ADVERTISEMENT

ದಾವಣಗೆರೆ ಜಿಲ್ಲೆಯ 10 ಗ್ರಾಮಗಳಲ್ಲಿ ನೀರಿನ ಬವಣೆ

ಜಗಳೂರು ಬಿಟ್ಟರೆ ಉಳಿದ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಅಷ್ಟಿಲ್ಲ

ಡಿ.ಕೆ.ಬಸವರಾಜು
Published 9 ಮೇ 2022, 2:44 IST
Last Updated 9 ಮೇ 2022, 2:44 IST

ದಾವಣಗೆರೆ: ಜಿಲ್ಲೆಯಲ್ಲಿ ಬಿಸಿಲು ತೀವ್ರವಾದರೂ ಕುಡಿಯುವ ನೀರಿನ ಸಮಸ್ಯೆ ಅಷ್ಟೊಂದು ಎದುರಾಗಿಲ್ಲ. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗುವ ಸಾಧ್ಯತೆ ಇರುವ 10 ಗ್ರಾಮಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ. ಜಗಳೂರು ತಾಲ್ಲೂಕಿನಲ್ಲಿ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಇದೆ.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜನರು ಹೊಳೆಯ, ಕೆರೆಯ ನೀರನ್ನೇ ಕೇಳುತ್ತಿದ್ದಾರೆ. ಬಸವಾಪಟ್ಟಣದ ಕಂಸಾಗರ, ಶೃಂಗಾರಭಾಗ್ ತಾಂಡಾಗಳಲ್ಲಿ ಸೂಳೆಕೆರೆ ನೀರನ್ನೇ ಪೂರೈಸಬೇಕು ಎಂದು ಕೇಳುತ್ತಿದ್ದಾರೆ. ಜಿಲ್ಲೆಯ ಕೆಲವು ಗ್ರಾಮಗಳಲ್ಲಿ ಬೋರ್‌ವೆಲ್ ಬದಲಿಗೆ ಹೊಳೆ ನೀರನ್ನು ಹರಿಸಿ ಎಂಬ ಬೇಡಿಕೆ ಇಡುತ್ತಿದ್ದಾರೆ.

ನಗರ ಪ್ರದೇಶದ ಕೆಲವು ಬಡಾವಣೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಇದೆ. ಭಾರತ್ ಕಾಲೊನಿ, ಯಲ್ಲಮ್ಮ ನಗರ ಮುಂತಾದ ಬಡಾವಣೆಗಳಲ್ಲಿ ಐದು ದಿವಸ, ಇಲ್ಲವೇ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜಾಗುತ್ತದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.

ADVERTISEMENT

‘ಟ್ಯಾಂಕರ್‌ ನೀರು ಪೂರೈಕೆ ಮಾಡುವ ಪರಿಸ್ಥಿತಿ ಜಿಲ್ಲೆಯ ಯಾವುದೇ ಗ್ರಾಮದಲ್ಲಿ ಸೃಷ್ಟಿಯಾಗಿಲ್ಲ. ಸಮಸ್ಯೆ ಇರುವ 10 ಗ್ರಾಮಗಳಿಗೆ ಕೊಳವೆಬಾವಿಗಳ ಮೂಲಕ ನೀರನ್ನು ಪೂರೈಸಲಾಗುತ್ತಿದೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಹಲವು ಗ್ರಾಮಗಳಿಗೆ ನೀರು ಪೂರೈಕೆಯಾಗುತ್ತಿದೆ. ಹಾಗಾಗಿ ಅಷ್ಟೊಂದು ಸಮಸ್ಯೆ ಇಲ್ಲ’ ಎಂಬುದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ರವೀಂದ್ರನಾಯಕ ಹೇಳುತ್ತಾರೆ.

