ADVERTISEMENT

ಕ್ಯಾಂಟೀನ್ ನಡೆಸಿದ ಕಷ್ಟಗಳು...

‘ಸವಿರುಚಿ’ ಸಂಚಾರಿ ಕ್ಯಾಂಟೀನ್‌ಗೆ ಕೆಲವರಿಂದ ಅಸಹಕಾರ, ಮಾಹಿತಿ, ಜಾಗೃತಿಯ ಕೊರತೆ

ಕಲಾವತಿ ಬೈಚಬಾಳ
Published 8 ಮಾರ್ಚ್ 2020, 14:00 IST
Last Updated 8 ಮಾರ್ಚ್ 2020, 14:00 IST
ಜಿ.ಸಿ.ಮಂಜುಳಾ
ಜಿ.ಸಿ.ಮಂಜುಳಾ   

ದಾವಣಗೆರೆ: ಮಹಿಳೆಯರು ಸ್ವಾವಲಂಬಿಯಾಗಿ, ಉದ್ಯೋಗಿಗಳಾಗಬೇಕೆಂಬ ನಿಟ್ಟಿನಲ್ಲಿ ರಾಜ್ಯ ಮಹಿಳಾ ಅಭಿವೃದ್ಧಿ ನಿಮಗದಿಂದ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟಗಳ ಮೂಲಕ ‘ಸವಿರುಚಿ’ ಸಂಚಾರಿ ಕ್ಯಾಂಟೀನ್‌ನನ್ನು 2018ರ ಜೂನ್‌ನಲ್ಲಿ ದಾವಣಗೆರೆ ಜಿಲ್ಲಾ ಕೇಂದ್ರದಲ್ಲಿ ಅನುಷ್ಠಾನಗೊಳಿಸಲಾಗಿದೆ. ಆದರೆ, ಸ್ಥಳೀಯ ವ್ಯಾಪಾರಿಗಳ ಅಸಹಕಾದಿಂದ ಕ್ಯಾಂಟೀನ್‌ ನಡೆಸಲು ಆಗುತ್ತಿಲ್ಲ. ಬದಲಿಗೆ ನಿತ್ಯ ದೌರ್ಜನ್ಯ, ಬೆದರಿಕೆಗಳಿಗೆ ಒಳಗಾಗುವಂತಾಗಿದೆ.

‘ನಿಗಮದಿಂದ ಒಕ್ಕೂಟಕ್ಕೆ ₹ 10 ಲಕ್ಷ ಬಡ್ಡಿ ರಹಿತ ಸಾಲ ನೀಡಲಾಗಿದೆ. ಅದರಲ್ಲಿ ₹ 7 ಲಕ್ಷ ವೆಚ್ಚದಲ್ಲಿ ಸಂಚಾರಿ ಕ್ಯಾಂಟೀನ್‌ ವಾಹನ, ಅಡುಗೆ ಸಾಮಾನುಗಳನ್ನು ಖರೀದಿಸಲಾಗಿದೆ. ಪ್ರತಿ ತಾಲ್ಲೂಕಿನಲ್ಲೂ ಕ್ಯಾಂಟೀನ್‌ ನಡೆಸುವುದು ಕಷ್ಟ. ಹಾಗಾಗಿ ಜಿಲ್ಲಾ ಕೇಂದ್ರದಲ್ಲೇ ಕ್ಯಾಂಟೀನ್‌ ನಡೆಸಲು ತಾಲ್ಲೂಕು ಒಕ್ಕೂಟಗಳು ಒಮ್ಮತ ಸೂಚಿಸಿದ್ದವು. ಕ್ಯಾಂಟೀನ್‌ ಆರಂಭಗೊಂಡ ಐದಾರು ತಿಂಗಳು ವ್ಯಾಪಾರ ಚೆನ್ನಾಗಿಯೇ ಆಯಿತು. ಆದರೆ, ದಿನಗಳುರುಳಿದಂತೆ ವಾಹನ ನಿಲ್ಲಿಸುವ ಸ್ಥಳಗಳಲ್ಲಿ ಸ್ಥಳೀಯರ ಅಸಹಕಾರ, ದೌರ್ಜನ್ಯದ ಎದುರು ಗಟ್ಟಿಯಾಗಿ ನಿಲ್ಲಲು ಸಾಧ್ಯವಾಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ದುರ್ಗಾಂಬಿಕಾ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಜಿ.ಸಿ.ಮಂಜುಳಾ.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾಡಳಿತ, ಪೊಲೀಸ್‌ ಇಲಾಖೆಯವರಿಗೆ ಈ ಬಗ್ಗೆ ತಿಳಿಸಿದಾಗ ತಕ್ಷಣ ಸ್ಪಂದಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯರಿಗೆ ಈ ಬಗ್ಗೆ ಮನವರಿಕೆ ಮಾಡಿದ್ದಾರೆ. ಬಳಿಕ ಅದೇ ಸಮಸ್ಯೆಗಳು ತಲೆದೋರುತ್ತಿವೆ. ಹೀಗೆಯೇ ಮುಂದುವರಿದರೆ ಮಹಿಳೆಯರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳುವುದು ಹೇಗೆ? ಅವಳ ದುಡಿಮೆಗೂ ಗೌರವ ಸಿಗಬೇಕಲ್ಲವೇ’ ಎಂದರು.

