ADVERTISEMENT

ಡಿಬಿ ಕೆರೆ ಪಿಕಪ್: ನೀರಿನ ಹರಿವಿಗೆ ಅಡ್ಡಿಯಾದ ಜಲ ಸಸ್ಯ

ತಹಶೀಲ್ದಾರ್ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 14 ಮೇ 2022, 3:04 IST
Last Updated 14 ಮೇ 2022, 3:04 IST
ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್ ಜಲಾಶಯದ ಗೇಟುಗಳಿಗೆ ಜಲಸಸ್ಯ ನಿಂತಿದ್ದು ನೀರಿನ ಹರಿವಿಗೆ ಅಡ್ಡಿಯಾಗಿರುವುದನ್ನು ಶುಕ್ರವಾರ ಎಇಇ ಸಂತೋಷ್, ರೈತ ಮುಖಂಡ ಸಿ. ನಾಗೇಂದ್ರಪ್ಪ, ತಹಶೀಲ್ದಾರ್ ಡಾ. ಅಶ್ವತ್ಥ ಮಲ್ಲೇನಹಳ್ಳಿ ಬಸವಲಿಂಗಪ್ಪ ಅವರಿಗೆ ವಿವರಿಸಿದರು.
ಮಲೇಬೆನ್ನೂರು ಸಮೀಪದ ದೇವರಬೆಳೆಕೆರೆ ಪಿಕಪ್ ಜಲಾಶಯದ ಗೇಟುಗಳಿಗೆ ಜಲಸಸ್ಯ ನಿಂತಿದ್ದು ನೀರಿನ ಹರಿವಿಗೆ ಅಡ್ಡಿಯಾಗಿರುವುದನ್ನು ಶುಕ್ರವಾರ ಎಇಇ ಸಂತೋಷ್, ರೈತ ಮುಖಂಡ ಸಿ. ನಾಗೇಂದ್ರಪ್ಪ, ತಹಶೀಲ್ದಾರ್ ಡಾ. ಅಶ್ವತ್ಥ ಮಲ್ಲೇನಹಳ್ಳಿ ಬಸವಲಿಂಗಪ್ಪ ಅವರಿಗೆ ವಿವರಿಸಿದರು.   

ಮಲೇಬೆನ್ನೂರು: ಪ್ರಸಕ್ತ ಹವಾಮಾನ ವೈಪರೀತ್ಯದಿಂದ ಕಳೆದ ವಾರ ಸುರಿದ ಮಳೆಗೆ ಹೆಚ್ಚಿನ ಪ್ರಮಾಣದ ನೀರು ದೇವರಬೆಳೆಕೆರೆ ಪಿಕಪ್ ಜಲಾಶಯಕ್ಕೆ ಹರಿದು ಬರುತ್ತಿದೆ. ಆದರೆ ಜಲಾಶಯದ ಗೇಟುಗಳಿಗೆ ಜಲಸಸ್ಯ ನಿಂತಿದ್ದು ನೀರಿನ ಹರಿವಿಗೆ ಅಡ್ಡಿಯಾಗಿರುವುದನ್ನು ಶುಕ್ರವಾರ ತಹಶೀಲ್ದಾರ್ ಡಾ. ಅಶ್ವತ್ಥ ಮಲ್ಲೇನಹಳ್ಳಿ ಬಸವಲಿಂಗಪ್ಪ ಪರಿಶೀಲನೆ ನಡೆಸಿದರು.

ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರು, ಮುಖ್ಯ ಎಂಜಿನಿಯರ್ ನಿರ್ಲಕ್ಷ್ಯ ವಹಿಸಿದ ಕಾರಣ ರೈತರು ಬೆಳೆದ ಬೆಳೆ ಜಲಾವೃತವಾಗಿದ್ದು ನಷ್ಟ ಅನುಭವಿಸುವಂತಾಗಿದೆ ಎಂದು ಸಂಕ್ಲೀಪುರದ ರೈತ ಮುಖಂಡ ನಾಗೇಂದ್ರಪ್ಪ ಹರಿಹಾಯ್ದರು.

‘4 ತಿಂಗಳ ಹಿಂದೆ ಸಮಸ್ಯೆಯನ್ನು ಎಂಜಿನಿಯರ್‌ಗಳ ಗಮನಕ್ಕೆ ತಂದಿದ್ದರೂ ಯಾವುದೇ ರಕ್ಷಣಾ ಕ್ರಮ ತೆಗೆದುಕೊಂಡಿಲ್ಲ. ಈಗಾಗಲೇ ಅಣೆಕಟ್ಟಿನಲ್ಲಿ ಬಿರುಕು ಮೂಡಿ ದುರಸ್ತಿ ಮಾಡಲಾಗಿದೆ. ಒಂದು ವೇಳೆ ಅಣೆಕಟ್ಟೆಗೆ ಹಾನಿಯಾದರೆ ಯಾರು ಹೊಣೆ?’ ಎಂದು ಸಂಕ್ಲೀಪುರ, ಗುಳದಳ್ಳಿ, ಬೂದಿಹಾಳ್, ದೇವರಬೆಳಕೆರೆ, ಬಲ್ಲೂರು ಗ್ರಾಮದ ರೈತರು ತಹಶೀಲ್ದಾರರನ್ನು
ಪ್ರಶ್ನಿಸಿದರು.

