ADVERTISEMENT

ಚನ್ನಗಿರಿ: ಅರಣ್ಯ ಇಲಾಖೆ ಕಚೇರಿ ಮುಂದೆ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 6:29 IST
Last Updated 27 ಅಕ್ಟೋಬರ್ 2025, 6:29 IST
ಕಾಡಾನೆ ದಾಳಿಗೆ ನಾಶವಾದ ಅಡಿಕೆ ಮರಗಳನ್ನು ಚನ್ನಗಿರಿಯ ಅರಣ್ಯ ಇಲಾಖೆ ಕಚೇರಿಯ ಮುಂದೆ ರಾಶಿಯನ್ನು ಹಾಕಿಕೊಂಡು ಗಂಡಗನಹಂಕಲು ಗ್ರಾಮದ ರೈತರು ಭಾನುವಾರ ಪ್ರತಿಭಟನೆ ನಡೆಸಿದರು
ಕಾಡಾನೆ ದಾಳಿಗೆ ನಾಶವಾದ ಅಡಿಕೆ ಮರಗಳನ್ನು ಚನ್ನಗಿರಿಯ ಅರಣ್ಯ ಇಲಾಖೆ ಕಚೇರಿಯ ಮುಂದೆ ರಾಶಿಯನ್ನು ಹಾಕಿಕೊಂಡು ಗಂಡಗನಹಂಕಲು ಗ್ರಾಮದ ರೈತರು ಭಾನುವಾರ ಪ್ರತಿಭಟನೆ ನಡೆಸಿದರು   

ಚನ್ನಗಿರಿ: ತಾಲ್ಲೂಕಿನ ಉಬ್ರಾಣಿ ಹೋಬಳಿ ವ್ಯಾಪ್ತಿಯ ಗಂಡುಗನಹಂಕಲು ಗ್ರಾಮದ ಕಾಡಂಚಿನ ಜಮೀನಿಗೆ ಕಾಡಾನೆಯೊಂದು ನುಗ್ಗಿ ಬೆಳೆ ನಾಶ ಮಾಡಿದ್ದು, ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಪಟ್ಟಣದ ಅರಣ್ಯ ಇಲಾಖೆಯ ಕಚೇರಿಯ ಮುಂದೆ ರೈತರು ಭಾನುವಾರ ಹಾಳಾದ ಅಡಿಕೆ ಮರಗಳ ರಾಶಿ ಹಾಕಿ ಪ್ರತಿಭಟನೆ ನಡೆಸಿದರು.

ಐದಾರು ತಿಂಗಳಿಂದ ಗಂಡಗನಹಂಕಲು, ರೊಪ್ಪದಹಟ್ಟಿ, ಗೊಲ್ಲರಹಟ್ಟಿ, ಮಳ್ಳಹಟ್ಟಿ ಮುಂತಾದ ಕಾಡಂಚಿನ ಗ್ರಾಮಗಳಲ್ಲಿ ರಾತ್ರಿ ವೇಳೆ ಕಾಡಾನೆಯೊಂದು ಆಹಾರವನ್ನು ಅರಸಿ ಬಂದು ಫಸಲಿಗೆ ಬಂದಿರುವ ಅಡಿಕೆ, ತೆಂಗು, ಬಾಳೆ ಮರಗಳನ್ನು ನಾಶ ಮಾಡಿ ಹೋಗುತ್ತಿದೆ. ಅಷ್ಟೇ ಅಲ್ಲದೇ ಮೆಕ್ಕೆಜೋಳ, ಹತ್ತಿ, ರಾಗಿ ಬೆಳೆಗಳನ್ನು ಕೂಡಾ ನಾಶ ಮಾಡಿ ಹೋಗುತ್ತಿದೆ. ಶನಿವಾರ ರಾತ್ರಿ ಗಂಡಗನಹಂಕಲು ಗ್ರಾಮದ ತೋಟಕ್ಕೆ ನುಗ್ಗಿ 50ಕ್ಕಿಂತ ಹೆಚ್ಚು ಫಸಲಿಗೆ ಬಂದಿರುವ ಅಡಿಕೆ ಮರಗಳನ್ನು ನಾಶ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಎರಡು ಎಕರೆ ಅಡಿಕೆ ತೋಟವನ್ನು 7 ವರ್ಷಗಳ ಹಿಂದೆ ಮಾಡಿದ್ದೇನು. ಈ ವರ್ಷದಿಂದ ಅಡಿಕೆ ಫಸಲಿಗೆ ಬಂದಿತ್ತು. ಆದರೆ ಶನಿವಾರ ರಾತ್ರಿ ಕಾಡಾನೆ ನಮ್ಮ ತೋಟಕ್ಕೆ ನುಗ್ಗಿ 50ಕ್ಕಿಂತ ಹೆಚ್ಚು ಅಡಿಕೆ ಮರಗಳನ್ನು ನಾಶ ಮಾಡಿದೆ. ನಮ್ಮದು ಬಡ ಕುಟುಂಬ, ಮೂವರು ಹೆಣ್ಣು ಮಕ್ಕಳು ಇದ್ದು, ಕೃಷಿಯಿಂದಲೇ ಜೀವನ ನಡೆಸಬೇಕಾಗಿದೆ. ಈಗ ಅಡಿಕೆ ಮರಗಳನ್ನು ಕಾಡಾನೆ ನಾಶ ಮಾಡಿರುವುದು ತುಂಬಾ ನೋವು ಹಾಗೂ ಹಾನಿಯಾಗಿದೆ. ಬೆಳೆ ಹಾನಿಗೆ ಪರಿಹಾರ ನೀಡಬೇಕು ಮತ್ತು ಕಾಡಾನೆ ಸೆರೆ ಹಿಡಿಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದೇವೆ’ ಎಂದು ಸಂತ್ರಸ್ತ ರೈತ ಚನ್ನಬಸಪ್ಪ ತಮ್ಮ ಅಳಲು ತೋಡಿಕೊಂಡರು.

