ADVERTISEMENT

ದಾವಣಗೆರೆ: ವೀರಶೈವ ಪಂಚಪೀಠಾಚಾರ್ಯ, ಶಿವಾಚಾರ್ಯರ ಶೃಂಗ 21, 22ಕ್ಕೆ

40 ವರ್ಷಗಳ ಬಳಿಕ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 1 ಜುಲೈ 2025, 13:48 IST
Last Updated 1 ಜುಲೈ 2025, 13:48 IST
ದಾವಣಗೆರೆಯ ಶ್ರೀಶೈಲ ಮಠದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿದರು. ಉಜ್ಜಯಿನಿ ಮಠದ ಸಿದ್ಧಲಿಂಗ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಇದ್ದಾರೆ -ಪ್ರಜಾವಾಣಿ ಚಿತ್ರ
ದಾವಣಗೆರೆಯ ಶ್ರೀಶೈಲ ಮಠದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಮಾತನಾಡಿದರು. ಉಜ್ಜಯಿನಿ ಮಠದ ಸಿದ್ಧಲಿಂಗ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಇದ್ದಾರೆ -ಪ್ರಜಾವಾಣಿ ಚಿತ್ರ   

ದಾವಣಗೆರೆ: ವೀರಶೈವ ಲಿಂಗಾಯತ ಧರ್ಮದ ಪಂಚಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿ 40 ವರ್ಷಗಳ ಬಳಿಕ ನಡೆಯುತ್ತಿದೆ. ಪಂಚಪೀಠಗಳ ಸಾರಥ್ಯದಲ್ಲಿ ಜುಲೈ 21ರಿಂದ ಸಂಘಟಿಸಿರುವ ಎರಡು ದಿನಗಳ ಈ ಸಮ್ಮೇಳನಕ್ಕೆ ಪೂರ್ವಸಿದ್ಧತೆಗಳು ಆರಂಭವಾಗಿವೆ.

ನಗರದ ಪಿ.ಬಿ. ರಸ್ತೆಯ ಶ್ರೀಶೈಲ ಮಠದ ಪಂಚಾಚಾರ್ಯ ಮಂದಿರದಲ್ಲಿ ಸೋಮವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ರಂಭಾಪುರಿ, ಶ್ರೀಶೈಲ, ಉಜ್ಜಯಿನಿ ಹಾಗೂ ಕಾಶಿ ಪೀಠದ ಸ್ವಾಮೀಜಿಗಳು ಪಾಲ್ಗೊಂಡಿದ್ದರು. ಕೇದಾರ ಪೀಠದ ಸ್ವಾಮೀಜಿ ಗೈರಾಗಿದ್ದರು.

‘ರೇಣುಕ ಮಂದಿರದಲ್ಲಿ ಆಯೋಜಿಸಿರುವ ಸಮ್ಮೇಳನ ಪಂಚಪೀಠಾಧೀಶರ ಸಾನ್ನಿಧ್ಯದಲ್ಲಿ ನಡೆಯಲಿದೆ. ಧಾರ್ಮಿಕ, ಸಾಮಾಜಿಕ ಚಿಂತನೆ ಒಳಗೊಂಡ ಸವಿಸ್ತಾರವಾದ ಸಮಾಲೋಚನೆ ನಡೆಸಲಾಗುತ್ತದೆ. ಈ ಶೃಂಗ ಸಮ್ಮೇಳನದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ಉತ್ತರಪ್ರದೇಶ ಸೇರಿ ಅನೇಕ ರಾಜ್ಯಗಳ ವೀರಶೈವ ಪರಂಪರೆಯ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಶೃಂಗಕ್ಕೆ ಪೂರ್ವಭಾವಿಯಾಗಿ ಪಂಚಪೀಠಾಧೀಶರು ಸಮಾಲೋಚನೆ ನಡೆಸಿ ಕೆಲ ನಿರ್ಧಾರಕ್ಕೆ ಬಂದೆವು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಬೆಂಗಳೂರು ನಿವಾಸದಲ್ಲಿ ಮತ್ತೊಮ್ಮೆ ಸಭೆ ಸೇರಿ ಚರ್ಚಿಸಲಾಯಿತು. ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಮುದಾಯದ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಪರಾಮರ್ಶೆ ನಡೆಸಲಾಯಿತು. ಇವುಗಳಿಗೆ ಸ್ಪಷ್ಟ ನಿಲುವು ವ್ಯಕ್ತಪಡಿಸುವ ಉದ್ದೇಶದಿಂದ ಸಮ್ಮೇಳನ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸಮ್ಮೇಳನ ಉದ್ಘಾಟಿಸಲಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಆಶಯ ನುಡಿಗಳನ್ನು ಆಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರದ ಮಾಜಿ ಸಚಿವ ಜಿ.ಎಂ. ಸಿದ್ದೇಶ್ವರ ಸೇರಿದಂತೆ ಹಲವು ಗಣ್ಯರನ್ನು ಸಮಾವೇಶಕ್ಕೆ ಆಹ್ವಾನಿಸಲಾಗುತ್ತದೆ’ ಎಂದರು.

