ADVERTISEMENT

ಲಾಕ್‌ಡೌನ್‌ನಿಂದ ಗಮನಾರ್ಹ ಬದಲಾವಣೆ: ಸಂಸದ ಜಿ.ಎಂ. ಸಿದ್ದೇಶ್ವರ

ಪರಿಸರ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 9:34 IST
Last Updated 6 ಜೂನ್ 2020, 9:34 IST
ದಾವಣಗೆರೆಯ ವಿದ್ಯಾನಗರ ವಿನಾಯಕ ಬಡಾವಣೆಯ ಸೌಜನ್ಯ ಉದ್ಯಾನದಲ್ಲಿ ಮಹಾನಗರ ಪಾಲಿಕೆ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ ಸಸಿ ನೆಟ್ಟರು. ಮೇಯರ್ ಬಿ.ಜಿ. ಅಜಯ್‌ಕುಮಾರ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಸದಸ್ಯ ಪ್ರಸನ್ನ, ವೀರೇಶ್ ‌ಇದ್ದರು.
ದಾವಣಗೆರೆಯ ವಿದ್ಯಾನಗರ ವಿನಾಯಕ ಬಡಾವಣೆಯ ಸೌಜನ್ಯ ಉದ್ಯಾನದಲ್ಲಿ ಮಹಾನಗರ ಪಾಲಿಕೆ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ ಸಸಿ ನೆಟ್ಟರು. ಮೇಯರ್ ಬಿ.ಜಿ. ಅಜಯ್‌ಕುಮಾರ, ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ಸದಸ್ಯ ಪ್ರಸನ್ನ, ವೀರೇಶ್ ‌ಇದ್ದರು.   

ದಾವಣಗೆರೆ:ಲಾಕ್‍ಡೌನ್ ವೇಳೆಯಲ್ಲಿ ಪರಿಸರದ ವಾತಾವರಣ ಸುಧಾರಿಸಿದೆ. ಈ ಮೂಲಕ ಜನರ ಒತ್ತಡ ಹಾಗೂ ವಾಹನಗಳ ಓಡಾಟದಿಂದ ಪರಿಸರದ ವಾತಾವರಣದಲ್ಲಿ ವ್ಯತ್ಯಾಸವಾಗುವುದು ಇದರಿಂದ ಕಂಡುಬಂದಿದೆ. ಪ್ರತಿಯೊಬ್ಬರೂ ಗಿಡ ಬೆಳೆಸಿ ಉಳಿಸುವ ಮೂಲಕ ಆರೋಗ್ಯ ಕಾಪಾಡುವ ಕೆಲಸ ಮಾಡಬೇಕು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅವರು ಹೇಳಿದರು.

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶುಕ್ರವಾರ ಮಹಾನಗರ ಪಾಲಿಕೆಯಿಂದ ವಿದ್ಯಾನಗರ ವಿನಾಯಕ ಬಡಾವಣೆಯ ಸೌಜನ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪರಿಸರ ದಿನಾಚರಣೆಯಂದು ಗಿಡ ನೆಡುವುದು ಮುಖ್ಯವಲ್ಲ. ಬದಲಾಗಿ ಗಿಡಗಳನ್ನು ಪೋಷಣೆ ಮಾಡುವುದು ಮುಖ್ಯ. ಈ ಬಾರಿ ಪಾಲಿಕೆಯೂ ನಗರದ ಎಲ್ಲಾ ವಾರ್ಡ್ ಹಾಗೂ ರಸ್ತೆ ಬದಿಗಳಲ್ಲಿ ಒಂದು ಲಕ್ಷ ಗಿಡ ಬೆಳೆಸುವ ತೀರ್ಮಾನ ಕೈಗೊಂಡಿದೆ. ಇದು ಸ್ವಾಗತಾರ್ಹ. ಗಿಡ ನೆಟ್ಟ ಬಳಿಕ ವಾರ್ಡ್‍ನ ಕಾರ್ಪೊರೇಟರ್ ಮತ್ತು ನಾಗರಿಕರು ಗಿಡಗಳ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ADVERTISEMENT

ಶಾಸಕ ಎಸ್.ಎ. ರವೀಂದ್ರನಾಥ್, ‘ಪರಿಸರದ ಉಳಿವಿಗೆ ಗಿಡಗಳನ್ನು ಸಂರಕ್ಷಣೆ ಮಾಡುವುದು ಮುಖ್ಯ. ಮಹಾನಗರ ಪಾಲಿಕೆಯಿಂದ ನೆಡಲಾಗುತ್ತಿರುವ 1 ಲಕ್ಷ ಗಿಡಗಳಲ್ಲಿ 50 ಸಾವಿರ ಗಿಡಗಳಾದರೂ ಉಳಿಯುವಂತೆ ನಾವು ನೋಡಿಕೊಳ್ಳಬೇಕು.ಅತಿ ಹೆಚ್ಚು ಗಿಡ ಮರ ಬೆಳೆಸುವ ಮೂಲಕ ಜಿಲ್ಲೆಯನ್ನು ಮಲೆನಾಡು ಪ್ರದೇಶವಾಗಿಸಬೇಕು’ ಎಂದು ಸಲಹೆ ನೀಡಿದರು.

ಮೇಯರ್‌ ಬಿ.ಜಿ. ಅಜಯ್ ಕುಮಾರ್, ‘ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಾವು ಒಂದು ವರ್ಷದ ಅವಧಿಯೊಳಗೆ ಒಂದು ಲಕ್ಷ ಗಿಡ ನೆಡುವ ಯೋಜನೆ ಹಮ್ಮಿಕೊಂಡಿದ್ದೇವೆ.ಮಾಜಿ ಶಾಸಕ ಪಂಪಾಪತಿ ಅವಧಿಯಲಿ ನಗರದಲ್ಲಿ 30 ಸಾವಿರ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಂದು ಆ ಗಿಡಗಳು ಹೆಮ್ಮರವಾಗಿವೆ. ಅದನ್ನು ಜನರು ಸ್ಮರಿಸುತ್ತಿದ್ದಾರೆ. ಅವರ ಕಾರ್ಯ ಸ್ಫೂರ್ತಿ’ ಎಂದರು.

ಉಪ ಮೇಯರ್‌ ಸೌಮ್ಯ ನರೇಂದ್ರ ಕುಮಾರ್, ಆಯುಕ್ತ ವಿಶ್ವನಾಥ್ ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಮ್ಮ ಗೋಪಿನಾಯ್ಕ್, ಗೌರಮ್ಮ, ಪ್ರಸನ್ನ ಕುಮಾರ್, ಸದಸ್ಯರಾದ ವೀಣಾ ನಂಜಣ್ಣನವರ್, ವೀರೇಶ್, ಸ್ಮಾರ್ಟ್‍ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಪಾಲಿಕೆಯ ಸದಸ್ಯರು ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.