ADVERTISEMENT

‘ಉಬ್ರಾಣಿ ಹೋಬಳಿ ವ್ಯಾಪ್ತಿಯಲ್ಲಿ ಐದಾರು ತಿಂಗಳಿಂದ ಕಾಡಾನೆಯೊಂದು ಜಮೀನುಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿ ಹೋಗುತ್ತಿದೆ. ಕಾಡಾನೆ ಸೆರೆಗೆ ಅನುಮತಿಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ಕಾಡಂಚಿನ ಪ್ರದೇಶಗಳಲ್ಲಿ ಸಿಬ್ಬಂದಿ ರಾತ್ರಿ ಕಾವಲು ಕಾಯುತ್ತಿದ್ದಾರೆ. ಈ ಭಾಗದ ರೈತರಿಗೆ ಪಟಾಕಿ ಸಿಡಿಸಲು ಇಲಾಖೆಯಿಂದಲೇ ನೀಡಲಾಗಿದೆ. ಈ ಅರಣ್ಯ ಪ್ರದೇಶ ಆನೆ ಕಾರಿಡಾರ್ ಆಗಿದ್ದು, ಕಾಡಾನೆ ಕಾಡಂಚಿನ ಗ್ರಾಮಗಳಿಗೆ ಬರದಂತೆ ಆನೆ ಕಂದಕವನ್ನು ನಿರ್ಮಿಸಲಾಗಿತ್ತು. ಆದರೆ ಮಳೆಯಿಂದಾಗಿ ಅವುಗಳಲ್ಲಿ ಮಣ್ಣು ತುಂಬಿದೆ. ಕಂದಕದಲ್ಲಿನ ಮಣ್ಣು ತೆಗೆಯಿಸಲು ಅಗತ್ಯ ಅನುದಾನ ಬಿಡುಗಡೆಗೂ ಮೇಲಧಿಕಾರಿಗಳಿಗೆ ಮನವಿ ಮಾಡಲಾಗಿದೆ’ ಎಂದು ವಲಯ ಅರಣ್ಯಾಧಿಕಾರಿ ಎಸ್. ಶ್ವೇತಾ ತಿಳಿಸಿದರು.

ಪ್ರತಿಭಟನೆಯಲ್ಲಿ ಗೋವಿಂದ್ ನಾಯ್ಕ, ಹನುಮಂತ ನಾಯ್ಕ, ಮುನೀರ್ ನಾಯ್ಕ, ರುದ್ರೇಶ್, ಪ್ರಕಾಶ್, ಉಮೇಶ್, ಶಿವು ಪಾಲ್ಗೊಂಡಿದ್ದರು.

ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್, ಕಾಂಗ್ರೆಸ್ ಮುಖಂಡ ಬಿ.ಎನ್. ವೀರೇಶ್ ನಾಯ್ಕ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು.

ಅಗತ್ಯ ಅನುದಾನ ಬಿಡುಗಡೆಗೆ ಪ್ರಯತ್ನ: ಭರವಸೆ

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳ್ ಜಗದೀಶ್ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ ‘ಆನೆ ಕಂದಕ ನಿರ್ಮಾಣಕ್ಕೆ ಅಗತ್ಯವಾದ ಅನುದಾನ ಬೆಳೆ ಪರಿಹಾರ ಮೊತ್ತ ಬಿಡುಗಡೆ ಹಾಗೂ ಕಾಡಾನೆ ಸೆರೆ ಹಿಡಿಯಲು ಅನುಮತಿಯನ್ನು ಕೊಡಿಸಲು ಸಂಬಂಧಪಟ್ಟ ಅರಣ್ಯ ಸಚಿವರ ಜತೆ ಚರ್ಚೆ ನಡೆಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಾಗೆಯೇ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಗಾಗಿ ಜೀವ ವೈವಿಧ್ಯ ಮಂಡಳಿಯಿಂದ ಎರಡು ಕೆರೆಗಳನ್ನು ನಿರ್ಮಿಸಲು ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.