ಡಿಸೆಂಬರ್‌ನಲ್ಲಿ ಜಲಜೀವನ್ ಮಿಷನ್‌ ಅಡಿ ನೀರು

ಜಿಲ್ಲೆಯಲ್ಲಿ ಜಲಜೀವನ್ ಮಿಷನ್‌ ಯೋಜನೆಯನ್ನು ನಾಲ್ಕು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುವುದು. ಒಟ್ಟು ₹ 413.97 ಕೋಟಿ ವೆಚ್ಚದಲ್ಲಿ ಒಟ್ಟು 876 ಹಳ್ಳಿಗಳ 1,55,241 ಮನೆಗಳಿಗೆ ನಲ್ಲಿ ಸಂಪರ್ಕ ಕಲ್ಪಿಸಲು ಉದ್ದೇಶಿಸಲಾಗಿದೆ. ಆದರೆ ಯೋಜನೆಯ ವೇಗ ತೀವ್ರವಾಗಿಲ್ಲ.

‘ಮೊದಲ ಹಂತದಲ್ಲಿ 356 ಕಾಮಗಾರಿಗಳ ಗುರಿ ಇಟ್ಟುಕೊಂಡಿದ್ದು, ಈಗಾಗಲೇ 352 ಗ್ರಾಮಗಳಲ್ಲಿ ಕಾಮಗಾರಿ ಶುರುವಾಗಿವೆ. ಅವುಗಳಲ್ಲಿ 184 ಕಾಮಗಾರಿಗಳು ಮುಗಿದಿವೆ. ಎರಡನೇ ಹಂತದಲ್ಲಿ 125 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, 120 ಕಾಮಗಾರಿಗಳು ಮುಗಿದಿವೆ. 23,756 ಮನೆಗಳಿಗೆ ನಳಗಳನ್ನು ಅಳವಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘3ನೇ ಹಂತದಲ್ಲಿ 314 ಕಾಮಗಾರಿ ಕೈಗೆತ್ತಿಕೊಂಡಿದ್ದು, 39 ಕಾಮಗಾರಿಗಳಿಗೆ ಡಿಪಿಆರ್ ಮುಗಿದಿದೆ. 4ನೇ ಹಂತದಲ್ಲಿ 6 ಕಾಮಗಾರಿಗಳು ಡಿಪಿಆರ್ ಹಂತದಲ್ಲಿವೆ. ಈ ವರ್ಷಾಂತ್ಯಕ್ಕೆ ಎಲ್ಲಾ ಮನೆಗಳ ನಳಗಳಲ್ಲಿ ನೀರು ಹರಿಸುವ ಗುರಿ ಇದೆ’ ಎಂದು ಹೇಳಿದರು.

‘ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ಎಲ್ಲ ಕಡೆ ಆತಂಕ ದೂರವಾಗುತ್ತಿದೆ. ಜಗಳೂರು ಬಿಟ್ಟು ಹೊನ್ನಾಳಿ, ಹರಿಹರ, ಚನ್ನಗಿರಿ ಹಾಗೂ ದಾವಣಗೆರೆಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ವಿಸ್ತರಿಸಿದೆ. ಸಂತೆಮುದ್ದಾಪುರ ಯೋಜನೆಯಲ್ಲಿ 185 ಗ್ರಾಮಗಳು ಸೇರಲಿದ್ದು, ಇವುಗಳಲ್ಲಿ 165 ಜಗಳೂರು ತಾಲ್ಲೂಕಿನ ಗ್ರಾಮಗಳಾಗಿವೆ. ದಾವಣಗೆರೆ ತಾಲ್ಲೂಕಿನ 20 ಗ್ರಾಮಗಳು ಇದರ ವ್ಯಾಪ್ತಿಗೆ ಸೇರುತ್ತವೆ’ ಎಂದರು.

‘ಹೊನ್ನಾಳಿಯ 2, ದಾವಣಗೆರೆಯಲಿ 2 ಹಾಗೂ ಜಗಳೂರು ತಾಲ್ಲೂಕಿನ 1 ಗ್ರಾಮ ಪಂಚಾಯಿತಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ರವೀಂದ್ರನಾಯಕ ಮಾಹಿತಿ ನೀಡಿದರು.

