ADVERTISEMENT

ಭದ್ರಾವತಿ| ವಿಐಎಸ್‌ಎಲ್‌ನಲ್ಲಿ ಉತ್ಕೃಷ್ಟ ದರ್ಜೆ ಉಕ್ಕು ಉತ್ಪಾದನೆ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 7:40 IST
Last Updated 25 ಜನವರಿ 2026, 7:40 IST
ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆಯಲ್ಲಿ ಪ್ರದರ್ಶಿಸಿದ ಮಲ್ಲಿ ಹಗ್ಗ ಕ್ರೀಡೆಯ ನೋಟ
ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆಯಲ್ಲಿ ಪ್ರದರ್ಶಿಸಿದ ಮಲ್ಲಿ ಹಗ್ಗ ಕ್ರೀಡೆಯ ನೋಟ   

ಭದ್ರಾವತಿ: ಆಂಧ್ರ ಪ್ರದೇಶದ ವಿಶಾಖಪಟ್ಟಣದ ಉಕ್ಕಿನ ಕಾರ್ಖಾನೆಯ ಮಾದರಿಯಲ್ಲಿಯೇ ಭದ್ರಾವತಿಯ ವಿಐಎಸ್‌ಎಲ್‌ ಪುನಶ್ಚೇತನಗೊಳಿಸಿ, ವಿದೇಶದಿಂದ ಈಗ ಆಮದು ಮಾಡಿಕೊಳ್ಳುತ್ತಿರುವ ಉತ್ಕೃಷ್ಟ ದರ್ಜೆಯ ಉಕ್ಕನ್ನು ಇಲ್ಲಿಯೇ ಉತ್ಪಾದಿಸಲು ನಿರ್ಧರಿಸಿದ್ದೇವೆ ಎಂದು ಕೇಂದ್ರದ ಉಕ್ಕು ಹಾಗೂ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಒಪ್ಪಿಸಿ
ವಿಶಾಖಪ‍ಟ್ಟಣದ ಉಕ್ಕಿನ ಕಾರ್ಖಾನೆಯ ₹35,000 ಕೋಟಿ ಸಾಲ ತೀರಿಸಿ ಪುನರ್‌ ಆರಂಭಿದ್ದೇನೆ. ಈಗ ಅಲ್ಲಿ ನಿತ್ಯ 21 ಟನ್ ಉಕ್ಕು ಉತ್ಪಾದನೆ ಆಗುತ್ತಿದೆ. ಅದೇ ರೀತಿ ವಿಐಎಸ್‌ಎಲ್ ಕೂಡ ಉಕ್ಕು ಉತ್ಪಾದನೆ ಮಾಡಲಿದೆ ಎಂದರು.

ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ತರಳಬಾಳು ಮಠದ ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, 1923ರಲ್ಲಿ ಸರ್‌ ಎಂ.ವಿಶ್ವೇಶರಾಯ ಕಾರ್ಖಾನೆ ರಾಜಪ್ರಭುತ್ವದಲ್ಲಿಯೇ ಚೆನ್ನಾಗಿತ್ತು. ಈಗ ಪ್ರಜಾಪ್ರಭುತ್ವದ ಕಾಲದಲ್ಲಿ ಹಾಳು ಹಂಪೆಯಾಗಿದೆ ಎಂದು ಬೇಸರ
ವ್ಯಕ್ತಪಡಿಸಿದರು.

ADVERTISEMENT

ಯಡಿಯೂರಪ್ಪ ಸಿಎಂ ಆಗಿದ್ದಾಗ ಜಗಳೂರು, ಭರಮಸಾಗರ, ಹಳೇಬೀಡು ಏತ ನೀರಾವರಿ ಯೋಜನೆಗಳಿಗೆ ನೂರಾರು ಕೋಟಿ ಕೊಟ್ಟಿದ್ದಾರೆ. ಅಧಿಕಾರದಲ್ಲಿ ಇರಲಿ, ಇಲ್ಲದೇ ಇರಲಿ ಅವರ ನೆರವು ಸ್ಮರಿಸುತ್ತೇವೆ. ಅದೇ ರೀತಿ ಕುಮಾರಸ್ವಾಮಿ ಕೂಡ ಈಗ ವಿಐಎಸ್‌ಎಲ್ ವಿಚಾರದಲ್ಲಿ ನೆರವು ನೀಡಲಿ ಎಂದರು.

ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ,  ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ರೈತರ ಬಗ್ಗೆ ಕಳಕಳಿಯಿಂದ ಏತ ನೀರಾವರಿ ಯೋಜನೆ ಜಾರಿ ಮಾಡಿದರು. ರೈತರ ಕಲ್ಯಾಣ ಮಾಡಿ ಸಿರಿಗೆರೆ ಶ್ರೀಗಳು ಇತಿಹಾಸ ನಿರ್ಮಿಸಿದ್ದಾರೆ. ಶೂದ್ರರಿಗೆ ಶಿಕ್ಷಣ ದೊರೆಯದ ಕಾಲಘಟ್ಟದಲ್ಲಿ, ಅವರನ್ನು ಒಳಗಡೆಯೂ ಸೇರಿಸದ ಸ್ಥಿತಿ ಇದ್ದಾಗ ಎಲ್ಲ ಮಕ್ಕಳಿಗೆ ಒಂದೇ ಶಾಲೆ–ಕಾಲೇಜು ಹಾಸ್ಟೆಲ್ ವ್ಯವಸ್ಥೆ ಕಲ್ಪಿಸುವ ಕಾರ್ಯವನ್ನು ಮಠ ಮಾಡುತ್ತಾ ಬಂದಿದೆ ಎಂದು ಶ್ಲಾಘಿಸಿದರು.

ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಶಾಸಕಿ ಶಾರದಾ ಪೂರ್ಯಾನಾಯ್ಕ, ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ಎನ್. ಭೋಜೇಗೌಡ, ಶಾಸಕ ಬಿ.ಕೆ.ಸಂಗಮೇಶ್ವರ, ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು, ಹರಿಹರ ಶಾಸಕ ಬಿ.ಪಿ.ಹರೀಶ್‌, ಮಾಜಿ ಸಚಿವ ಸಾ.ರಾ.ಮಹೇಶ್, ಜೆಡಿಎಸ್ ಮುಖಂಡರಾದ ಶಾರದಾ ಅಪ್ಪಾಜಿ, ಶ್ರೀಮದ್ ಸಾಧು ಸದ್ಧರ್ಮ ಸಂಸ್ಥೆಯ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ ವೇದಿಕೆಯಲ್ಲಿದ್ದರು.

ಪ್ರೊ.ಶಂಭು ವಿ.ಬಳಿಗಾರ, ಕುವೆಂಪು ವಿವಿ ಕುಲಪತಿ ಪ್ರೊ.ಶರತ್ ಅನಂತಮೂರ್ತಿ, ರಂಗ ಕಲಾವಿದ ಅರುಣ್‌ ಸಾಗರ್, ಶುಭಾ ಮರವಂತೆ ಉಪನ್ಯಾಸ
ನೀಡಿದರು.

ತರಳಬಾಳು ಹುಣ್ಣಿಮೆಯ ಸಂಚಾಲಕರಾದ ಸಂಜೀವ ಕುಮಾರ್‌, ಮಂಗೋಟೆ ರುದ್ರೇಶ್, ಶಾಂತಪ್ಪ, ಎಸ್.ಎಂ.ಚಂದ್ರಪ್ಪ, ಮಹೇಶ್ವರಪ‍್ಪ, ಮಲ್ಲೇಶಪ್ಪ ಹಾಜರಿದ್ದರು.

ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿದರು
ಭದ್ರಾವತಿಯಲ್ಲಿ ಶನಿವಾರ ಆರಂಭವಾದ ತರಳಬಾಳು ಹುಣ್ಣಿಮೆಯಲ್ಲಿ ಪಾಲ್ಗೊಂಡ ಜನಸ್ತೋಮ
ಗೀತೆ ವಚನಗಳ ಸಾರವನ್ನು ಜ್ಞಾಪಿಸಿಕೊಂಡು ಜಾಗೃತರಾಗಲು ತರಳಬಾಳು ಹುಣ್ಣಿಮೆಯಂತಹ ಕಾರ್ಯಕ್ರಮಗಳು ಅಗತ್ಯ
ಸುಗುಣೇಂದ್ರ ತೀರ್ಥ ಸ್ವಾಮೀಜಿ ಪುತ್ತಿಗೆ ಮಠ ಉಡುಪಿ
ವಿಐಎಸ್‌ಎಲ್‌ನ 150 ಎಕರೆ ಜಾಗ ಕಸದ ಗುಂಡಿಯಾಗಿತ್ತು. ತರಳಬಾಳು ಹುಣ್ಣಿಮೆಗಾಗಿ ಸ್ವಚ್ಛಗೊಂಡಿದೆ. ಮತ್ತೆ ಕಸ ಬೀಳದಂತೆ ಬೇಲಿ ಹಾಕಿ ರಕ್ಷಿಸಲಿ
ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಿರಿಗೆರೆ ಮಠ
ಭದ್ರಾವತಿಯ ಭವ್ಯ ಇತಿಹಾಸ ಮರುಕಳಿಸುವ ಸಮಯ ಹತ್ತಿರ ಬಂದಿದೆ. ಶ್ರೀಗಳು ಮೊದಲ ಕಾಣಿಕೆ ಆಗಿ ₹5 ಕೋಟಿ ಘೋಷಣೆ ಮಾಡಿರುವುದು ಶ್ಲಾಘನೀಯ
ಬಿ.ವೈ.ರಾಘವೇಂದ್ರ ಶಿವಮೊಗ್ಗ ಸಂಸದ
ಶರಣರ 22000 ವಚನಗಳನ್ನು ಇ–ತಂತ್ರಾಂಶದಲ್ಲಿ ಅಳವಡಿಸಿ ಜನರಿಗೆ ಸಿಗುವಂತೆ ಮಾಡಿದ ಶ್ರೇಯ ಸಿರಿಗೆರೆ ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಸಲ್ಲುತ್ತದೆ
ಗೋವಿಂದ ಕಾರಜೋಳ ಸಂಸದ

ಮಹಾಮಂಟಪಕ್ಕೆ ಮೆರವಣಿಗೆಯಲ್ಲಿ ಕರೆತಂದರು.

ಶನಿವಾರ ಬೆಳಿಗ್ಗೆ ಸಿರಿಗೆರೆಯಿಂದ ಹೊರಟ ತರಳಬಾಳು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಭದ್ರಾವತಿಯ ಎಪಿಎಂಸಿ ಬಳಿ ಸ್ವಾಗತಿಸಲಾಯಿತು. ರಂಗಪ‍್ಪ ಸರ್ಕಲ್ ಮಾಧವಾಚಾರ್ ವೃತ್ತ ಹಾಲಪ್ಪ ಸರ್ಕಲ್ ಬಿ.ಎಚ್‌.ರಸ್ತೆಯ ಅಂಬೇಡ್ಕರ್ ವೃತ್ತ ಉಂಬ್ಳೆಬೈಲು ರಸ್ತೆ ಮಾರ್ಗವಾಗಿ ಪ್ರೊ.ಕೃಷ್ಣಪ್ಪ ವೃತ್ತ ಅಲ್ಲಿಂದ ಮಿಲ್ಟ್ರಿ ಕ್ಯಾಂಪ್‌ ಮೂಲಕ ಮೈದಾನಕ್ಕೆ ಮೆರವಣಿಗೆಯಲ್ಲಿ ಕರೆತರಲಾಯಿತು. ಅಪಾರ ಸಂಖ್ಯೆಯ ವಾಹನಗಳು ಅವರನ್ನು ಹಿಂಬಾಲಿಸಿದವು. ಈ ವೇಳೆ ಪಟಾಕಿ ಸಿಡಿಸಲಾಯಿತು. ಶ್ರೀಗಳ ಆಗಮನದ ದಾರಿಯುದ್ದಕ್ಕೂ ಬಾಳೆಕಂದು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಹಿರಿಯ ಜಗದ್ಗುರು ಲಿಂಗೈಕ್ಯ ಶಿವಕುಮಾರ ಶ್ರೀ ಸ್ಮರಣೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಮಾತನಾಡುವಾಗ ಮೈಕ್ ತೊಂದರೆ ಆಗಿ ಕೆಲ ಸಮಯ ಕಾರ್ಯಕ್ರಮಕ್ಕೆ ಅಡಚಣೆಯುಂಟಾಯಿತು.

