ADVERTISEMENT

‘ವಿಂಡೋಸೀಟ್‌’ ಚಿತ್ರ ಬಿಡುಗಡೆ ಜುಲೈ 1ಕ್ಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 6:46 IST
Last Updated 25 ಜೂನ್ 2022, 6:46 IST

ದಾವಣಗೆರೆ: ‘ಸಸ್ಪೆನ್ಸ್‌, ಲವ್ ಕಥಾ ಹಂದರದ ‘ವಿಂಡೋಸೀಟ್‌’ ಚಿತ್ರ ಜುಲೈ 1ರಂದು ರಾಜ್ಯದಾದ್ಯಂತ ತೆರೆಕಾಣಲಿದೆ. ರೈಲಿನಲ್ಲಿ ಪ್ರಯಾಣ ಮಾಡುವಾಗ ನಾಯಕನ ಬದುಕಿನಲ್ಲಿ ನಡೆಯುವ ತಿರುವುಗಳನ್ನು ಚಿತ್ರದಲ್ಲಿ ಕಾಣಬಹುದು’ ಎಂದು ಚಿತ್ರದ ನಿರ್ದೇಶಕಿ ಶೀತಲ್‌ ಶೆಟ್ಟಿ ಹೇಳಿದರು.

‘ವಿಂಡೋಸೀಟ್‌’ ಎನ್ನುವುದು ಯಾವುದೇ ಪ್ರಯಾಣಿಕನಿಗೆ ಹೆಚ್ಚು ಇಷ್ಟವಾಗುತ್ತದೆ. ರೈಲಿನಲ್ಲಿ ಸಾಗುವಾಗ ನಡೆಯುವ ಘಟನಾವಳಿಗಳು ನಾಯಕನ ಬದುಕಿಗೆ ತಿರುವು ನೀಡುತ್ತದೆ. ಹೀಗಾಗಿ ಚಿತ್ರಕ್ಕೆ ಈ ಹೆಸರು ಇಡಲಾಗಿದೆ. ಹಲವು ಏಳು–ಬೀಳುಗಳ ನಡುವೆ ಕಥಾ ನಾಯಕ ಹೇಗೆ ಪಾರಾಗುತ್ತಾನೆ ಎಂಬುದು ಚಿತ್ರದ ತಿರುಳು. ರಂಗಿತರಂಗ ಖ್ಯಾತಿಯ ನಟ ನಿರೂಪ್‌ ಭಂಡಾರಿ ನಾಯಕನಾಗಿ ನಟಿಸಿದ್ದು, ನಾಯಕಿಯರಾಗಿ ಸಂಜನಾ ಆನಂದ್‌, ಅಮೃತಾ ಅಯ್ಯಂಗಾರ್‌ ಪಾತ್ರ ಮಾಡಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

‘ಪ್ರಥಮ ಬಾರಿಗೆ ನಿರ್ದೇಶಕಿಯಾಗಿದ್ದೇನೆ. ಜಾಕ್‌ ಮಂಜು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸಾಗರ, ಶಿವಮೊಗ್ಗ, ತಾಳಗುಪ್ಪ, ಬೆಂಗಳೂರು, ಹೈದರಾಬಾದ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ದಾವಣಗೆರೆ ಭಾಗದಲ್ಲಿ ಕನ್ನಡ ಚಿತ್ರಗಳನ್ನು ಪ್ರೇಕ್ಷಕರು ಉತ್ತಮವಾಗಿ ಸ್ವೀಕರಿಸುತ್ತಿದ್ದಾರೆ. ಹೀಗಾಗಿ ಇಲ್ಲಿಗೆ ಬಂದಿದ್ದೇವೆ. ಚಿತ್ರಕ್ಕೆ ಅರ್ಜುನ್ಯ ಜನ್ಯ ಸಂಗೀತವಿದ್ದು, ವಿಘ್ನೇಶ್‌ರಾಜ್‌ ಛಾಯಾಗ್ರಹಣ, ಪ್ರದೀಪ್ ರಾವ್‌ ಸಂಕಲನ ಇದೆ. ನಟ ರವಿಶಂಕರ್‌, ಮಧುಸೂದನ ರಾವ್‌, ಲೇಖನಾಯ್ದು, ‘ಕಾಮಿಡಿ ಕಿಲಾಡಿ’ ಖ್ಯಾತಿಯ ಸೂರಜ್‌ ಸೇರಿ ಹಲವರ ತಾರಾಗಣವಿದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ಹರಸಬೇಕು’ ಎಂದರು.

ADVERTISEMENT

‘ಚಿತ್ರದಲ್ಲಿ ರಘು ಎಂಬ ಸಂಗೀತಗಾರನ ಪಾತ್ರವನ್ನು ಮಾಡಿದ್ದೇನೆ. ನಿರ್ಮಾಪಕ ಜಾಕ್‌ ಮಂಜು ಜತೆ ಇದು ನನ್ನ ಎರಡನೇ ಸಿನಿಮಾ. ಉತ್ತಮ ತಂಡದ ಜತೆ ಕೆಲಸ ಮಾಡಿದ ತೃಪ್ತಿ ಇದೆ. ದಾವಣಗೆರೆಯ ಜನ ನನ್ನ ‘ರಂಗಿತರಂಗ’ವನ್ನು ಮೆಚ್ಚಿದ್ದರು. ಇದಕ್ಕೂ ಪ್ರೋತ್ಸಾಹ ಬೇಕು’ ಎಂದು ನಟ ನಿರೂಪ್‌ ಭಂಡಾರಿ ಹೇಳಿದರು.

‘ಕೊಲೆ ಸುತ್ತ ನಡೆಯುವ ಕಥೆಯಲ್ಲಿ ಪ್ರೀತಿಯ ವಿಷಯವನ್ನು ತುಂಬಾ ಚೆನ್ನಾಗಿ ಬೆಂಡ್‌ ಮಾಡಿದ್ದಾರೆ. ಮಹಿಳೆಯೊಬ್ಬರ ನಿರ್ದೇಶನದಲ್ಲಿ ಕೆಲಸ ಮಾಡಲು ಖುಷಿ ಇದೆ. ಚಿತ್ರದಲ್ಲಿ ಸ್ವತಂತ್ರ ಮನೋಭಾವದ ಹುಡುಗಿಯ ಪಾತ್ರ ಮಾಡಿದ್ದೇನೆ’ ಎಂದು ನಾಯಕ ನಟಿ ಅಮೃತಾ ಅಯ್ಯಂಗಾರ್‌ ಖುಷಿ ಹಂಚಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.