ADVERTISEMENT

ಮರಳಿ ಬಾರದ ಲೋಕಕ್ಕೆ ಯೋಧನ ಪಯಣ

ಬೈಕ್ ಅಪಘಾತದಲ್ಲಿ ಹಲುವಾಗಲು ಗ್ರಾಮದ ಯೋಧ ತಿಪ್ಪನಹಳ್ಳಿ ಬಸವರಾಜ್ ಸಾವು

ಪ್ರಹ್ಲಾದಗೌಡ ಗೊಲ್ಲಗೌಡರ
Published 29 ಜೂನ್ 2019, 15:29 IST
Last Updated 29 ಜೂನ್ 2019, 15:29 IST
ಯೋಧ ತಿಪ್ಪನಹಳ್ಳಿ ಬಸವರಾಜ್ ಮನೆ ಎದುರು ಸೇರಿದ್ದ ಸಂಬಂದಿ ಹಾಗೂ ಗೆಳೆಯರು.
ಯೋಧ ತಿಪ್ಪನಹಳ್ಳಿ ಬಸವರಾಜ್ ಮನೆ ಎದುರು ಸೇರಿದ್ದ ಸಂಬಂದಿ ಹಾಗೂ ಗೆಳೆಯರು.   

ಹರಪನಹಳ್ಳಿ: ಹೊಸದೊಂದು ಮನೆ ಕಟ್ಟಿ ಎಲ್ಲರಂತೆ ಬದುಕು ಸಾಗಿಸು ಸುಂದರ ಕನಸು ಕಟ್ಟಿಕೊಂಡಿದ್ದ ಆ ಬಡಕುಟುಂಬಕ್ಕೆ ಶುಕ್ರವಾರ ‘ಅಶುಭ’ ಸಂದೇಶ ಹೊತ್ತು ತಂದಿತ್ತು. ಆ ಮನೆಗೆ ಆಸರೆಯಾಗಿದ್ದ ಮಗನನ್ನೇ ವಿಧಿಯಾಟ ಬಲಿ ಪಡೆದಿತ್ತು.

ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಬೈಕ್ ಅಪಘಾತದಲ್ಲಿ ಹರಪನಹಳ್ಳಿ ತಾಲ್ಲೂಕಿನ ಹಲುವಾಗಲು ಗ್ರಾಮದ ಯೋಧ ತಿಪ್ಪನಹಳ್ಳಿ ಬಸವರಾಜ್ (30) ಮೃತಪಟ್ಟಿದ್ದಾರೆ. ಬಾಳಿ ಬದುಕಬೇಕಾದ ಮಗನನ್ನೇ ಕಳೆದುಕೊಂಡಿರುವ ಆ ಕುಟುಂಬಕ್ಕೆ ಬೀರು ಬಿಸಿಲಿನಲ್ಲಿ ಬರ ಸಿಡಿಲು ಬಡಿದಂತಾಗಿದೆ.

ಹನುಮಂತಪ್ಪ-ದುರುಗಮ್ಮ ದಂಪತಿಯ ಕಿರಿಯ ಪುತ್ರ ಬಸವರಾಜ್. ಉತ್ತರಾಖಂಡ ಹರಿದ್ವಾರದ ಪತಂಜಲಿ ಯೂನಿಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತ ಯೋಧನಿಗೆ ದುರುಗಪ್ಪ, ಮಂಜುನಾಥ ಇಬ್ಬರು ಸಹೋದರರು, ರೇಣುಕಾ ಸಹೋದರಿ ಇದ್ದಾರೆ. 1ನೇ ತರಗತಿಯಿಂದ 11ನೇ ತರಗತಿವರೆಗೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮುಗಿಸಿ ಹರಪನಹಳ್ಳಿ ಎಸ್‌ಯುಜೆಎಂ ಕಾಲೇಜಿನಲ್ಲಿ ಪಿ.ಯು. ಪೂರ್ಣಗೊಳಿಸಿದ್ದರು. ಮೈಸೂರು ಸುತ್ತೂರು ಮಠದಲ್ಲಿ ಡಿ.ಇಡಿ. ಶಿಕ್ಷಕರ ತರಬೇತಿ ಪಡೆದಿದ್ದರು.

ADVERTISEMENT

ತಗಡಿನ ಶೆಡ್ ಅಲ್ಲಿ ವಾಸವಾಗಿರುವ ತಿಪ್ಪನಹಳ್ಳಿ ಕುಟುಂಬಕ್ಕೆ ಮನೆಯೊಂದು ಬಿಟ್ಟರೆ ಬೇರೆ ಆಸ್ತಿ ಇಲ್ಲ. ಸದ್ಯ ಈಗಿರುವ ಮನೆ ಪಕ್ಕದಲ್ಲೇ ಹೊಸದೊಂದು ಮನೆ ಕಟ್ಟಿಕೊಳ್ಳುತ್ತಿದೆ. ಈ ಮನೆ ನಿರ್ಮಾಣದಲ್ಲಿ ಬಸವರಾಜ ಆಸಕ್ತಿ ಹಾಗೂ ಉಸ್ತುವಾರಿ ಹೆಚ್ಚಿತ್ತು. ಅದನ್ನೂ ಪೂರ್ಣಗೊಳಿಸಿ ನೋಡುವ ಭಾಗ್ಯ ಸಿಗಲಿಲ್ಲ.