ADVERTISEMENT

‘ಎಂಜಿನಿಯರ್‌ಗಳು ತುರ್ತಾಗಿ ಕ್ರಮ ತೆಗೆದುಕೊಳ್ಳಬೇಕಿತ್ತು. ಮೂರ್ನಾಲ್ಕು ದಿನಗಳ ಬಿರುಮಳೆಗೆ ಹೆಚ್ಚಿನ ಪ್ರಮಾಣದ ನೀರು ಹರಿದುಬಂದಿದೆ. ಜಮೀನುಗಳಿಗೆ ನೀರು ನುಗ್ಗುತ್ತಿದೆ. ಈಗಲಾದರೂ ರಕ್ಷಣಾ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದರು.

ಎಇಇ ಸಂತೋಷ್ ಮಾತನಾಡಿ, ‘ಜಲ ಸಸ್ಯ ತೆರವು ಮಾಡುವುದಕ್ಕಾಗಿ ಹಾಲಿ ಇರುವ ಗೇಟ್ ಕತ್ತರಿಸಿ 4 ಹೊಸದಾಗಿ ತೆರೆದು ಮುಚ್ಚುವಂತಹ ಗೇಟು ಅಳವಡಿಸುವ ವಿನ್ಯಾಸದ ₹ 40 ಲಕ್ಷ ಅಂದಾಜುಪಟ್ಟಿ ಕಳುಹಿಸಿ
ಕೊಡಲಾಗಿದ್ದು ಮಂಜೂರಾತಿಯ ನಿರೀಕ್ಷೆಯಲ್ಲಿದೆ’ ಎಂದರು.

‘ಎಲ್ಲ ಹಾಳಾಗಿ ಹೋದಮೇಲೆ ಗೇಟ್ ಹಾಕಿದರೆ ಏನು ಪ್ರಯೋಜನ? ಮಳೆಗಾಲ ಆರಂಭವಾಗುವ ಮುನ್ನ ತುರ್ತಾಗಿ ಕಾಮಗಾರಿ ಮುಗಿಸಿ’ ಎಂದು ರೈತರು ಆಗ್ರಹಿಸಿದರು.

‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ತಹಶೀಲ್ದಾರ್, ಹಿರಿಯ ಅಧಿಕಾರಿಗಳ ಸೂಚನೆಯಂತೆ ಅಣೆಕಟ್ಟೆ, ಜಲಸಸ್ಯದ ಸಮಸ್ಯೆ ನೋಡಿದ್ದು, ಹಿರಿಯ ಅಧಿಕಾರಿಗಳಿಗೆ ವರದಿ ಕಳುಹಿಸಿಕೊಡುವುದಾಗಿ ತಿಳಿಸಿದರು. ವಿಎ ಪುಷ್ಪ, ಹೇಮಂತ್, ರೈತರಾದ ರವಿ, ಹಾಲೇಶ್, ಪರಸಪ್ಪ, ಬಾಬು, ರವಿಕುಮಾರ್, ಸುರೇಶ್
ಇದ್ದರು.

ಮಳೆಹಾನಿ ವರದಿ: ಹೋಬಳಿ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳ 400 ಎಕರೆ ಭತ್ತದ ಬೆಳೆ ಹಾನಿಗೊಳಗಾಗಿದೆ. 2 ಮನೆಗಳ ಮೇಲೆ ಮರ ಬಿದ್ದಿದ್ದು ಭಾಗಶಃ
ಹಾನಿಗೊಳಗಾಗಿವೆ.

.......

ಸರ್ಕಾರ ಡಿಬಿ ಕೆರೆ ಪಿಕಪ್ ಗೇಟ್ ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಲು ವಿಳಂಬ ನೀತಿ ಅನುಸರಿಸುತ್ತಿದೆ. ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರು, ಮುಖ್ಯ ಎಂಜಿನಿಯರ್ ನಿರ್ಲಕ್ಷ್ಯ ಮಾಡಿದ್ದು ರೈತರ ಸಂಕಷ್ಟದಲ್ಲಿದ್ದಾರೆ.

ಸಿ. ನಾಗೇಂದ್ರಪ್ಪ, ರೈತ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.