ADVERTISEMENT

‘ನಿತ್ಯ ಕ್ಯಾಂಟೀನ್‌ ನಡೆಸಲು ಕನಿಷ್ಠ ₹ 3,000 ಬೇಕು. ಇಲ್ಲಿ ನಾನೂ ಸೇರಿ ನಾಲ್ಕು ಜನ ಕೆಲಸ ಮಾಡುತ್ತಿದ್ದೇವೆ. ಮನೆಯಲ್ಲೇ ಅಡುಗೆ ತಯಾರಿಗೆ ಸಿದ್ಧತೆ ಮಾಡಿಕೊಂಡು ನಂತರ ಕ್ಯಾಂಟೀನ್‌ನಲ್ಲೇ ಆಹಾರ ತಯಾರಿಸಲಾಗುತ್ತದೆ. ನಿತ್ಯ ಮೂರ್ನಾಲ್ಕು ಬಗೆಯ ತಿಂಡಿಗಳನ್ನು ಪ್ಲೇಟ್‌ ಒಂದಕ್ಕೆ ₹ 20ರಂತೆ ಮಾರಾಟ ಮಾಡಲಾಗುತ್ತಿತ್ತು. ನಗರದ ರೈಲು ನಿಲ್ದಾಣ, ಹೈಸ್ಕೂಲ್‌ ಮೈದಾನ, ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಸುತ್ತಮುತ್ತ, ಎಪಿಎಂಸಿ ಮಾರುಕಟ್ಟೆ, ಹೊಸ ಕೋರ್ಟ್‌ ಹತ್ತಿರ ಕ್ಯಾಂಟೀನ್‌ ನಿಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮನವಿ ಮಾಡಿದ್ದಕ್ಕೆ ಅನುಮತಿ ನೀಡಲಾಗಿದೆ. ಆದರೆ, ಕ್ಯಾಂಟೀನ್‌ ನಿಲ್ಲಿಸಲು ಸ್ಥಳೀಯರು ಅಸಹಕಾರ ತೋರಿದ್ದರಿಂದ ವ್ಯಾಪಾರ ನೆಲಕಚ್ಚಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹಾಕಿದ ಬಂಡವಾಳವೂ ಕೈಸೇರದ ಈ ಹೊತ್ತಿನಲ್ಲಿ ಸ್ವಂತ ಖರ್ಚಿನಿಂದ ಕ್ಯಾಂಟೀನ್‌ ನಡೆಸುವುದು ದುಸ್ತರವಾಗಿದ್ದರಿಂದ ಕ್ಯಾಂಟೀನ್‌ ಸ್ಥಗಿತಗೊಂಡಿದೆ. ಸರ್ಕಾರಿ ಕಾರ್ಯಕ್ರಮ, ಸಭೆ, ಸಮಾರಂಭ ನಡೆಯುವಾಗ ಊಟ, ತಿಂಡಿಯ ಆರ್ಡರ್‌ಗಳನ್ನು ನಮಗೆ ನೀಡಿದರೆ ಅನುಕೂಲ. ಅಧಿಕಾರಿಗಳು ನಮಗೆ ರಕ್ಷಣೆ ನೀಡಿ, ಜನರಲ್ಲಿ ಇಂತಹ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಿ ಗಟ್ಟಿಯಾಗಿ ನಿಲ್ಲಲು ಅವಕಾಶ ಕಲ್ಪಿಸಬೇಕು’ ಎಂಬುದು ಅವರ ಒತ್ತಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.