‘ಅಚ್ಚು ಮೆಚ್ಚಿನ ಗೆಳೆಯನಾಗಿದ್ದ ಬಸವರಾಜ ಶಾಂತ ಸ್ವಭಾವದ ವ್ಯಕ್ತಿ. ಎಲ್ಲರ ಜತೆ ಬೆರೆಯುತ್ತಿದ್ದ. ಊರಿಗೆ ಬಂದರೆ ಎಲ್ಲರನ್ನೂ ಕಂಡು ಕುಶಲೋಪರಿ ವಿಚಾರಿಸುತ್ತಿದ್ದ. ನೌಕರಿ ಸಿಕ್ಕ ನಂತರವೂ ಅವನ ನಡೆ-ನುಡಿಯಲ್ಲಿ ಬದಲಾವಣೆ ಆಗಿರಲಿಲ್ಲ. ಸರಳತಕ್ಕೆ ಹೆಸರಾದ ಬಸವರಾಜನಂತಹ ಗೆಳೆಯನ್ನು ಕಳೆದುಕೊಂಡಿರುವುದು ಸಾಕಷ್ಟು ನೋವು ತಂದಿದೆ’ ಎಂದು ಬಸವರಾಜ ಸ್ನೇಹಿತ ನಾಗರಾಜ ದುಃಖದಿಂದ ಹೇಳಿದರು.

ಯೋಧನಾಗಬೇಕು ಎಂಬ ಮಹದಾಸೆ ಹೊಂದಿದ್ದ ಬಸವರಾಜ ಅದನ್ನು ಸಾಧಿಸಿದ್ದರು. ಮನೆಯ ಕಡುಬಡತನದ ನಡುವೆಯೂ ಛಲದೊಂದಿಗೆ 2012ರಲ್ಲಿ ಸೆಂಟ್ರಲ್ ಇಂಡಸ್ಟ್ರೀಯಲ್ ಫೋರ್ಸ್‌ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದರು.

‘ರಜೆಗೆ ಬಂದಾಗಲೆಲ್ಲ ಮನೆ ನಿರ್ಮಾಣದ ಸಿದ್ಧತೆ ವೀಕ್ಷಿಸಿ ತೆರಳುತ್ತಿದ್ದರು. ಸದ್ಯ ಮನೆಯ ಅರ್ಧ ಭಾಗದ ಕೆಲಸ ಮುಗಿದಿತ್ತು. ಇನ್ನೂ ಎರಡು ತಿಂಗಳಲ್ಲಿ ಮಗ ರಜೆಗೆ ಬಂದು ಮನೆ ಪೂರ್ಣಗೊಳಿಸುತ್ತಾನೆ ಎಂದು ಕನಸು ಕಟ್ಟಿಕೊಂಡಿದ್ದೆ. ಈಗ ದೇವರು ಮಗನನ್ನೆ ಕಿತ್ತುಕೊಂಡು ಬಿಟ್ಟ’ ಎಂದು ತಾಯಿ ದುರುಗಮ್ಮ ಕಣ್ಣೀರು ಹಾಕಿದರು.

‘ಮನೆ ಖರ್ಚಿಗಾಗಿ ಬ್ಯಾಂಕ್ ಖಾತೆಯಲ್ಲಿ ಹಣ ಜಮಾ ಮಾಡಿದ್ದೇನೆ. ಎಟಿಎಂನಲ್ಲಿ ಬಿಡಿಸಿಕೊಳ್ಳಿ. ಒಂದೂವರೆ ತಿಂಗಳು ಬಿಟ್ಟು ಊರಿಗೆ ಬರುತ್ತೇನೆ ಎಂದು ಶುಕ್ರವಾರ ಮಧ್ಯಾಹ್ನ ಹೇಳಿದ್ದರು. ಸಂಜೆ ವಿಧಿಯಾಟಕ್ಕೆ ಬಲಿಯಾಗುತ್ತಾನೆ ಎಂದು ಕನಸು ಮನಸ್ಸಲ್ಲೂ ಊಹಿಸಿಲ್ಲ’ ಎಂದು ತಂದೆ ಹನುಮಂತಪ್ಪ, ತಾಯಿ ದುರುಗಮ್ಮ ದು:ಖಿತರಾದರು.

ಚಿಕ್ಕ ತಮ್ಮನ ಮೇಲೆ ಬೆಟ್ಟದಷ್ಟು ಆಸೆಹೊತ್ತು, ತಮ್ಮನಿಗೆ ಉತ್ತಮ ಶಿಕ್ಷಣ ಕೊಡಿಸಿ ಸರ್ಕಾರಿ ನೌಕರಿ ಸಿಗುವ ತನಕ ಆಸರೆಯಾಗಿದ್ದ ಪ್ರೀತಿಯ ಅಕ್ಕ-ಮಾವ ರೇಣುಕಾ ರಾಮಪ್ಪ ಅವರ ಆಕ್ರಂದನ ಮುಗಿಲು ಮುಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.