ADVERTISEMENT

ದಾವಣಗೆರೆ: ಮಣ್ಣಿನ ಹಣತೆ ಮಾಡಿ ಬದುಕು ಕಟ್ಟಿಕೊಂಡ ಮಹಿಳಾ ಸ್ವಸಹಾಯ ಸಂಘದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2025, 6:05 IST
Last Updated 22 ಅಕ್ಟೋಬರ್ 2025, 6:05 IST
ಆಕರ್ಷಕ ಮಣ್ಣಿನ ಹಣತೆ
ಆಕರ್ಷಕ ಮಣ್ಣಿನ ಹಣತೆ   

ದಾವಣಗೆರೆ: ಮನೆಗಳಲ್ಲಿ ವಿಶೇಷವಾಗಿ ದೀಪಾವಳಿ, ಕಾರ್ತಿಕ ಹಬ್ಬದ ಸಂದರ್ಭ ಹಚ್ಚುವ ಹಣತೆಗಳಲ್ಲಿ ಇವರ ಬೆವರಿನ ಪರಿಶ್ರಮವಿದೆ. ದೀಪದ ಹೊಂಬೆಳಕಿನಲ್ಲಿ ಬದುಕನ್ನು ಬೆಳಗುವ ಭರವಸೆಯಿದೆ. ಮಣ್ಣಿನ ಪ್ರಣತೆಗಳ ತಯಾರಿಕೆ ಮಹಿಳಾ ಸ್ವಾವಲಂಬನೆಗೆ ಬಲ ನೀಡಿದೆ. ಇದು ಜಿಲ್ಲೆಯ ಮಹಿಳಾ ಸ್ವ–ಸಹಾಯ ಸಂಘಗಳ ಯಶೋಗಾಥೆ.

ಜಿಲ್ಲೆಯಲ್ಲಿ ವಿವಿಧ ಕರಕುಶಲ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ 9,000ಕ್ಕೂ ಹೆಚ್ಚು ಮಹಿಳಾ ಸ್ವ–ಸಹಾಯ ಸಂಘಗಳಿವೆ. ಇವುಗಳ ಪೈಕಿ 10ಕ್ಕೂ ಹೆಚ್ಚು ಸಂಘಗಳು ಮಣ್ಣಿನ ಹಣತೆಗಳನ್ನು ತಯಾರಿಸಿ, ಸ್ವಾವಲಂಬನೆಯ ಪಥ ಕಂಡುಕೊಂಡಿವೆ.

ಚನ್ನಗಿರಿ, ನ್ಯಾಮತಿ, ಹೊನ್ನಾಳಿ, ಜಗಳೂರು ತಾಲ್ಲೂಕುಗಳ ವಿವಿಧ ಗ್ರಾಮಗಳಲ್ಲಿ ಮಹಿಳೆಯರು ರಚಿಸಿಕೊಂಡಿರುವ ಸ್ವ–ಸಹಾಯ ಸಂಘಗಳು ನಶಿಸುತ್ತಿರುವ ಈ ಗುಡಿ ಕೈಗಾರಿಕೆಗೆ ಬಲತುಂಬಿವೆ. ಹಾಗೆಯೇ ತಮ್ಮ ಕುಟಂಬಕ್ಕೂ ಈ ನಾರಿಯರು ದಾರಿ‘ದೀಪ’ವಾಗಿದ್ದಾರೆ. ಕೌಶಲಾಭಿವೃದ್ಧಿ ಮತ್ತು ಗ್ರಾಮೀಣ ಜೀವನೋಪಾಯ ಇಲಾಖೆಯ (ಎನ್‌ಆರ್‌ಎಲ್‌ಎಂ) ‘ದೀಪ ಸಂಜೀವಿನಿ’ ಯೋಜನೆಯಡಿ ಸಾಲ ಪಡೆದು ಆರಂಭಿಸಿದ ಗುಡಿ ಕೈಗಾರಿಕೆ ಇವರ ಕೈಹಿಡಿದಿದೆ.