ದುರಸ್ತಿಯಾಗದ ಶುದ್ಧ ನೀರಿನ ಘಟಕಗಳು

ಬಸವಾಪಟ್ಟಣ: ಇಲ್ಲಿನ ಶೃಂಗಾರ್‌ ಬಾಗ್‌ ತಾಂಡಾ ಹಾಗೂ ಕಂಸಾಗರಗಳನ್ನು ಸಮಸ್ಯೆ ಇರುವ ಗ್ರಾಮಗಳನ್ನಾಗಿ ಗುರುತಿಸಲಾಗಿದೆ.

ಶೃಂಗಾರ್‌ ಬಾಗ್‌ ತಾಂಡಾದಲ್ಲಿ 200 ಮನೆಗಳ 800ಕ್ಕೂ ಹೆಚ್ಚು ಜನರಿಗೆ ಅನುಕೂಲವಾಗಲೆಂದು ಮೂರು ವರ್ಷಗಳ ಹಿಂದೆ ಶುದ್ಧ ನೀರಿನ ಘಟಕವನ್ನು ನಿರ್ಮಿಸಲಾಗಿತ್ತು. ಆದರೆ ಇದು ತಾಂಡಾದಿಂದ ದೂರವಿದೆ ಎಂಬ ಕಾರಣಕ್ಕಾಗಿ ಜನ ಅದನ್ನು ಬಳಸುತ್ತಿಲ್ಲ.

‘ನಮ್ಮ ತಾಂಡಾದಲ್ಲಿ ಶುದ್ಧ ನೀರಿನ ಘಟಕ ಕೆಟ್ಟು ನಿಂತರೂ ಅದನ್ನು ದುರಸ್ತಿ ಮಾಡಿಲ್ಲ. ಕೂಡಲೇ ದುರಸ್ತಿ ಮಾಡಬೇಕು ಎಂಬದು ತಾಂಡಾದ ನಿವಾಸಿಗಳು ಒತ್ತಾಯಿಸುತ್ತಾರೆ.

‘ಸೂಳೆಕೆರೆಯಿಂದ ಬಸವಾಪಟ್ಟಣ ಹೋಬಳಿಯ 29 ಹಳ್ಳಿಗಳಿಗೆ ಪ್ರತಿದಿನ ನಿರಂತರವಾಗಿ ಜನತೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಅಲ್ಲದೇ ಗ್ರಾಮಗಳಲ್ಲಿ ಅಳವಡಿಸಿರುವ ಶುದ್ಧ ನೀರಿನ ಘಟಕಗಳಿಗೆ ಪ್ರತ್ಯೇಕ ಕೊಳವೆಬಾವಿಗಳಿಂದ ನೀರು ಸರಬರಾಜಾಗುತ್ತಿದೆ ವಿನಃ ಯಾವುದೇ ಗ್ರಾಮಗಳಿಗೆ ನೀರಿನ ಅಭಾವ ಇಲ್ಲ’ ಎಂದು ತಾಲ್ಲೂಕು ಪಂಚಾಯಿತಿ ಕುಡಿಯುವ ನೀರು ಸರಬರಾಜು ಇಲಾಖೆಯ ಎಂಜಿನಿಯರ್‌ ಅಶೋಕ್‌ ತಿಳಿಸಿದರು.

‘ಈವರೆಗೆ ಸೂಳೆಕೆರೆಯಿಂದ ಸರಬರಾಜಾಗುವ ಪರಿಶುದ್ಧ ನೀರನ್ನು ಇಲ್ಲಿನ ಜನತೆ ಬಳಕೆ ಮಾಡುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಿ. ಮಂಜುನಾಥ್ ತಿಳಿಸಿದರು.

