ADVERTISEMENT

ದಾವಣಗೆರೆ: ‘ಬರ’ದ ನಾಡಿಗೆ ಜೀವ ತುಂಬಿದ ‘ಜಲ’

57 ಕೆರೆ ತುಂಬಿಸುವ ಯೋಜನೆಯಡಿ 11 ಕೆರೆಗಳಿಗೆ ಹರಿದ ನೀರು; 7 ಕಿ.ಮೀ. ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡರೆ 25 ಕೆರೆಗಳಿಗೆ ಗಂಗೆ

ರಾಮಮೂರ್ತಿ ಪಿ.
Published 9 ಆಗಸ್ಟ್ 2023, 7:24 IST
Last Updated 9 ಆಗಸ್ಟ್ 2023, 7:24 IST
ದಾವಣಗೆರೆಯ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಯಲ್ಲಿ ಪೈಪ್‌ನಿಂದ ನೀರು ಚಿಮ್ಮುತ್ತಿದ್ದು, ಅಕ್ಕಪಕ್ಕದ ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂತು
ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್
ದಾವಣಗೆರೆಯ ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಕೆರೆಯಲ್ಲಿ ಪೈಪ್‌ನಿಂದ ನೀರು ಚಿಮ್ಮುತ್ತಿದ್ದು, ಅಕ್ಕಪಕ್ಕದ ಗ್ರಾಮಸ್ಥರು ಮೊಬೈಲ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿರುವುದು ಕಂಡುಬಂತು ಪ್ರಜಾವಾಣಿ ಚಿತ್ರ/ ಸತೀಶ್ ಬಡಿಗೇರ್   

ದಾವಣಗೆರೆ: ಜಿಲ್ಲೆಯ ಜಗಳೂರು ಮತ್ತು ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ 57 ಕೆರೆ ತುಂಬಿಸುವ ಯೋಜನೆಯಡಿ ಜಗಳೂರು ತಾಲ್ಲೂಕಿನ 11 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ಹರಿಯುತ್ತಿದ್ದಂತೆಯೇ ಆ ಭಾಗದ ಜನರಲ್ಲಿ ಮಂದಹಾಸ ಮೂಡಿದೆ.

ಯೋಜನೆಯಲ್ಲಿನ ಸಣ್ಣಪುಟ್ಟ ದೋಷಗಳ ಬಗ್ಗೆ ಸ್ಥಳೀಯರು ದೂರಿದರೂ, ‘ಜೀವ ಜಲ’ ಹರಿಸುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

‘ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಪ್ರಾಣಿ – ಪಕ್ಷಿಗಳಿಗೂ ನೀರು ಲಭ್ಯವಾಗಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಕೆರೆ ಸುತ್ತಮುತ್ತಲಿರುವ ಜಮೀನುಗಳಲ್ಲಿನ ಅಂತರ್ಜಲಮಟ್ಟ ಹೆಚ್ಚಲಿದ್ದು, ಕೊಳವೆಬಾವಿಯಿಂದ ಕೃಷಿ ಮಾಡಬಹುದಾಗಿದ್ದು, ನಮಗೆ ವರದಾನವಾಗಲಿದೆ’ ಎಂದು ಸ್ಥಳೀಯ ರೈತರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ADVERTISEMENT

ಆರಂಭದಲ್ಲಿ 11 ಕೆರೆಗಳಿಗೆ ನೀರು ಹರಿದು ಬರುತ್ತಿದೆಯಾದರೂ, ಯೋಜನೆಗೆ ಒಳಪಡುವ ಎಲ್ಲ ಕೆರೆಗಳಿಗೆ ನೀರು ಹರಿಸಲು ಇನ್ನೂ ಸಾಕಷ್ಟು ಸಮಯ ಕಾಯಬೇಕಾದ ಬಗ್ಗೆ ಜನರಲ್ಲಿ ಬೇಸರವೂ ಇದೆ. ಸಾಧ್ಯವಾದಷ್ಟು ಶೀಘ್ರವೇ ಎಲ್ಲ ಕೆರೆಗಳಿಗೂ ನೀರು ಹರಿಸಲಿ ಎಂಬ ಒತ್ತಾಯವೂ ಕೇಳಿಬಂದಿದೆ.

ಯೋಜನೆಯಡಿ ಇನ್ನು 7 ಕಿ.ಮೀ. ಪೈಪ್‌ಲೈನ್ ಕಾಮಗಾರಿ ನಡೆದರೆ 25 ಕೆರೆಗಳಿಗೆ ನೀರು ಹರಿಸಬಹುದು. ಇದಕ್ಕೆ ಇನ್ನೂ ಎರಡು ತಿಂಗಳು ಸಮಯ ಹಿಡಿಯಲಿದೆ
ಆರ್‌.ಬಿ.ಮಂಜುನಾಥ್ ಕಾರ್ಯನಿರ್ವಾಹಕ ಎಂಜಿನಿಯರ್ ಭದ್ರಾ ನಾಲಾ ವಿಭಾಗ

