ADVERTISEMENT

ಅಪರಾಧಿಗೆ ಶಿಕ್ಷೆ ಆದಾಗ ಕರ್ತವ್ಯ ಪೂರ್ಣ

ಪೊಲೀಸ್‌ ಕರ್ತವ್ಯಕೂಟದಲ್ಲಿ ಪೂರ್ವ ವಲಯ ಪ್ರಭಾರ ಐಜಿಪಿ ರವಿ ಎಸ್.

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 10:51 IST
Last Updated 18 ಫೆಬ್ರುವರಿ 2020, 10:51 IST
ದಾವಣಗೆರೆಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ಸಮಗ್ರ ಚಾಂಪಿಯನ್‌ಷಿಪ್ ಪ್ರಶಸ್ತಿ ಪಡೆದ ದಾವಣಗೆರೆ ತಂಡದ ಸದಸ್ಯರಿಗೆ ಪ್ರಭಾರ ಐಜಿಪಿ ರವಿ ಎಸ್. ಪ್ರಶಸ್ತಿ ನೀಡಿ ಗೌರವಿಸಿದರು
ದಾವಣಗೆರೆಯ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ನಡೆದ ಪೊಲೀಸ್ ಕರ್ತವ್ಯ ಕೂಟದ ಸಮಾರೋಪ ಸಮಾರಂಭದಲ್ಲಿ ಸಮಗ್ರ ಚಾಂಪಿಯನ್‌ಷಿಪ್ ಪ್ರಶಸ್ತಿ ಪಡೆದ ದಾವಣಗೆರೆ ತಂಡದ ಸದಸ್ಯರಿಗೆ ಪ್ರಭಾರ ಐಜಿಪಿ ರವಿ ಎಸ್. ಪ್ರಶಸ್ತಿ ನೀಡಿ ಗೌರವಿಸಿದರು   

ದಾವಣಗೆರೆ: ಯಾವುದೇ ಪ್ರಕರಣ ಗಳನ್ನು ಕೌಶಲದಿಂದ ಬಗೆಹರಿಸುವುದು ಮಾತ್ರವಲ್ಲದೆ ಅಪರಾಧಿಗೆ ಶಿಕ್ಷೆ ಆದಾಗ ಮಾತ್ರ ಪೊಲೀಸರ ಕರ್ತವ್ಯ ಪೂರ್ಣವಾದಂತೆ. ಈ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಪೂರ್ವ ವಲಯ ಪ್ರಭಾರ ಐಜಿಪಿ ರವಿ ಎಸ್. ಹೇಳಿದರು.

ಇಲ್ಲಿನ ಜಿಲ್ಲಾ ಪೊಲೀಸ್‌ ಕಚೇರಿ ಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೊಲೀಸ್‌ ಕರ್ತವ್ಯಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಒಂದು ಚಿಕ್ಕ ತಪ್ಪು ಮಾಡಿದ ಆರೋಪಿ ಕಾನೂನಿನಿಂದ ತ‍ಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ ಎಂಬ ಸ್ಥಿತಿ ನಿರ್ಮಾಣ ಮಾಡಿದಾಗ ಮಾತ್ರ ಉತ್ತಮ ಸಮಾಜ ರೂಪುಗೊಳ್ಳಲು ಸಾಧ್ಯ. ಆರೋಪಿಗಳು ಶಿಕ್ಷೆ ಭಯದಿಂದ ತಪ್ಪು ಮಾಡಲು ಹಿಂಜರಿಯುವಂತಹ ಸ್ಥಿತಿ ನಿರ್ಮಾಣವಾಗಬೇಕು. ಪೂರ್ವ ಏಷ್ಯಾ ದೇಶಗಳಲ್ಲಿ ಒಬ್ಬ ಚಾಲಕ ಸಿಗ್ನಲ್ ಜಂಪ್‌ ಮಾಡಲೂ ಹಿಂಜರಿಯುತ್ತಾನೆ. ಏಕೆಂದರೆ ಅಲ್ಲಿ ಅವರ ವೇತನದಲ್ಲಿ ದಂಡ ಕಡಿತ ಮಾಡುತ್ತಾರೆ. ಇಲ್ಲಿ ಕೊಲೆ ಮಾಡಿದವರು ಹೊರಗೆ ಆರಾಮವಾಗಿ ಓಡಾಡುತ್ತಾರೆ. ಹಾಗಾಗಬಾರದು. ಕೊಲೆ ಮಾಡಿದವರಿಗೆ ಕಾನೂನಿನಡಿ ಶಿಕ್ಷೆ ನೀಡುವುದರಲ್ಲಿ ನಿಮ್ಮ ಯಶಸ್ಸು ಅಡಗಿದೆ’ ಎಂದು ಹೇಳಿದರು.