ಸುಂಕದಕಟ್ಟೆಗಿಲ್ಲ ಹೊಳೆ ನೀರು

ಹೊನ್ನಾಳಿ: ತಾಲ್ಲೂಕಿನ ಸುಂಕದಕಟ್ಟೆ ಗ್ರಾಮದಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದ್ದು, ಬೋರ್‌ವೆಗಳು ಸಾಕಷ್ಟಿದ್ದರೂ ಉಪ್ಪಿನ ಅಂಶ ಇರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ. ಆದ್ದರಿಂದ ಗ್ರಾಮದ ಜನರು ಬೋರ್‌ವೆಲ್ ನೀರಿಗೆ ಬದಲಾಗಿ ವಾರಕ್ಕೊಮ್ಮೆ ಬಿಡುವ ಹೊಳೆ ನೀರನ್ನೇ ದಿನನಿತ್ಯ ಪೂರೈಸುವಂತೆ ಮನವಿ ಮಾಡುತ್ತಾರೆ.

ಜಲಜೀವನ್ ಮಿಷನ್ ಕಾಮಗಾರಿಯನ್ನು ಈ ಗ್ರಾಮದಲ್ಲಿ ಕೈಗೊಳ್ಳಲು ಬಂದಾಗ ಅಲ್ಲಿನ ಜನರು ಈ ಕಾಮಗಾರಿಗೆ ಹೊಸದಾಗಿ ಪೈಪ್‌ಲೈನ್ ಅಳವಡಿಸಿ ಆ ಮೂಲಕ ದಿನನಿತ್ಯ ಕುಡಿಯುವ ನೀರನ್ನು ಪೂರೈಸಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ. ‘ಹೊಳೆ ನೀರು ಕೊಡದಿದ್ದರೆ ಜಲಜೀವನ್ ಮಿಷನ್‌ಗೆ ನಾವು ಒಪ್ಪಿಗೆ ನೀಡುವುದಿಲ್ಲ’ ಎಂದು ಗ್ರಾಮಸ್ಥರು ಷರತ್ತು ವಿಧಿಸಿದ್ದಾರೆ.

ಜಲಜೀವನ್ ಮಿಷನ್ ಕಾಮಗಾರಿಗೆ ಹಳೆಯ ಪೈಪ್‍ಲೈನ್ ಮೂಲಕವೇ ನೀರು ಪೂರೈಸುವ ಪ್ರಯತ್ನ ನಡೆಯುತ್ತಿದ್ದು, ಇದಕ್ಕೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಒಂದೂವರೆ ತಿಂಗಳಿನಿಂದ ಹಗ್ಗಜಗ್ಗಾಟ ನಡೆಯುತ್ತಿದೆ. ಹೊಸದಾಗಿ ಪೈಪ್‌ಲೈನ್ ಅಳವಡಿಸಿ ನಿತ್ಯವೂ ಹೊಳೆನೀರು ಪೂರೈಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

‘ನಮ್ಮ ಅಕ್ಕಪಕ್ಕದ ಗ್ರಾಮಗಳಿಗೆ ಪ್ರತಿನಿತ್ಯ ಹೊಳೆ ನೀರನ್ನು ಪೂರೈಸುತ್ತಿದ್ದಾರೆ. ಆದರೆ ನಮ್ಮ ಗ್ರಾಮಕ್ಕೆ ಮಾತ್ರ ವಾರಕ್ಕೆ ಒಂದು ಅಥವಾ ಎರಡು ಬಾರಿ ಕೊಡುತ್ತಾರೆ. ಆದೂ ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಕೆಲವರು ಫಿಲ್ಟರ್ ನೀರಿನ ಮೊರೆಹೋಗಿದ್ದಾರೆ. ನಾವು ಓವರ್ ಹೆಡ್ ಟ್ಯಾಂಕ್ ಮೂಲಕ ಈಗಾಗಲೇ ಕುಡಿಯುವ ನೀರು ಪೂರೈಸುತ್ತಿದ್ದೇವೆ. ಆದರೆ ಅಲ್ಲಿ ನೆಟ್‍ವರ್ಕ್ ಸರಿಯಿಲ್ಲ. ಅದನ್ನು ಗ್ರಾಮ ಪಂಚಾಯಿತಿಯವರು ದುರಸ್ತಿ ಮಾಡಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಎಇಇ ನಟರಾಜ್ ಅವರ ಆಗ್ರಹ.