ADVERTISEMENT

ನ್ಯಾಮತಿ ತಾಲ್ಲೂಕಿನ ಕೆಂಚಿಕೊಪ್ಪದಲ್ಲಿ ಕುಂಬಾರ ಸ್ವ–ಸಹಾಯ ಸಂಘದಲ್ಲಿ ಲಲಿತಾ ಸೇರಿದಂತೆ 13 ಮಹಿಳೆಯರಿದ್ದಾರೆ. ದೊಣೆಹಳ್ಳಿಯ ಉತ್ಸವಾಂಬಾ ಸ್ವ–ಸಹಾಯ ಸಂಘದ ರೇಣುಕಮ್ಮ, ಕುಂಬಳೂರಿನ ಸಹನಾ ಸಂಜೀವಿನ ಸಂಘದ ಗಿರಿಜಮ್ಮ ಸೇರಿದಂತೆ ಅನೇಕ ಮಹಿಳೆಯರು ಮಣ್ಣಿನ ಜೊತೆಗಿನ ಸಾಂಗತ್ಯದಿಂದ ತಾವಿರುವ ಊರುಗಳಲ್ಲೇ ಭದ್ರ ನೆಲೆ ಕಂಡುಕೊಂಡಿದ್ದಾರೆ. 

ಮಾರಾಟಕ್ಕೆ ವೇದಿಕೆ:

ಮಣ್ಣಿನಿಂದ ತಯಾರಿಸಿದ ಹಣತೆ, ಮಡಿಕೆ, ಕುಡಿಕೆ, ಚಟಿಗೆ, ಹೂಜಿ, ಪಾತ್ರೆ, ತಟ್ಟೆ, ಮೀನು ಬಾಣಲೆ ಸೇರಿದಂತೆ ತರಹೇವಾರಿ ಕರಕುಲಶ ಉತ್ಪನ್ನಗಳು ಇವರ ಕೈಯಲ್ಲಿ ಅರಳಿವೆ. ವಾರದ ಸಂತೆಗಳಲ್ಲಿ ಮಾರಾಟವಾತ್ತಿವೆ. ಉಳಿದ ದಿನಗಳಲ್ಲಿ ಊರೂರಿಗೆ ಪುಟ್ಟಿಯಲ್ಲಿ ಹೊತ್ತು ಮಾರುತ್ತಾರೆ. ಮಾರಾಟಕ್ಕೆ ಜಿಲ್ಲಾ ಪಂಚಾಯಿತಿ ಹಾಗೂ ಎನ್‌ಆರ್‌ಎಲ್‌ಎಂ ಸಹ ವೇದಿಕೆ ಕಲ್ಪಿಸಿವೆ. ಉತ್ಸವ, ಮೇಳ, ಹಬ್ಬ ಹಾಗೂ ವಿಶೇಷ ಸಂದರ್ಭಗಳಲ್ಲಿ ನಗರದ ವಿವಿಧೆಡೆ ಮಳಿಗೆ ಹಾಕಿ ಪ್ರೋತ್ಸಾಹಿಸುತ್ತಿವೆ.

ಇನ್ನು, ಹಬ್ಬದ ಋತುವಿನಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಅಂಗಡಿಯವರು ಮೊದಲೇ ಆರ್ಡರ್ ನೀಡಿ ಸಾವಿರ, ಎರಡು ಸಾವಿರ ಹಣತೆಗಳನ್ನು ಕಾಯ್ದಿರಿಸುತ್ತಾರೆ. ಸಿದ್ಧವಾದ ಕೂಡಲೇ ಮನೆ ಬಾಗಿಲಿಗೇ ಬಂದು ಕೊಂಡೊಯ್ಯುತ್ತಾರೆ. ಕೈಯಿಂದ ಮಾಡಿದ, ಸೂಕ್ಷ್ಮ ಕುಸುರಿ ಕೆತ್ತನೆಯಂತಹ ರಚನೆಗಳಿಗೆ ಹೆಚ್ಚು ಬೇಡಿಕೆಯಿದೆ. ಲಕ್ಷ ರೂಪಾಯಿಯ ಉತ್ಪನ್ನ ತಯಾರಿಸಿದರೂ ಬೇಡಿಕೆಯಿದೆ. ಆದರೆ ಕೈಯಿಂದಲೇ ಮಾಡಬೇಕಿರುವುದರಿಂದ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ ದೊಣೆಹಳ್ಳಿಯ ರೇಣುಕಾ.