ADVERTISEMENT

‘ಕರ್ತವ್ಯ ಕೂಟದಲ್ಲಿ ಪ್ರಶಸ್ತಿ ಪಡೆದವರ ಜವಾಬ್ದಾರಿ ಹೆಚ್ಚಿದೆ. ಅದನ್ನು ನಿಭಾಯಿಸಿ. ನಿಮ್ಮ ಕೆಲಸವನ್ನು ಪ್ರೀತಿಸಿ. ಕುಟುಂಬಕ್ಕೆ ಸಮಯ ನೀಡಿ. ಒತ್ತಡದಿಂದ ಹೊರಬರಲು ಸಂತೋಷದಿಂದ ಇರಿ. ಸದಾ ಅನ್ವೇಷಿಸುವ ಮನೋಭಾವ ಇರಲಿ’ ಎಂದು ಸಲಹೆ ನೀಡಿದರು.

ಜೆಜೆಎಂ ವೈದ್ಯಕೀಯ ಕಾಲೇಜಿನ ವಿಧಿ ವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥ ಡಾ. ಸಂತೋಷ್‌, ‘ಅಪರಾಧ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಪ್ರತಿ ವಸ್ತುವೂ ಮುಖ್ಯ. ವಿಧಿ ವಿಜ್ಞಾನದ ಸಾಕ್ಷ್ಯಾಧಾರ, ಶ್ವಾನದಳ ಪ್ರಮುಖ ಪಾತ್ರ ವಹಿಸುತ್ತವೆ’ ಎಂದರು.

ಎಸ್‌.ಸಿ.ಆರ್‌.ಬಿ.ಯ ಹಿರಿಯ ಕಾರ್ಯಕ್ರಮಾಧಿಕಾರಿ ನಾಗೇಶ್‌ ಎನ್‌., ‘ಇದು ಸ್ಪರ್ಧೆಯಲ್ಲ. ಕೌಶಲ ಉತ್ತೇಜಿಸುವ ಕಾರ್ಯಕ್ರಮ. ದೈನಂದಿನ ತನಿಖೆಯನ್ನು ಪೊಲೀಸ್ ಸಿಬ್ಬಂದಿ ಹೇಗೆ ಮಾಡಬೇಕು ಎಂಬುದರ ಬಗ್ಗೆ ಕೌಶಲ ತರಬೇತಿ ನೀಡುವ ಕಾರ್ಯಕ್ರಮ’ ಎಂದರು.

ಪೊಲೀಸ್‌ ಕರ್ತವ್ಯಕೂಟದಲ್ಲಿ ವಿಜೇತರಾದವರಿಗೆ ಹೆಚ್ಚುವರಿ ನಗದು ಪುರಸ್ಕಾರ ನೀಡಲು ನೂತನ ಐಜಿಪಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ವಲಯ ಕಚೇರಿಯ ಅಭಿಯೋಗ ಉಪ ನಿರ್ದೇಶಕಿ ಕೆ.ಜಿ. ಕಲ್ಪನಾ, ‘ತರಬೇತಿ ನೀಡಲು ಹಿರಿಯ ಅಧಿಕಾರಿಗಳು ಮುಂದಾದಾಗ ಸಿಬ್ಬಂದಿ ವಿಷಯ ಜ್ಞಾನ ಪಡೆಯಲು ಮುಂದಾಗಬೇಕು. ಸ್ಪರ್ಧಾ ಮನೋಭಾವ ಅಗತ್ಯ. ಇದು ಶಿಕ್ಷಣದ ಮುಂದುವರಿದ ಭಾಗ ಎಂದು ಅರಿಯಬೇಕು. ಕಾನೂನಿನಲ್ಲಿನ ಇತ್ತೀಚಿನ ತಿದ್ದುಪಡಿ, ತನಿಖೆಯನ್ನು ಯಾವ ರೀತಿ ನಿರ್ವಹಿಸಬೇಕು. ತನಿಖೆಯಲ್ಲಿ ನೀವು ಮಾಡುವ ಸಣ್ಣ ತಪ್ಪಿನಿಂದ ನೀವೂ ಶಿಕ್ಷೆಗೆ ಹೇಗೆ ಗುರಿಯಾಗುತ್ತೀರಿ ಎಂಬುದನ್ನೂ ತಿಳಿಯಬೇಕು. ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಿ’ ಎಂದು ಕಿವಿಮಾತು ಹೇಳಿದರು.

ದೊಡ್ಡಬಾತಿಯ ಆರ್‌.ಎಫ್‌.ಎಸ್‌.ಎಲ್‌.ನ ಉಪನಿರ್ದೇಶಕಿ ಛಾಯಾಕುಮಾರಿ, ಕರ್ವವ್ಯಕೂಟದಲ್ಲಿ ಭಾಗವಹಿಸಿದಸಿಬ್ಬಂದಿ ನಿಂಗನಗೌಡ, ಸಂತೋಪ ಪಾಟೀಲ, ಸತೀಶ್‌ ಆರ್‌. ಮಾತನಾಡಿದರು.

ಕರ್ತವ್ಯ ಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾದ ದಾವಣಗೆರೆ, ಚಿತ್ರದುರ್ಗ, ಹಾವೇರಿ, ಶಿವಮೊಗ್ಗ ವಲಯದ ಸಿಬ್ಬಂದಿಗೆ ಬಹುಮಾನ ನೀಡಿ ಗೌರವಿಸಲಾ ಯಿತು. ದಾವಣಗೆರೆ ತಂಡ ಸಮಗ್ರ ಚಾಂಪಿಯನ್‌ ಪ್ರಶಸ್ತಿ ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.