ದಾವಣಗೆರೆ: ಕಿರುಕುಳ ತಾಳಲಾರದೇ ಪತಿಯನ್ನು ಕೊಂದ ಪತ್ನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಮತಿ ತಾಲ್ಲೂಕು ಆರುಂಡಿ ಗ್ರಾಮದ ನಿವಾಸಿ ರೇಣುಕಾ (29) ಶಿಕ್ಷೆಗೆ ಗುರಿಯಾದ ಮಹಿಳೆ. ಈಕೆಯ ಪತಿ ಬಂಗಿನರಸಪ್ಪ ಕೊಲೆಯಾದವರು.
ಬಂಗಿ ನರಸಪ್ಪ ಮದ್ಯವ್ಯಸನಿಯಾಗಿದ್ದು, ಕುಡಿಯಲು ಹಣ ನೀಡುವಂತೆ ಪ್ರತಿದಿನ ಪತ್ನಿಯನ್ನು ಪೀಡಿಸುತ್ತಿದ್ದರು. ಹಣ ನೀಡದೇ ಇದ್ದಾಗ ಹೊಡೆದು ಹಿಂಸೆ ನೀಡುತ್ತಿದ್ದ. ಇದರಿಂದ ರೋಸಿಹೋದ ರೇಣುಕಾ ಗಂಡನನ್ನು ಕೊಲೆ ಮಾಡಲು ನಿಶ್ಚಯಿಸಿದಳು.
2018ರ ಫೆಬ್ರುವರಿ 8ರಂದು ಇಬ್ಬರ ನಡುವೆ ಜಗಳ ನಡೆದು ಪತಿಯ ಕುತ್ತಿಗೆ ಹಿಡಿದು ಮನೆಯ ಹಿತ್ತಲಿಗೆ ಎಳೆದುಕೊಂಡು ಕುಡುಗೋಲಿನಿಂದ ಕುತ್ತಿಗೆಯನ್ನು ಕೊಯ್ದು ಸಾಯಿಸಿ ಹೆಣವನ್ನು ಪಕ್ಕದಲ್ಲೇ ಇದ್ದ ಶೌಚಾಲಯದ ಗುಂಡಿಯೊಳಗೆ ಹಾಕಿ ಕಲ್ಲು ಚಪ್ಪಡಿಗಳಿಂದ ಮುಚ್ಚಿ ಹಾಕಿದ್ದಳು. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆದು ನ್ಯಾಯಾಧೀಶರಾದ ಗೀತಾ ಕೆ.ಬಿ. ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹15 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ವಿ. ಪಾಟೀಲ್ ವಾದ ಮಂಡಿಸಿದ್ದರು.
ವರದಕ್ಷಿಣೆ ಕಿರುಕುಳ: ಮಹಿಳೆ ಆತ್ಮಹತ್ಯೆ
ದಾವಣಗೆರೆ: ಎಂಟು ತಿಂಗಳ ಹಿಂದೆ ವಿವಾಹವಾಗಿದ್ದ ಮಹಿಳೆಯೊಬ್ಬರು ನಗರದ ಬಂಬೂಬಜಾರ್‌ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಕಾರಣ ಎಂದು ಆರೋಪಿಸಲಾಗಿದೆ.
ಬೇಬಿ ಹಜೀರಾ (19) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಇಮ್ರಾನ್ ಎಂಬುವರ ಜತೆಗೆ ಆಕೆಯ ಮದುವೆಯಾಗಿತ್ತು.
‘ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು, ಇದರಿಂದ ಮಾನಸಿಕವಾಗಿ ನೊಂದು ತಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ’ ಎಂದು ಆಕೆಯ ತಂದೆ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಕೊಟ್ಪಾ ಕಾಯ್ದೆ ಉಲ್ಲಂಘನೆ: ದಂಡ
ದಾವಣಗೆರೆ: ಜಿಲ್ಲೆಯ ತಂಬಾಕು ನಿಯಂತ್ರಣ ತನಿಖಾ ದಳವು ಶುಕ್ರವಾರ ಚನ್ನಗಿರಿ ನಗರ ಮತ್ತು ನಲ್ಲೂರಿನ ಬಳಿ ಇರುವ ಅಂಗಡಿ, ಪಾನ್‍ಶಾಪ್, ಹೋಟೆಲ್‍ಗಳ ಮೇಲೆ ದಾಳಿ ನಡೆಸಿ ಕೋಟ್ಪಾ ಕಾಯ್ದೆ ಉಲ್ಲಂಘನೆಗೆ ಸಂಬಂಧಿಸಿದಂತೆ 27 ಪ್ರಕರಣ ದಾಖಲಿಸಿ ₹ 2700 ದಂಡ ವಿಧಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.