ಪಿಲ್ಲರ್‌ ಹಣತೆ
ಆಕರ್ಷಕ ಮಣ್ಣಿನ ಹಣತೆ
ಮ್ಯಾಜಿಕ್ ಹಣತೆ
ಆಕರ್ಷಕ ಮಣ್ಣಿನ ಹಣತೆ
ಮಣ್ಣಿನ ಹಣತೆಗಳ ತಯಾರಿಯಲ್ಲಿ ತೊಡಗಿರುವ ಸ್ವಸಹಾಯ ಸಂಘದ ಮಹಿಳೆ
ದಾವಣಗೆರೆ ಜಿಲ್ಲಾ ಪಂಚಾಯತ್ ಹಾಗೂ ಎನ್‌ಎಂಆರ್‌ಎಲ್‌ನಿಂದ ನಗರದಲ್ಲಿ ಈಚೆಗೆ ಆಯೋಜಿಸಿದ್ದ ‘ದೀಪ ಸಂಜೀವಿನಿ’ ಕಾರ್ಯಕ್ರಮದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರು ಮಾರಾಟಕ್ಕೆ ಇಟ್ಟಿದ್ದ ಮಣ್ಣಿನ ಹಣತೆಗಳನ್ನು ವೀಕ್ಷಿಸಿದ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಮಹಿಳೆಯರ ಸ್ವಾವಲಂಬನೆಗಾಗಿ ‘ದೀಪ ಸಂಜೀವಿನಿ’ ಯೋಜನೆ ನೆರವಾಗಿದೆ. ಸಂಘಗಳಿಗೆ ನೀಡುವ ₹1.5 ಲಕ್ಷ ಸಾಲ ಕುಶಲ ಕೈಗಾರಿಕೆಗೆ ಬಲ ನೀಡಿದೆ
ಭೋಜರಾಜ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಜಿಲ್ಲಾ ಪಂಚಾಯಿತಿ ದಾವಣಗೆರೆ

ಲಕ್ಷ ರೂಪಾಯಿವರೆಗೂ ವಹಿವಾಟು

ಮಳೆಗಾಲದ ಕೆಲವು ದಿನಗಳನ್ನು ಹೊರತುಪಡಿಸಿದರೆ ವರ್ಷದ ಬಹುತೇಕ ದಿನಗಳಲ್ಲಿ ಈ ಮಹಿಳೆಯರ ಕೈಗೆ ಬಿಡುವಿಲ್ಲ. ದೀಪಾವಳಿ ಸಮಯದಲ್ಲಿ ಒಂದೊಂದು ಸಂಘಗಳು ₹ 80000ರಿಂದ ₹ 1 ಲಕ್ಷದವರೆಗೂ ವಹಿವಾಟು ನಡೆಸಿವೆ. ಉಳಿದ ಸಮಯದಲ್ಲಿ ತಿಂಗಳಿಗೆ ಏನಿಲ್ಲವೆಂದರೂ ₹ 15000 ದಿಂದ ₹ 20000 ವಹಿವಾಟು ನಿಶ್ಚಿತ. ಖರ್ಚು ತೆಗೆದು ಐದಾರು ₹ 1000 ಲಾಭಕ್ಕೆ ಕೊರತೆಯಿಲ್ಲ ಎಂದು ಚನ್ನಗಿರಿಯ ಆಗರ ಬನ್ನಿಹಟ್ಟಿಯ ಶಶಿಕುಮಾರ್. ಈ ಕಾಯಕ ಮಾಡುತ್ತಿದ್ದ ತಾಯಿ ಪುಟ್ಟಮ್ಮ ಇತ್ತೀಚೆಗೆ ನಿಧನರಾದ ನಂತದ ಅವರ ಕಾಯಕವನ್ನು ಇವರು ಮುಂದುವರಿಸಿದ್ದಾರೆ.  ಕುಸುರಿ ಕಲೆಯ ಹಣತೆಗಳಿಗೆ ಡಿಮಾಂಡ್!: ಬೆಂಗಳೂರಿನಲ್ಲಿ ತರಬೇತಿ ಪಡೆದಿರುವ ಶಿವಕುಮಾರ್ ಅವರು ಮಣ್ಣಿನ ಹಣತೆಗಳಿಗೆ ಹೊಸ ರೂಪ ನೀಡಿದ್ದಾರೆ. ಇವರು ತಯಾರಿಸುವ ಮ್ಯಾಜಿಕ್ ಹಣತೆ ಪಿಲ್ಲರ್ ಹಣತೆ ಕಾರ್ತಿಕ ಹಣತೆಯಂತಹ ವೈವಿಧ್ಯಮಯ ಹಣತೆಗಳಿಗೆ ಭಾರಿ ಬೇಡಿಕೆಯಿದೆ. ಕೈಯಿಂದಲೇ ಮಾಡುವ ಕುಸುರಿ ಕಲೆಗೆ ಸಾಕಷ್ಟು ಶ್ರಮ ಸಮಯ ಹಾಗೂ ತಾಳ್ಮೆ ಬೇಕು.