ADVERTISEMENT

ದಾವಣಗೆರೆ: ವಿಶ್ವಕನ್ನಡ ಸಮ್ಮೇಳನ, ಗರಿಗೆದರಿದ ವಿಮಾನ ನಿಲ್ದಾಣದ ಕನಸು

ಈಡೇರದ ವೈದ್ಯಕೀಯ ಕಾಲೇಜು ಆರಂಭದ ಭರವಸೆ

ಡಿ.ಕೆ.ಬಸವರಾಜು
Published 18 ಫೆಬ್ರುವರಿ 2023, 4:54 IST
Last Updated 18 ಫೆಬ್ರುವರಿ 2023, 4:54 IST
ತೇಜಸ್ವಿ ಪಟೇಲ್‌
ತೇಜಸ್ವಿ ಪಟೇಲ್‌   

ದಾವಣಗೆರೆ: ಜಿಲ್ಲೆಯಲ್ಲಿ ಮೂರನೇ ವಿಶ್ವಕನ್ನಡ ಸಮ್ಮೇಳನ ನಡೆಸಲು ಬಜೆಟ್‌ನಲ್ಲಿ ಘೋಷಿಸಿರುವುದು ಜಿಲ್ಲೆಯ ಜನರಲ್ಲಿ ಖುಷಿ ನೀಡಿದೆ. ಅಲ್ಲದೇ ಹೊಸ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್)ಯನ್ನು ಮಂಜೂರು ಮಾಡಿರುವುದು ಪ್ರಕೃತಿ ವಿಕೋಪದ ಸಂದರ್ಭದ ತುರ್ತು ನಿರ್ವಹಣೆಗೆ ಅನುಕೂಲವಾಗಲಿದೆ.

ಆದರೆ ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸ್ಥಾಪನೆಯ ಬೇಡಿಕೆ ಈಡೇರಿಲ್ಲ. ಜಿಲ್ಲೆಗೆ ಯಾವುದೇ ಕೈಗಾರಿಕೆಗಳನ್ನು ಘೋಷಿಸಿಲ್ಲ. ಮೆಕ್ಕೆಜೋಳ ಸಂಸ್ಕರಣಾ ಘಟಕ, ಕೃಷಿ ಮತ್ತು ಕೈಗಾರಿಕಾ ಕಾಲೇಜಿನ ಕುರಿತೂ ಬಜೆಟ್‌ನಲ್ಲಿ ಪ್ರಸ್ತಾಪವಿಲ್ಲ. ಮಾಯಕೊಂಡ ತಾಲ್ಲೂಕು ಘೋಷಣೆಗೆ ಬಹಳ ದಿನಗಳಿಂದ ಇರುವ ಬೇಡಿಕೆಯೂ ಈಡೇರದಿದ್ದುದಕ್ಕೆ ಜಿಲ್ಲೆಯ ಜನರಲ್ಲಿ ಸಹಜವಾಗಿಯೇ ನಿರಾಸೆಯಾಗಿದೆ.

ವಿಶ್ವ ಕನ್ನಡ ಸಮ್ಮೇಳನ ನಡೆಸಲು ಈ ಹಿಂದೆ ಹಲವು ಬಾರಿ ಪ್ರಯತ್ನಗಳು ನಡೆದಿದ್ದವು. ಈ ಹಿಂದೆ ವಿಶ್ವ ಕನ್ನಡ ಸಮ್ಮೇಳನಕ್ಕೆ ಅನುದಾನವನ್ನೂ ಘೋಷಿಸಲಾಗಿತ್ತು. ಆದರೆ ಈ ಬಜೆಟ್‌ನಲ್ಲಿ ಅನುದಾನ ಘೋಷಿಸಿಲ್ಲ. ಈಗ ಮುಖ್ಯಮಂತ್ರಿಗೆ ಪತ್ರವನ್ನೂ ಬರೆದು ಆಗ್ರಹಿಸಲಾಗಿತ್ತು. ಜನವರಿ ತಿಂಗಳಲ್ಲಿ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ವಿಶ್ವ ಕನ್ನಡ ಸಮ್ಮೇಳನ ನಡೆಸಲು ನಿರ್ಣಯ ಮಂಡಿಸಿ ಸರ್ಕಾರಕ್ಕೆ ಒತ್ತಡ ಹೇರಲಾಗಿತ್ತು.

