ADVERTISEMENT

ಎಲ್ಲರೂ ದೂರ ಸರಿದಾಗ ಕೈ ಬಿಡದ ದಳವಾಯಿ

ಕೊರೊನಾ ಕಾಲದಲ್ಲಿ ನೆರವಾದ ಗೆಳೆಯನನ್ನು ನೆನಪಿಸಿಕೊಂಡ ಶಿಕ್ಷಕ ಪದ್ದಪ್ಪ

ಬಾಲಕೃಷ್ಣ ಪಿ.ಎಚ್‌
Published 1 ಆಗಸ್ಟ್ 2021, 2:59 IST
Last Updated 1 ಆಗಸ್ಟ್ 2021, 2:59 IST
ಶಿವಾನಂದ ದಳವಾಯಿ
ಶಿವಾನಂದ ದಳವಾಯಿ   

ದಾವಣಗೆರೆ: ‘ನಂಗೆ ಕೊರೊನಾ ಬಂದಿಲ್ಲ. ನನ್ನ ಪತ್ನಿಗೆ ಸೋಂಕು ತಗುಲಿತ್ತು. ಅಣ್ಣ, ತಮ್ಮ, ಬಂಧು–ಬಳಗ ಯಾರೂ ಹತ್ತಿರ ಬರಲಿಲ್ಲ. ಇಂಥ ಸಮಯದಲ್ಲಿ ನಮ್ಮ ನೆರವಿಗೆ ಬಂದವನೇ ಗೆಳೆಯ ಶಿವಾನಂದ ದಳವಾಯಿ...’

ಕೊರೊನಾ ಕಾಲದಲ್ಲಿ ನೆರವಾದ ಸ್ನೇಹಿತನನ್ನು ಈ ರೀತಿ ಸ್ಮರಿಸಿದವರು ಶಿಕ್ಷಕ, ಶಾಮನೂರು ನಿವಾಸಿ ಬಿ.ಎಸ್‌. ಪದ್ದಪ್ಪ ಅವರು.

‘ಪತ್ನಿ ಕರಿಬಸಮ್ಮಳಿಗೆ ಜ್ವರ ಬಂದಿತ್ತು. ಟೈಫಾಯ್ಡ್‌ ಎಂದು ವೈದ್ಯರು ಹೇಳಿದರು. ಬಳಿಕ ಜ್ವರದಿಂದ ಗುಣಮುಖಳಾಗಿ ಮನೆಗೆ ಬಂದಳು. ಸುಸ್ತು ಶುರುವಾಯಿತು. ಸಿಟಿ ಸ್ಕ್ಯಾನ್‌ ಮಾಡಿದಾಗ ಕೊರೊನಾ ಸೋಂಕು ಬಂದಿರುವುದು ಖಚಿತವಾಯಿತು. ಕೊರೊನಾ ಸೋಂಕು ಎಂಬ ಶಬ್ದ ಕೇಳಿದ ಮೇಲೆ ಸಂಬಂಧಿಕರು ಯಾರೂ ಹತ್ತಿರ ಬರಲಿಲ್ಲ. ನನಗೆ ದಿಕ್ಕು ತೋಚದಾಗಿತ್ತು. ಯಾವುದಾದರೂ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಬಗ್ಗೆ ಯೋಚಿಸಿದೆ. ಅದೇ ಸಮಯಕ್ಕೆ ಆರೋಗ್ಯ ಇಲಾಖೆಯಲ್ಲಿರುವ ಶಿವಾನಂದ ದಳವಾಯಿ ನೆನಪಾದ. ಕರೆ ಮಾಡಿ ವಿಚಾರ ತಿಳಿಸಿದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಸ್ನೇಹಿತನಾಗಿ ಒಂದು ಮಾತು ಹೇಳುತ್ತೇನೆ. ಖಾಸಗಿಗಿಂತಲೂ ಚಿಗಟೇರಿ ಆಸ್ಪತ್ರೆಯಲ್ಲಿ ಉತ್ತಮ ಸೌಲಭ್ಯ ಇದೆ. ಕೊರೊನಾಕ್ಕೆ ಬೇಕಾದ ಎಲ್ಲ ಔಷಧಗಳೂ ಇಲ್ಲಿವೆ. ಜಿಲ್ಲಾ ಆಸ್ಪತ್ರೆಗೆ ಸೇರಿಸು ಎಂದು ಸಲಹೆ ನೀಡಿದ. ಅಲ್ಲದೇ ಬೆಡ್‌, ಆಕ್ಸಿಜನ್‌ನಿಂದ ಹಿಡಿದು ಎಲ್ಲ ವ್ಯವಸ್ಥೆ ಮಾಡಿದ. ದಳವಾಯಿಯ ಮತ್ತೊಬ್ಬ ಸ್ನೇಹಿತ ಕುಬೇಂದ್ರಪ್ಪನಿಗೆ ತಿಳಿಸಿ ಆಸ್ಪತ್ರೆಯಲ್ಲಿ ಉತ್ತಮ ಸ್ಪಂದನ ಸಿಗುವಂತೆ ಮಾಡಿದ’ ಎಂದು ನೆನಪಿಸಿಕೊಂಡರು.

‘ಶ್ವಾಸಕೋಶಕ್ಕೆ ಶೇ 80ರಷ್ಟು ಹಾನಿಯಾಗಿದೆ ಎಂದು ಸ್ಕ್ಯಾನಿಂಗ್‌ನಲ್ಲಿ ಗೊತ್ತಾಗಿತ್ತು. ಆರು ದಿನ ಕರಿಬಸಮ್ಮ ಆಕ್ಸಿಜನ್‌ನಲ್ಲಿದ್ದಳು. ಪ್ರತಿದಿನ ಆಕೆಯ ಆರೋಗ್ಯವನ್ನು ವಿಚಾರಿಸಿದ್ದಲ್ಲದೇ ಏನೂ ಆಗಲ್ಲ ಎಂದು ಧೈರ್ಯ ತುಂಬಿದಿದ್ದರಿಂದ ಬೇಗ ಆಸ್ಪತ್ರೆಯಿಂದ ಹೊರ ಬರುವಂತಾಯಿತು’ ಎಂದು ಸ್ಮರಿಸಿದರು.

‘ಯಾರಿಗೇ ಕೊರೊನಾ ಬಂದರೂ ನಾನು ಅವರನ್ನು ಶಿವಾನಂದ ದಳವಾಯಿಯನ್ನು ಸಂಪರ್ಕಿಸಿ ಎಂದು ಹೇಳುತ್ತಿದ್ದೆ. ಸುಮಾರು 50 ಮಂದಿಗೆ ಈ ರೀತಿ ಸಲಹೆ ನೀಡಿದ್ದೆ. ನಾನು ಕಳುಹಿಸಿದ ಎಲ್ಲರಿಗೂ ದಳವಾಯಿ ನೆರವಾಗಿದ್ದಾನೆ. ನಾವು ಸ್ನೇಹಿತರಾಗಿ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಇರುತ್ತಿದ್ದೆವು. ಆದರೆ, ಕೊರೊನಾದಂಥ ಸಂಕಟದ ಸ್ಥಿತಿಯಲ್ಲಿಯೇ ರಕ್ತ ಸಂಬಂಧಕ್ಕಿಂತ ಸ್ನೇಹ ದೊಡ್ಡದು ಎಂಬುದು ಗೊತ್ತಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.