
ದಾವಣಗೆರೆ: ನವವಿವಾಹಿತೆಯೊಬ್ಬರು ಪ್ರಿಯಕರನೊಂದಿಗೆ ಪರಾರಿಯಾಗಿದ್ದರಿಂದ ಮನನೊಂದು ಆಕೆಯ ಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಮದುವೆ ಮಾಡಿಸಿದ್ದ ವಧುವಿನ ಸೋದರಮಾವ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಾಲ್ಲೂಕಿನ ಗುಮ್ಮನೂರು ಗ್ರಾಮದ ಹರೀಶ್ (30) ಹಾಗೂ ಇಲ್ಲಿನ ಆನೆಕೊಂಡದ ನಿವಾಸಿ ರುದ್ರೇಶ್ (36) ಆತ್ಮಹತ್ಯೆ ಮಾಡಿಕೊಂಡವರು.
ತಾಲ್ಲೂಕಿನ ಹುಲಿಕಟ್ಟೆ ಗ್ರಾಮದ ಸರಸ್ವತಿ ಅವರನ್ನು ಹರೀಶ್ 3 ತಿಂಗಳು ಹಿಂದೆ ವಿವಾಹವಾಗಿದ್ದರು. ಜನವರಿ 23ರಂದು ಸರಸ್ವತಿ ಆಕೆಯ ಪ್ರಿಯಕರ ಕುಮಾರ್ ಜೊತೆ ಪರಾರಿಯಾಗಿದ್ದರು. ಹುಡುಕಾಟ ನಡೆಸಿದ ಬಳಿಕ ಜ.25ರಂದು ಜೊತೆಯಾಗಿ ಪತ್ತೆಯಾಗಿದ್ದರು.
ಇದರಿಂದ ತೀವ್ರವಾಗಿ ಮನನೊಂದಿದ್ದ ಹರೀಶ್, ಸೋಮವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮುಂದೆ ನಿಂತು ಮದುವೆ ಮಾಡಿಸಿದ್ದ ಸರಸ್ವತಿಯ ಸೋದರಮಾವ ರುದ್ರೇಶ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮಂಗಳವಾರ ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳಿದಿದ್ದಾರೆ.
ಡೆತ್‌ನೋಟ್ ಪತ್ತೆ:
‘ಪತ್ನಿ ಸರಸ್ವತಿ ಬೇರೆ ಯುವಕನೊಂದಿಗೆ ಓಡಿಹೋಗಿದ್ದಾಳೆ. ಆದರೆ, ನಾನೇ ಹಿಂಸೆ ನೀಡುತ್ತಿದ್ದೇನೆ ಎಂದು ಸುಳ್ಳು ಆರೋಪ ಮಾಡಿದ್ದಾಳೆ. ಸರಸ್ವತಿ ಮತ್ತು ಆಕೆಯ ಸಂಬಂಧಿಕರು ಜೀವ ಬೆದರಿಕೆಯೊಡ್ಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನಗೆ ಮಾನ–ಮರ್ಯಾದೆ ಮುಖ್ಯ. ಪ್ರೀತಿಸಿದ ಯುವಕನೊಂದಿಗೆ ಓಡಿಹೋದರೂ, ನನಗೆ ಕಿರುಕುಳ ನೀಡುತ್ತಿರುವ ಪತ್ನಿ, ಆಕೆಯ ತಂದೆ–ತಾಯಿ, ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆಯಾಗಲಿ. ಜೀವನದಲ್ಲಿ ಬಹಳ ನೊಂದಿದ್ದೇನೆ’ ಎಂದು ಸಾವಿಗೂ ಮುನ್ನ ಹರೀಶ್ ಬರೆದಿಟ್ಟಿದ್ದಾರೆ ಎನ್ನಲಾದ ಡೆತ್‌ನೋಟ್ ಪತ್ತೆಯಾಗಿದೆ.
‘ಸರಸ್ವತಿಯ ಪ್ರಿಯಕರ ಕುಮಾರ್, ಹರೀಶ್ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ್ದ. ಇದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸರಸ್ವತಿ, ಆಕೆಯ ಪೋಷಕರು ಹಾಗೂ ಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಹರೀಶ್ ತಂದೆ ದೂರು ನೀಡಿದ್ದಾರೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.