವೇಳೆ ಕಾಂಗ್ರೆಸ್ ಸದಸ್ಯರು ವಾಗ್ವಾದ ನಡೆಸಿದರು. ನಾಮಪತ್ರ ಸಲ್ಲಿಸಿ ಹೊರ ಬರುತ್ತಿದ್ದಂತೆ ಪಾಲಿಕೆ ಆವರಣದಲ್ಲಿ ಗಲಾಟೆ ಶುರುವಾಯಿತು.

ಕಾಂಗ್ರೆಸ್ ಸದಸ್ಯರು ವಿನಾಯಕ ಪೈಲ್ವಾನ್ ಅವರಿಗೆ ಮುತ್ತಿಗೆ ಹಾಕಿ ‘ಪಕ್ಷಕ್ಕೆ ದ್ರೋಹ ಮಾಡಬೇಡ. ನಮ್ಮೊಂದಿಗೆ ಬಾ’ ಎಂದು ಜೊತೆಗೆ ಕರೆದುಕೊಂಡು ಹೋಗಲು ಯತ್ನಿಸಿದರು. ಅಲ್ಲದೇ ‘ನೀನೇ ಮೇಯರ್ ಆಗುವಂತೆ, ಭ್ರಷ್ಟ ಬಿಜೆಪಿಯೊಂದಿಗೆ ಹೋಗಬೇಡ ಬಾ’ ಎಂದು ವಿನಂತಿಸಿದರು. ಆಗ ವಿನಾಯಕ ಪೈಲ್ವಾನ್ ‘ನಿಮ್ಮ ಪಕ್ಷ ಏನು ಕೊಟ್ಟಿದೆ’ ಎಂದು ಪ್ರಶ್ನಿಸಿದರು.

ನಿರಾಶೆ: ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಮೇಯರ್‌ ಸ್ಥಾನವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿ ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಬರಲು ಕಾರಣರಾಗಿದ್ದ ಸವಿತಾ ಕೆ.ಎನ್. (ಸವಿತಾ ಹುಲ್ಲುಮನಿ ಗಣೇಶ್‌) ಅವರ ಹೋರಾಟ ವ್ಯರ್ಥವಾಯಿತು.

‘ವಿನಾಯಕ ಕಾಂಗ್ರೆಸ್ ಪಕ್ಷದ ಸದಸ್ಯ. ಹೀಗಾಗಿ ತಾಂತ್ರಿಕವಾಗಿ ನಾವೇ ಗೆದ್ದಿದ್ದೇವೆ’ ಎಂದು ಕಾಂಗ್ರೆಸ್‌ನ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳು ಮಂಜುನಾಥ್ ಮೇಯರ್ ಆಯ್ಕೆಯ ಬಳಿಕ ಹೇಳಿದರು.

‘ಎಸ್ಸಿ–ಎಸ್ಟಿಗಳಿಗೆ ಬಿಜೆಪಿ ಮೀಸಲು ನೀಡಿದಾಗ ಕಾಂಗ್ರೆಸ್ಸಿಗರು ಟೀಕಿಸಿದ್ದರು. ನಾ ನಾಯಕಿ ಕಾರ್ಯಕ್ರಮಕ್ಕೆ ಒತ್ತು ನೀಡುವ ಪ್ರಿಯಾಂಕ ಅವರು ಅಧಿಕೃತ ಅಭ್ಯರ್ಥಿಯಾಗಿದ್ದ ಮಹಿಳಾ ಕಾರ್ಪೊರೇಟರ್ ಅವರನ್ನು ವಿತ್‌ಡ್ರಾ ಮಾಡಿಸಿದ್ದೇಕೆ. ಸಂಖ್ಯಾಬಲವಿದ್ದರೂ ಅವರನ್ನು ಕಣಕ್ಕೆ ಇಳಿಸಿದ್ದೇಕೆ’ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿಗೌಡ ಪ್ರಶ್ನಿಸಿದರು.

*

ನಾನು ಕಾಂಗ್ರೆಸ್‌ನಿಂದ ಜಯ ಗಳಿಸಿದ್ದು, ಶಿವಶಂಕರಪ್ಪನವರ ಆಶೀರ್ವಾದದಿಂದ ಗೆದ್ದಿದ್ದೇನೆ. ನನ್ನ ಗೆಲುವಿನಲ್ಲಿ ಎಲ್ಲರ ಸಹಕಾರವೂ ಇದೆ.

ವಿನಾಯಕ ಬಿ.ಎಚ್., ಮೇಯರ್

*

ಮೇಯರ್ ಆಯ್ಕೆಯಾಗಿ ರುವುದು ಯಾವ ಪಕ್ಷದ ಚಿಹ್ನೆಯಿಂದ ಎಂಬುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ವಿನಾಯಕ್ ಕಾಂಗ್ರೆಸ್‌ನಿಂದ ಗೆದ್ದಿದ್ದಾರೆ.

ಶಾಮನೂರು ಶಿವಶಂಕರಪ್ಪ, ಶಾಸಕ

*

ಕಾಂಗ್ರೆಸ್ ಅಭ್ಯರ್ಥಿಯನ್ನು ಕರೆತಂದು ನಾಮಪತ್ರ ಹಾಕಿಸಿದ್ದು ನಾವೇ. ಅವರಿಗೆ ಸೂಚಕರಾಗಿದ್ದವರು ಬಿಜೆಪಿಯವರೇ ಹೊರತು ಕಾಂಗ್ರೆಸ್ಸಿಗರಲ್ಲ. ಹೀಗಾಗಿ ಮೇಯರ್ ನಮ್ಮವರೇ

ಜಿ.ಎಂ. ಸಿದ್ದೇಶ್ವರ, ‌ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.