50 ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ

ಜಗಳೂರು: ಕಳೆದ ಹಿಂಗಾರಿನಲ್ಲಿ ಉತ್ತಮ ಮಳೆಯಾಗಿದ್ದ ಕಾರಣ ಪ್ರಸ್ತುತ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ತಾರಕಕ್ಕೇರಿಲ್ಲ. ಆದರೂ ಬಿಸಿಲಿನ ಧಗೆ ಏರುತ್ತಿದ್ದಂತೆ ಕೆಲವು ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿತವಾಗುತ್ತಿದ್ದು, ಯಾವುದೇ ಸಮಯದಲ್ಲೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.

ತಮಲೇಹಳ್ಳಿ, ಕಸವನಹಳ್ಳಿ, ಭರಮಸಮುದ್ರ, ಸೊಕ್ಕೆ, ಅರಿಶಿನಗುಂಡಿ, ತಿಮ್ಮಲಾಪುರ ಸೇರಿದಂತೆ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕುಡಿಯುವ ನೀರಿನ ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

ಪ್ರತಿ ವರ್ಷ ಬೇಸಗೆಯಲ್ಲಿ ಬಹುತೇಕ ಹಳ್ಳಿಗಳಲ್ಲಿ ಕೊಳವೆಬಾವಿಗಳು ಬತ್ತಿಹೋಗಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿ ಜನರು ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗುತ್ತಿತ್ತು.

ತಾಲ್ಲೂಕಿನಲ್ಲಿ ಕಳೆದ ಹಿಂಗಾರು ಹಂಗಾಮಿನಲ್ಲಿ ಸಮೃದ್ಧವಾಗಿ ಮಳೆಯಾಗಿ ಹತ್ತಾರು ಕೆರೆಕಟ್ಟೆಗಳಿಗೆ ನೀರು ಸಂಗ್ರಹವಾಗಿ, ಅಂತರ್ಜಲ ಪ್ರಮಾಣ ಗಣನೀಯವಾಗಿ ಸುಧಾರಣೆಯಾಗಿತ್ತು. ಹೀಗಾಗಿ ಪ್ರಸ್ತುತ ಬೇಸಿಗೆಯಲ್ಲಿ ನೀರಿನ ತೊಂದರೆ ಅಷ್ಟಾಗಿ ಕಾಣಿಸಿಕೊಂಡಿಲ್ಲ.

‘ತಾಲ್ಲೂಕಿನಲ್ಲಿ ಬೇಸಿಗೆಯ ಸಂದರ್ಭದಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಾಗಿಲ್ಲ. ಆದರೂ ಮುಂಜಾಗ್ರತೆಯಿಂದ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ತಯಾರಿಸಲಾಗಿದೆ. 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ 35ಕ್ಕೂ ಹೆಚ್ಚು ಕೊಳವೆಬಾವಿಗಳು ಬತ್ತಿಹೋಗಿವೆ. 20ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಲಾಗಿದೆ. ₹3 ಕೋಟಿ ವೆಚ್ಚದಲ್ಲಿ ಪೈಪ್‌ಲೈನ್, ಪಂಪ್ ಮೋಟರ್ ಅಳವಡಿಕೆ ಹಾಗೂ ಕೊಳವೆಬಾವಿ ಕೊರೆಸುವ ಕ್ರಿಯಾ ಯೋಜನೆ ರೂಪಿಸಿದ್ದು, ಸದ್ಯಕ್ಕೆ ₹1 ಕೋಟಿಗೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಗ್ರಾಮಿಣ ನೈರ್ಮಲ್ಯ ಮತ್ತು ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸಾದಿಕ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.