ADVERTISEMENT

ಜಗಳೂರು ತಾಲ್ಲೂಕಿನ ವಿವಿಧ ಕೆರೆಗಳನ್ನು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು, ಪ್ರಸಕ್ತ ಸಾಲಿನಲ್ಲಿ ಯೋಜನೆ ಪೂರ್ಣಗೊಳಿಸಲು ಅನುಮತಿ ನೀಡಿರುವುದು ತಾಲ್ಲೂಕಿನ ಜನರಲ್ಲಿ ಹರ್ಷ ಮೂಡಿಸಿದೆ. ಕೆರೆಗಳನ್ನು ತುಂಬಿದಲ್ಲಿ ‘ಬರದ ನಾಡು’ ಎಂಬ ಅಪಖ್ಯಾತಿಯಿಂದ ಜಗಳೂರು ಮುಕ್ತವಾಗುವುದರಲ್ಲಿ ಶಂಕೆಯಿಲ್ಲ.

ಜಿಲ್ಲೆಗೆ ಹೊಸ ಎಸ್‌ಡಿಆರ್‌ಎಫ್ ಕಂಪನಿಯನ್ನು ಮಂಜೂರು ಮಾಡಿರುವುದು ರಾಜ್ಯದ ಮಧ್ಯಭಾಗ ದಲ್ಲಿರುವ ಜಿಲ್ಲೆಗೆ ಸೂಕ್ತವಾಗಿದೆ. ನೆರೆಯ ರಾಜ್ಯಗಳಾದ ಚಿತ್ರದುರ್ಗ, ಹಾವೇರಿ, ಬಳ್ಳಾರಿ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೂ ಇದರಿಂದ ಅನುಕೂಲವಾಗಲಿದೆ.

ಇಎಸ್‌ಐ ಆಸ್ಪತ್ರೆ ಮೇಲ್ದರ್ಜೆಗೆ: ಕಾರ್ಮಿಕರಿಗೆ ಕೈಗೆಟುವ ದರದಲ್ಲಿ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ ಇಎಸ್ಐ ಆಸ್ಪತ್ರೆಯ ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ.

ಸೂರಗೊಂಡನಕೊಪ್ಪದಲ್ಲಿ ಈಚೆಗೆ ನಡೆದ ಸೇವಾಲಾಲ್ ಜಯಂತಿಯಲ್ಲಿ ಸಂತ ಸೇವಾಲಾಲ್ ಕ್ಷೇತ್ರದ ಅಭಿವೃದ್ಧಿಗೆ ₹ 10 ಕೋಟಿ ನೀಡುವ ಭರವಸೆ ನೀಡಿದ್ದರು. ಈಗ ಬಜೆಟ್‌ನಲ್ಲಿ ₹ 5 ಕೋಟಿ ಘೋಷಿಸಲಾಗಿದೆ. ಚನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿರುವ ಷಹಾಜಿ ಮಹರಾಜ್ ಜನ್ಮಸ್ಥಳವನ್ನು ₹ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿರುವುದು ಸಮುದಾಯದ ಜನರ ಬೇಡಿಕೆ ಈಡೇರಿಸಿದಂತಾಗಿದೆ.

ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಕಾರ್ಯಸಾಧ್ಯತಾ ವರದಿಯನ್ನು ಸಿದ್ಧಪಡಿಸಲಾಗಿದ್ದು, ಈ ವರ್ಷದಲ್ಲಿ ದಾವಣಗೆರೆ ವಿಮಾನ ನಿಲ್ದಾಣ ಕಾಮಗಾರಿ ಆರಂಭಿಸುವುದಾಗಿ ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಕೇಂದ್ರ ಸರ್ಕಾರವು 2023-24ನೇ ಸಾಲಿನ ಆಯವ್ಯಯದಲ್ಲಿ ಚಿಕ್ಕಮಂಗಳೂರು, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳ ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಮಾನ್ಯತೆ ದೊರೆತ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರವು ₹ 5,300 ಕೋಟಿ ಅನುದಾನ ಘೋಷಣೆ ಮಾಡಿದೆ. ಈ ಯೋಜನೆಯ ತೀವ್ರ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಕ್ರಮವಹಿಸುವುದು. ₹ 2,611 ಕೋಟಿ ವೆಚ್ಚದಲ್ಲಿ ಚಿತ್ರದುರ್ಗ-ದಾವಣಗೆರೆ-ಹಾವೇರಿ ಮಾರ್ಗದ ಆರು ಫಥದ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ತೀವ್ರಗೊಳಿಸಲು ಬಜೆಟ್‌ನಲ್ಲಿ ಘೋಷಿಸಲಾಗಿದೆ.

........

ಚನ್ನಗಿರಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಸ್ಥಾಪಿಸಬಹುದೆಂಬ ಆಶಯ ಇತ್ತು. ಹರಿಹರ ತಾಲ್ಲೂಕಿನಲ್ಲಿ ಎಥೆನಾಲ್ ಘಟಕ ಆರಂಭಿಸುವುದು ಯಾವಾಗ ಎಂಬುದು ಸ್ಪಷ್ಟವಾಗಿಲ್ಲ.

ತೇಜಸ್ವಿ ಪಟೇಲ್, ರೈತ ಮುಖಂಡ

.........

ವಿಶ್ವ ಕನ್ನಡ ಸಮ್ಮೇಳನ ನಡೆಸಲು ಬಜೆಟ್‌ನಲ್ಲಿ ಘೋಷಿಸಿರುವುದು ಜಿಲ್ಲೆಯ ಜನತೆಗೆ, ಕಲಾವಿದರಿಗೆ, ಕನ್ನಡಪರ ಹೋರಾಟಗಾರರಿಗೆ ಹಾಗೂ ಪರಿಷತ್‌ ಸದಸ್ಯರಿಗೆ ಸಂತಸ ತಂದಿದೆ.

-ಬಿ.ವಾಮದೇವಪ್ಪ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ

.......................

ಬಜೆಟ್‌ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು?

l ಮೂರನೇ ವಿಶ್ವ ಕನ್ನಡ ಸಮ್ಮೇಳನದ ಆತಿಥ್ಯ

l ಜಗಳೂರು ತಾಲ್ಲುಕಿನ ಕೆರೆ ಭರ್ತಿ ಯೋಜನೆ

l ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನಕ್ಕೆ ಬದ್ಧ

l ಸೂರಗೊಂಡನಕೊಪ್ಪ ಅಭಿವೃದ್ಧಿಗೆ ₹ 5 ಕೋಟಿ

l ಹೊದಿಗೆರೆ: ಷಹಾಜಿ ಮಹಾರಾಜ ಸಮಾಧಿ ಅಭಿವೃದ್ಧಿಗೆ ₹ 5 ಕೋಟಿ

lಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ನಿರ್ಮಾಣ

l ಎಸ್‌ಡಿಆರ್‌ಎಫ್ ಮಂಜೂರು, ಶೋಧನಾ-ರಕ್ಷಣಾ ಉಪಕರಣಕ್ಕೆ ₹ 30 ಕೋಟಿ.

l ಇಎಸ್ಐ ಆಸ್ಪತ್ರೆಯಲ್ಲಿ ಹಾಸಿಗೆ ಸಾಮರ್ಥ್ಯ ಹೆಚ್ಚಳ

l ಚಿತ್ರದುರ್ಗ- ದಾವಣಗೆರೆ- ಹಾವೇರಿ ಷಟ್ಪಥ ಹೆದ್ದಾರಿ ಅಭಿವೃದ್ಧಿ

l ದಾವಣಗೆರೆ ‘ಸ್ಮಾರ್ಟ್‌ಸಿಟಿ’ ಕಾಮಗಾರಿ ಪೂರ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.