‘ಕಳೆದ ವರ್ಷ ತುಪ್ಪದಹಳ್ಳಿ ಕೆರೆಗೆ ಮಾತ್ರ ನೀರು ಹರಿಸಲಾಗಿತ್ತು. ಈ ವರ್ಷ 11 ಕೆರೆಗಳಿಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತಿದೆ. ಕೆಲವೆಡೆ ನೀರು ರಭಸವಾಗಿ ಹರಿಯುತ್ತಿದೆ. ಇನ್ನು ಕೆಲವೆಡೆ ನಿಧಾನಗತಿಯಲ್ಲಿ ನೀರು ಹರಿಯುತ್ತಿದೆ. ಇದು ಪ್ರಾಯೋಗಿಕ ಹಂತವಾಗಿರುವುದರಿಂದ ಮುಂದಿನ ದಿನಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲಾಗುವುದು’ ಎಂದು ಭದ್ರಾ ನಾಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್‌.ಬಿ.ಮಂಜುನಾಥ್ ಮಾಹಿತಿ ನೀಡಿದರು.

‘ಆಯಾ ಕೆರೆಯ ವಿಸ್ತೀರ್ಣ, ನೀರು ಹಿಡಿದಿಟ್ಟುಕೊಳ್ಳುವ ಪ್ರಮಾಣ ಆಧರಿಸಿ ನೀರು ಹರಿಸಲಾಗುತ್ತಿದೆ. ಕೆರೆಗಳಿಗೆ 3 ತಿಂಗಳು ನೀರು ಹರಿಸುವ ಯೋಜನೆ ಇದಾಗಿದೆ’ ಎಂದು ಅವರು ತಿಳಿಸಿದರು.

ಜಗಳೂರು ತಾಲ್ಲೂಕಿನ 51 ಹಾಗೂ ಹರಪನಹಳ್ಳಿ ತಾಲ್ಲೂಕಿನ 6 ಕೆರೆಗಳಿಗೆ ನೀರು ಹರಿಸುವ ₹ 660 ಕೋಟಿ ವೆಚ್ಚದ ಯೋಜನೆ ಇದಾಗಿದೆ. ನೀರಾವರಿ ನಿಗಮದ ಅಧಿಕಾರಿಗಳು ಈಚೆಗೆ ಕೆರೆಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಕೆರೆಗೆ ನೀರು ತುಂಬಿಸುತ್ತಿರುವುದರಿಂದ ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಒಂದು ಕೆರೆ ತುಂಬಿಸುತ್ತಿರುವುದರಿಂದ ಅದರ ಸುತ್ತಮುತ್ತಲಿನ ಮೂರ್ನಾಲ್ಕು ಗ್ರಾಮಗಳ ಜನರಿಗೆ ಅನುಕೂಲ ಆಗಲಿದೆ
ವೀರಭದ್ರಸ್ವಾಮಿ ನಾಯ್ಕ ನರೇನಹಳ್ಳಿ

‘ಪೈಪ್‌ಲೈನ್‌ ಮಾರ್ಗ ಬದಲಿಸಬೇಕಿತ್ತು’

‘ಪೈಪ್‌ಲೈನ್‌ ಕಾಮಗಾರಿ ಸರಿಯಾದ ಮಾರ್ಗದಲ್ಲಿ ನಡೆದಿಲ್ಲ. ಹೀಗಾಗಿ ನೀರು ರಭಸವಾಗಿ ಹರಿದುಬರುತ್ತಿಲ್ಲ. ಬೇರೆ ಮಾರ್ಗದಲ್ಲಿ ನೀರು ಹರಿಸಿದ್ದರೆ ಕೆರೆ ಬೇಗ ತುಂಬುತ್ತಿತ್ತು. ಈ ಬಗ್ಗೆ ಎಂಜಿನಿಯರ್‌ಗಳು ಜನಪ್ರತಿನಿಧಿಗಳು ಗಮನ ಹರಿಸಲಿ’ ಎಂದು ಹಾಲೇಕಲ್ಲು ಗ್ರಾಮದ ಕೆ.ಜಿ.ಓಂಕಾರಪ್ಪ ಒತ್ತಾಯಿಸಿದರು. ‘ಕೆರೆಗೆ ನೀರು ತುಂಬಿಸುವ ಮುನ್ನ ಹೂಳು ತೆಗೆಸಬೇಕಿತ್ತು. ಕೆಲವೆಡೆ ಕೆರೆ ಜಾಗ ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಬೇಕು’ ಎಂದು ನರೇನಹಳ್ಳಿಯ ವೀರಭದ್ರಸ್ವಾಮಿ ನಾಯ್ಕ ಆಗ್ರಹಿಸಿದರು.

ಯಾವ್ಯಾವ ಕೆರೆಗಳಿಗೆ ನೀರು?

ಜಗಳೂರು ತಾಲ್ಲೂಕಿನ ತುಪ್ಪದಹಳ್ಳಿ ಹಾಲೇಕಲ್ಲು ಬಿಳಿಚೋಡು ಮರಿಕುಂಟೆ ಚದರಗೊಳ್ಳ ಅಸಗೋಡು ಕಾಟೇನಹಳ್ಳಿ ಗೋಡೆ ತಾರೇಹಳ್ಳಿ ಉರ್ಲಕಟ್ಟೆ ಹಾಗೂ ಮಾದನಹಳ್ಳಿ ಕೆರೆಗಳಿಗೆ ಪೈಪ್‌ಲೈನ್‌ ಮೂಲಕ ನೀರು ಹರಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.