ತರಳಬಾಳು ಹುಣ್ಣಿಮೆಯಲ್ಲಿ ಇಂದು ಆರೋಗ್ಯ ಮತ್ತು ಸಮಾಜ ಸಂಜೆ 6.30: ಆಶೀರ್ವಚನ–ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅತಿಥಿಗಳು: ಸಂಸದರಾದ ಡಾ.ಸಿ.ಎನ್.ಮಂಜುನಾಥ್ ಡಾ.ಪ್ರಭಾ ಮಲ್ಲಿಕಾರ್ಜುನ್ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿಇಂಗ್ಲೆಂಡ್‌ನ ಜೆಸ್ಟರ್ ಫೀಲ್ಡ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ಎಸ್.ಶಿವಪ್ರಸಾದ್. ಉಪನ್ಯಾಸ: ಡಾ.ಎಚ್.ಜೆ.ವಿಜಯಕುಮಾರ್ ಡಾ.ಗಿರಿಧರ ಕಜೆ ಡಾ.ಸಿ.ಎನ್.‍ಪಾಟೀಲ್ ಕೋಗಳಿ ಕೊಟ್ರೇಶ್. ವಿಶೇಷ ಆಹ್ವಾನಿತರು: ಡಾ.ಧನಂಜಯ ಸರ್ಜಿ. ಸಾಂಸ್ಕೃತಿಕ ಕಾರ್ಯಕ್ರಮ: ಸಿರಿಗೆರೆಯ ಅಕ್ಕನ ಬಳಗ ತರಳಬಾಳು ಸ್ಪೋರ್ಟ್ಸ್ ಅಕಾಡೆಮಿಯಿಂದ ಯೋಗಾಸನ ದಾವಣಗೆರೆಯ ಬಾಪೂಜಿ ದಂತ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಂದ ಕಿರುನಾಟಕ ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಲಾವಣಿ ನೃತ್ಯ ಕಥಕ್ ನೃತ್ಯ.

ಮಹಾಮಂಟಪದ ಸುತ್ತಲೂ ಮಿನಿ ಮಾರ್ಕೆಟ್

ಮೈದಾನದ ಸುತ್ತಲೂ ಅಪಾರ ಸಂಖ್ಯೆಯಲ್ಲಿ ತಿಂಡಿ–ತಿನಿಸಿನ ಅಂಗಡಿಗಳ ತೆರೆದಿದ್ದು ಮಲೆನಾಡು ಮಧ್ಯ ಕರ್ನಾಟಕ ಉತ್ತರ ಕರ್ನಾಟಕ ಭಾಗದ ಊಟೋಪಹಾರದ ಗಮ್ಮತ್ತು ಅಲ್ಲಿ ಕಾಣಸಿಕ್ಕಿತು. ಖಾರ ಮಂಡಕ್ಕಿ ಮಿರ್ಚಿ ಬಜಿ ಬೆಣ್ಣೆದೋಸೆಯ ಘಮ ಕೂಡ ಇತ್ತು. ಮಧ್ಯಾಹ್ನದಿಂದಲೇ ಮಹಾಮಂಟಪಕ್ಕೆ ಬರುತ್ತಿದ್ದವರು ಚಹಾ ಊಟೋಪಹಾರಕ್ಕೆ ಅವುಗಳನ್ನು ಆಶ್ರಯಿಸಿದರು. ಹೋಟೆಲ್‌ ಮಾತ್ರವಲ್ಲದೇ ಟ್ರ್ಯಾಕ್ಟರ್ ಕೃಷಿ ಉಪಕರಣ ವೈವಿಧ್ಯಮಯ ಸಾಮಗ್ರಿಗಳ ಮಾರಾಟವೂ ಭರದಿಂದ ನಡೆದಿದ್ದು ಮಿನಿ ಮಾರುಕಟ್ಟೆಯೇ ಸೃಷ್ಟಿಯಾಗಿತ್ತು. ಮಹಾಮಂಟಪದ ಭಿತ್ತಿಯ ಮೇಲೆ ಮಠಕ್ಕೆ ಭೇಟಿ ಕೊಟ್ಟಿದ್ದ ಗಣ್ಯರು ಮಠದ ಇತಿಹಾಸ ಬಿಂಬಿಸುವ ಚಿತ್ರಗಳನ್ನು ಹಾಕಿದ್ದು ಅದನ್ನು ವೀಕ್ಷಿಸಿ ಸೆಲ್ಫಿ ತೆಗೆದುಕೊಂಡು ಮುನ್ನಡೆದರು. ಪೂರ್ಣಕುಂಭ ಹೊತ್ತ ಮಹಿಳೆಯರು ಗಣ್ಯರನ್ನು ವೇದಿಕೆಗೆ ಕರೆತಂದರು. ನಾಡಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಚುಮು ಚುಮು ಚಳಿಯ ನಡುವೆ ಕುಳಿತು ನೆರೆದ ಸಾವಿರಾರು ಜನರು ಕಣ್ತುಂಬಿಕೊಂಡರು. ತರಳಬಾಳು ಕಲಾ ಸಂಘದ ವಿದ್ಯಾರ್ಥಿಗಳು ಪ್ರದರ್ಶಿಸಿದ ಮಲ್ಲಿಹಗ್ಗ ಕ್ರೀಡೆ ನೆರೆದವರ ಮೈನವಿರೇಳಿಸಿತು. ಸಿರಿಗೆರೆ ಸಿಬಿಎಸ್‌ಸಿ ಶಾಲೆ ಭದ್ರಾವತಿಯ ನಟರಾಜ ಸಂಗೀತ ಕಲಾಕೇಂದ್ರದ ಮಕ್ಕಳು ಭರತನಾಟ್ಯ ಪ್ರದರ್ಶಿಸಿದರು.