‘ಧಾರ್ಮಿಕ, ಸಾಮಾಜಿಕ ಹಾಗೂ ಆಂತರಿಕ ವಿಚಾರಗಳ ಕುರಿತು ಶೃಂಗದಲ್ಲಿ ಸಮಾಲೋಚನೆ ನಡೆಯಲಿದೆ. ಸಾಮರಸ್ಯ, ಸತ್ಯಶುದ್ಧ ಧಾರ್ಮಿಕ ಆಚರಣೆಗಳಿಗೆ ನಿರ್ದೇಶನ ನೀಡಲಾಗುವುದು. ಸಮಾಜಕ್ಕೆ ಸಮಗ್ರತೆ, ಭಾವೈಕ್ಯ ಹಾಗೂ ವಿಶ್ವ ಬಂಧುತ್ವ ಸಂದೇಶ ನೀಡುವ ಉದ್ದೇಶ ಇದೆ. ಶೃಂಗದಲ್ಲಿ ನಿರ್ಣಯ ಕೈಗೊಂಡು ಸಮಾಜಕ್ಕೆ ಹಾಗೂ ಸರ್ಕಾರಕ್ಕೆ ಸ್ಪಷ್ಟ ಧ್ವನಿ ವ್ಯಕ್ತಪಡಿಸಲಾಗುತ್ತದೆ’ ಎಂದು ಹೇಳಿದರು.

ಉಜ್ಜಯಿನಿ ಮಠದ ಸಿದ್ಧಲಿಂಗ ಸ್ವಾಮೀಜಿ, ಶ್ರೀಶೈಲ ಮಠದ ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಕಾಶಿ ಪೀಠದ ಮಲ್ಲಿಕಾರ್ಜುನ ವಿಶ್ವಾರಾಧ್ಯ ಸ್ವಾಮೀಜಿ ಹಾಜರಿದ್ದರು.

‘ತಾಯಿ ಬೇರಿಗೆ ನೀರೆರೆದರೆ ಫಲ’

‘ವೀರಶೈವ ಧರ್ಮದ ತಾಯಿ ಬೇರು ರೇಣುಕಾದಿ ಪಂಚಾಚಾರ್ಯರು. 12ನೇ ಶತಮಾನದ ಬಸವಾದಿ ಶಿವಶರಣರು ಈ ಧರ್ಮ ವೃಕ್ಷದ ಹೂ ಹಣ್ಣು. ತಾಯಿ ಬೇರಿಗೆ ನೀರು ಎರೆಯದೇ ಹೋದರೆ ಹೂ ಹಣ್ಣು ಪಡೆಯಲು ಸಾಧ್ಯವಿಲ್ಲ. ತಾಯಿ ಬೇರಿಗೆ ನೀರು ಎರೆಯುವ ಕೆಲಸವನ್ನು ಭಕ್ತರು ಮಾಡಬೇಕಿದೆ’ ಎಂದು ವೀರಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು. ‘ವೀರಶೈವ ಧರ್ಮಕ್ಕೆ ರೇಣುಕಾಚಾರ್ಯರ ಕೊಡುಗೆ ಅಪಾರ. ಇವರು ಸ್ಥಾಪಿಸಿದ ಧರ್ಮಕ್ಕೆ ಬಸವಾದಿ ಶರಣರು 12ನೇ ಶತಮಾನದಲ್ಲಿ ಮಾರುಹೋದರು. ರೇಣುಕಾಚಾರ್ಯರು ಪ್ರತಿಪಾದಿಸಿದ ವಿಚಾರಗಳನ್ನು ಬಸವಾದಿ ಶರಣರು ಕನ್ನಡದಲ್ಲಿ ಜನರಿಗೆ ಮನವರಿಕೆ ಮಾಡಿಕೊಟ್ಟರು. ವೀರಶೈವ ಧರ್ಮದ ತತ್ವ ಸಿದ್ಧಾಂತಗಳ ಅರಿವಿಲ್ಲದ ಜನರು ವೀರಶೈವ ಮತ್ತು ಲಿಂಗಾಯತ ಬೇರೆ ಎಂಬ ಧ್ವಂಧ್ವ ಹುಟ್ಟುಹಾಕಿ ಸಮಾಜವನ್ನು ಕಲುಷಿತಗೊಳಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಮುದಾಯ ಒಡೆಯುವ ಯತ್ನ’

‘ವೀರಶೈವ ಸೈದ್ಧಾಂತಿಕ ಪದ. ಲಿಂಗಾಯತ ರೂಢಿಗತ ಪದ. ಇವರೆಡರಲ್ಲಿ ಭೇದ–ಭಾವವನ್ನು ಪಂಚಾಚಾರ್ಯರು ಕಂಡಿಲ್ಲ. ಕೆಲವರು ಸ್ವಾರ್ಥಕ್ಕಾಗಿ ಅಖಂಡ ಸಮುದಾಯವನ್ನು ಛಿದ್ರಗೊಳಿಸಲು ವ್ಯವಸ್ಥಿತ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸಕ್ಕೆ ಹಿನ್ನಡೆ ಆಗುತ್ತಿದೆ’ ಎಂದು ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು. ‘ಹಾನಗಲ್ಲ ಕುಮಾರಸ್ವಾಮಿ ಸ್ವಾಮೀಜಿ ಸಾರಥ್ಯದಲ್ಲಿ 1904ರಲ್ಲಿ ನಡೆದ ಅಖಿಲ ಭಾರತ ವೀರಶೈವ ಮಹಾಸಭಾದ ಮೊದಲ ಅಧಿವೇಶನದಲ್ಲಿ ಇಡೀ ಸಮುದಾಯಕ್ಕೆ ಅನ್ವಯವಾಗುವ ಸೂತ್ರ ಕೈಗೊಳ್ಳಲಾಗಿದೆ. ಕೆಲವರು ಇದನ್ನು ಉಲ್ಲಂಘಿಸಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಬೆರಳೆಣಿಕೆಯಷ್ಟಿರುವ ಇವರಿಂದ ಧರ್ಮಕ್ಕೆ ಆಗುತ್ತಿರುವ ಅಪಚಾರ ತಡೆಗಟ್ಟಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.