ADVERTISEMENT

ಬಿಜೆಪಿ ಬಂಡಾಯ ಅಭ್ಯರ್ಥಿಗೆ ವಾರ್ಡ್‌ ಅಧ್ಯಕ್ಷರ ಬೆಂಬಲ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 12:03 IST
Last Updated 4 ನವೆಂಬರ್ 2019, 12:03 IST

ದಾವಣಗೆರೆ: ಪಾಲಿಕೆಯ 42ನೇ ವಾರ್ಡ್‌ನಲ್ಲಿ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ನಿಂತಿರುವ ಪ್ರೀತಿ ರವಿಕುಮಾರ್ ಅವರಿಗೆ ವಾರ್ಡ್‌ ಅಧ್ಯಕ್ಷರು ಮತ್ತು ಬೂತ್‌ ಮಟ್ಟದ ಅಧ್ಯಕ್ಷರು ಬೆಂಬಲ ಸೂಚಿಸಿದ್ದಾರೆ.

ಮಾಜಿ ಶಾಸಕ ಟಿ. ಗುರುಸಿದ್ಧನಗೌಡ್ರು ಮತ್ತು ವಾರ್ಡ್‌ ಅಧ್ಯಕ್ಷ ಶಿವಾಜಿರಾವ್‌ ಜೊಳ್ಳೆ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿವರ ನೀಡಿದರು.

‘ನಾಲ್ಕು ಬಾರಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೆ. ತುಂಬಾ ಮಂದಿ ಆಕಾಂಕ್ಷಿಗಳಿದ್ದಾಗ ಅವರನ್ನು ಮಾತನಾಡಿಸಿ ನಿಮ್ಮಲ್ಲೇ ಮೊದಲು ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದು ತಿಳಿಸಿ ಕೊನೆಗೇ ಉಳಿಯುವ ಒಂದಿಬ್ಬರಲ್ಲಿ ಒಬ್ಬರನ್ನು ಕೋರ್‌ ಕಮಿಟಿ ಆಯ್ಕೆ ಮಾಡುತ್ತಿತ್ತು. ಕಾರ್ಯಕರ್ತರಿಂದ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಈ ಬಾರಿ ಕೋರ್‌ ಕಮಿಟಿಯ 8 ಮಂದಿಯಲ್ಲಿ ನಾನೂ ಇದ್ದೆ. ಮೊದಲ ಸಭೆಯಲ್ಲಿ ಭಾಗವಹಿಸಿದ್ದೆ. ಎರಡನೇ ಸಭೆಗೆ ಬರಲು ಹೇಳಿ, ಅಲ್ಲಿ ಸಭೆಯೇ ನಡೆಸದೇ ಬೇರೆಲ್ಲೋ ಸಭೆ ನಡೆಸಿದ್ದಾರೆ. ಇಂಥ ಸರ್ವಾಧಿಕಾರದಿಂದ ಮನನೊಂದಿದ್ದೇನೆ’ ಎಂದು ಗುರುಸಿದ್ಧನಗೌಡ್ರು ಹೇಳಿದರು.

ADVERTISEMENT

ನಾನು ಅಧ್ಯಕ್ಷನಾಗಿರುವಾಗ, ಶಾಸಕನಾಗಿರುವಾಗ, ಆಮೇಲೆಯೂ ನನ್ನ ಮಕ್ಕಳಿಗೆ ಸೀಟು ಕೇಳಿರಲಿಲ್ಲ. ಆದರೆ ಪಕ್ಷ ನಡೆಸಿಕೊಂಡ ರೀತಿಯಿಂದಾಗಿ ಸೊಸೆಯನ್ನು ನಿಲ್ಲಿಸಿದ್ದೇನೆ. ಇನ್ನೊಬ್ಬರು ಆಕಾಂಕ್ಷಿಯಾಗಿದ್ದ ಪಾರ್ವತಿ ಕೆ. ಪಾಟೀಲ್‌ ಅವರಿಗೂ ಟಿಕೆಟ್‌ ನೀಡಿಲ್ಲ. ಹಾಗಾಗಿ ಅವರೂ ಬಂಡಾಯವಾಗಿ ನಾಮಪತ್ರ ಸಲ್ಲಿಸಿದ್ದರು. ಅವರು ಪ್ರೀತಿಗೆ ಬೆಂಬಲ ಸೂಚಿಸಿ ನಾಮಪತ್ರ ವಾಪಸ್‌ ಪಡೆಯಲಿದ್ದಾರೆ ಎಂದು ತಿಳಿಸಿದರು.