‘ಶಿವಕುಂಜರ’ ರೋಬೊ ಆನೆಯ ಗಮ್ಮತ್ತು ದಂತ ವಿಶೇಷ ವಸ್ತ್ರ ವಿನ್ಯಾಸದೊಂದಿಗೆ ಅಲಂಕೃತಗೊಂಡ ಸಿರಿಗೆರೆ ಮಠದ ರೋಬೊ ಆನೆ ‘ಶಿವಕುಂಜರ’ ನೆರೆದವರ ಗಮನ ಸೆಳೆಯಿತು. ಮಹಾಮಂಟಪದ ಬಳಿ ಸೊಂಡಿಲು ಕಿವಿ ಆಡಿಸುತ್ತಾ ನಿಂತು ಜೀವಂತ ಆನೆಯಂತೆ ಕಾಣುತ್ತಿದ್ದ ಅದರ ಬಳಿಗೆ ತೆರಳಿ ಕುತೂಹಲದಿಂದ ಮೈದಡವಿದರು. ಅದರ ಜೊತೆ ನಿಂತು ಹಲವರು ಸೆಲ್ಫಿ ತೆಗೆದುಕೊಂಡರು. ಸರ್ ಎಂ.ವಿಶ್ವೇಶ್ವರಯ್ಯ ಹೆಸರಿನ ಮಹಾಮಂಟಪ ಹಾಗೂ ಅಕ್ಕಮಹಾದೇವಿ ಮಹಾದ್ವಾರದ ಎದುರು ನಿಂತು ಹಲವರು ಚಿತ್ರ ತೆಗೆಸಿಕೊಂಡರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಸ್ವಾಗತಕ್ಕೆ ರಂಗೋಲಿ ಹಾಕಿ ರಸ್ತೆಯನ್ನು ಸಿಂಗರಿಸಲಾಗಿತ್ತು. ಮಹಾಮಂಟಪಕ್ಕೆ ಬರುವ ರಸ್ತೆಗಳಲ್ಲಿ ಎಲ್ಲಿಯೂ ವಾಹನ ಸಂಚಾರ ದಟ್ಟಣೆ ಉಂಟಾಗದಂತೆ ತಡೆಯಲು ಹಾಗೂ ದೂಳು ಹರಡದಂತೆ ತಡೆಯಲು ಸ್ವಯಂ ಸೇವಕರು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಿದ್ದರು.  ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸಮಾರಂಭಕ್ಕೆ ಬರುವುದು ಕೊಂಚ ತಡವಾಯಿತು. ಹಿಂದೂಸ್ತಾನಿ ಗಾಯಕರಾದ ವಿದ್ವಾನ್ ನೌಶಾದ್ ಮತ್ತು ನಿಶಾದ್‌ ವಚನಗೀತೆಗಳನ್ನು ಪ್ರಸ್ತುತಪಡಿಸಿ ನೆರೆದವರನ್ನು ಮುದಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.