ಪ್ರೀತಿ ರವಿಕುಮಾರ್‌ ಮಾತನಾಡಿ, ‘ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗ ಇರುವ ಸಿದ್ಧವೀರಪ್ಪ ಬಡಾವಣೆಯು ಕೊಳಚೆಗೇರಿಯಂತೆಯೇ ಇದೆ. ಅದರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ. ನನ್ನನ್ನು, ಪಾರ್ವತಿಯವರನ್ನು ಅಥವಾ ಪಕ್ಷಕ್ಕಾಗಿ ಕೆಲಸ ಮಾಡಿದ ಬಡವಾಣೆಯ ಯಾರನ್ನಾದರೂ ಅಭ್ಯರ್ಥಿಯನ್ನಾಗಿ ಮಾಡಿದ್ದರೆ ಅರ್ಥವಿತ್ತು. ಹೊರಗಿನವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ಹಾಗಾಗಿ ನಾನು ಮತ್ತು ಪಾರ್ವತಿ ಮಾತನಾಡಿಕೊಂಡಿದ್ದೇವೆ. ನಾನು ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿರುವೆ’ ಎಂದರು.

‘ಪಕ್ಷಕ್ಕಾಗಿ ದುಡಿಯುತ್ತಿದ್ದರೂ ಹೊರಗಿನವರಿಗೆ ಬಿ ಫಾರ್ಮ್‌ ಕೊಟ್ಟಿರುವುದರಿಂದ ನೋವಾಗಿ ಇಡೀ ದಿನ ಅತ್ತಿದ್ದೇನೆ. ಪ್ರೀತಿ ಅವರಿಗೆ ಬೆಂಬಲವಾಗಿ ನಿಂತು ಕೆಲಸ ಮಾಡುವೆ. ಪಕ್ಷಕ್ಕೆ ರಾಜೀನಾಮೆ ನೀಡುವುದಿಲ್ಲ’ ಎಂದು ಪಾರ್ವತಿ ಕೆ. ಪಾಟೀಲ್‌ ಸ್ಪಷ್ಟಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಾರ್ಡ್‌ನ ವಿವಿಧ ಬೂತ್‌ಗಳ ಅಧ್ಯಕ್ಷರಾದ ಕೊಟ್ಟೂರು ಗೌಡ್ರು, ವೇಮಣ್ಣ, ದಿನೇಶ್‌ ಕುಮಾರ್‌, ಸಿದ್ದಪ್ಪ, ಬಣಕಾರ್‌ ಅವರೂ ಇದ್ದರು.

‘ಪೊಲೀಸ್‌ ಗುಂಡಿಗೆ ಎದೆಕೊಟ್ಟವರು ಪಕ್ಷ ಬೆಳೆಯಲು ಕಾರಣ’

‘ಪಕ್ಷವನ್ನು ನಾವು ಬೆಳೆಸಿದ್ದು ಎಂದು ನಾನು ಗುರುಸಿದ್ಧನಗೌಡ, ರವೀಂದ್ರನಾಥ್‌, ಸಿದ್ದೇಶ್ವರ ಅಥವಾ ಯಡಿಯೂರಪ್ಪ, ಈಶ್ವರಪ್ಪ ಹೇಳಬಹುದು. ಆದರೆ ಅಡ್ವಾಣಿ ರಥಯಾತ್ರೆಯ ಸಂದರ್ಭದಲ್ಲಿ ಪೊಲೀಸರ ಗುಂಡಿಗೆ ಎದೆಕೊಟ್ಟ ಅಮಾಯಕ ಜನರು ಕಾರಣ. ಅದರ ಮೇಲೆ ರಾಜಕಾರಣ ಮಾಡಿ ಪಕ್ಷ ಬೆಳೆದಿದೆ. ದಾವಣಗೆರೆಯಲ್ಲಿ ಆ ರೀತಿಯಲ್ಲಿ ಮೃತಪಟ್ಟ 8 ಮಂದಿಯ ಕುಟುಂಬಕ್ಕೆ ಕನಿಷ್ಠ 40*60 ಸೈಟಾದರೂ ಕೊಡಿಸಿ. ಅವರು ಯಾವುದೇ ಪಕ್ಷದಲ್ಲಿ ಇರಲಿ’ ಎಂದು ಮಾಜಿ ಶಾಸಕ ಗುರುಸಿದ್ಧನಗೌಡ ಹೇಳಿದರು.

ಬಂಡಾಯ ಎದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವ ಈಶ್ವರಪ್ಪ ಚರ್ಚೆಗೆ ಬರಲಿ. ಯಾರು ತಪ್ಪು ಮಾಡಿದ್ದಾರೆ ಎಂದು ಜನರಿಗೆ ತಿಳಿಯಲಿ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.