ADVERTISEMENT

ದಾವಣಗೆರೆ | ಮಕ್ಕಳ ಸಮೀಕ್ಷೆಗೆ ಒತ್ತಾಯ: ಪ್ರತಿಭಟನೆ

ಜಿಲ್ಲಾಡಳಿತ ಭವನದ ಎದುರು ಸರ್ಕಾರಿ ನೌಕರರ ಸಂಘದ ನೇತೃತ್ವದಲ್ಲಿ ಗಣತಿದಾರರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 6:03 IST
Last Updated 15 ಅಕ್ಟೋಬರ್ 2025, 6:03 IST
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗಣತಿದಾರರು ಮಂಗಳವಾರ ಪ್ರತಿಭಟನೆ ನಡೆಸಿದರು
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗಣತಿದಾರರು ಮಂಗಳವಾರ ಪ್ರತಿಭಟನೆ ನಡೆಸಿದರು   

ದಾವಣಗೆರೆ: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಅ.18ರ ವರೆಗೆ ವಿಸ್ತರಿಸಿರುವ ಜತೆಗೆ ಇದೀಗ 0-6 ವರ್ಷದ ಮಕ್ಕಳ ಸಮೀಕ್ಷೆಯನ್ನೂ ನಡೆಸುವಂತೆ ಮೇಲಧಿಕಾರಿಗಳು ಒತ್ತಡ ಹಾಕುತ್ತಿದ್ದಾರೆ’ ಎಂದು ದೂರಿದ ಗಣತಿದಾರರು ಮಂಗಳವಾರ ಪ್ರತಿಭಟನೆ ನಡೆಸಿದರು. 

ಜಿಲ್ಲಾಡಳಿತ ಭವನದ ಎದುರು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ 200ಕ್ಕೂ ಹೆಚ್ಚು ಗಣತಿದಾರರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. 

ಬಳಿಕ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅವರನ್ನು ಭೇಟಿಯಾಗಿ ‘ಮಕ್ಕಳ ಸಮೀಕ್ಷೆ ನಡೆಸಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆ ನಡೆಸಬೇಕು ಎಂಬ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು’ ಎಂದು ಮನವಿ ಮಾಡಿದರು. 

ADVERTISEMENT

‘ಈಗಾಗಲೇ ನಮಗೆ ನೀಡಿದ್ದ ಮನೆಗಳ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿದ್ದೇವೆ. ಇದೀಗ ಮಕ್ಕಳ ಸಮೀಕ್ಷೆ ನಡೆಸುವಂತೆ ಗಣತಿ ಮೇಲ್ವಿಚಾರಕರು, ಹಿರಿಯ ಅಧಿಕಾರಿಗಳು ನಮ್ಮ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕೈಗೊಂಡಾಗ ಹಲವು ಸಮಸ್ಯೆಗಳನ್ನು ಎದುರಿಸಿದ್ದೇವೆ. ನಿಂದನೆ, ಅವಮಾನ, ತೊಂದರೆ ಅನುಭವಿಸಿದ್ದೇವೆ. ಮತ್ತೊಮ್ಮೆ ಜನರ ಮನೆ ಬಾಗಿಲಿಗೆ ಹೋಗಲು ಸಾಧ್ಯವಿಲ್ಲ. ಮೇಲ್ವಿಚಾರಕರು ನಿಯಮ ಮೀರಿ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ’ ಎಂದು ಪ್ರತಿಭಟನಾನಿರತ ಗಣತಿದಾರರು ಆಕ್ರೋಶ ವ್ಯಕ್ತಪಡಿಸಿದರು. 

‘ಸೆ.22ರಿಂದ ಅ.7ರ ವರೆಗೆ ನಿಗದಿಯಾಗಿದ್ದ ಸಮೀಕ್ಷೆ ಕಾರ್ಯವನ್ನು ಅ.18ರ ವರೆಗೆ ವಿಸ್ತರಿಸಲಾಗಿದೆ. ಸಮೀಕ್ಷೆಗೆ ಬಹುಪಾಲು ಸರ್ಕಾರಿ ಶಿಕ್ಷಕರನ್ನು ನಿಯೋಜಿಸಿರುವುದರಿಂದ ಈಗಾಗಲೇ ದಸರಾ ರಜೆಯನ್ನು ವಿಸ್ತರಿಸಲಾಗಿದೆ. ಮತ್ತೆ ಮಕ್ಕಳ ಸಮೀಕ್ಷೆ ಕೈಗೊಳ್ಳುವುದರಿಂದ ಶಿಕ್ಷಕರ ಮೇಲೆ ಹೆಚ್ಚುವರಿ ಒತ್ತಡ ಹೇರಿದಂತಾಗುತ್ತದೆ. ಶಾಲಾರಂಭವೂ ಮತ್ತಷ್ಟು ತಡವಾಗಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

‘ಈಗಾಗಲೇ ನಾವು ಸಮೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಮೊದಲ ಬಾರಿ ತರಬೇತಿ ನೀಡುವಾಗ ಶೂನ್ಯದಿಂದ 6 ವರ್ಷದೊಳಗಿನ ಮಕ್ಕಳ ಗಣತಿ ಮಾಡಬೇಡಿ ಎಂದು ಹೇಳಿದ್ದರು. ಹಾಗಾಗಿ ನಾವು ಈ ಮಕ್ಕಳನ್ನು ಸಮೀಕ್ಷೆ ಮಾಡುವ ಗೋಜಿಗೆ ಹೋಗಲಿಲ್ಲ. ಇದೀಗ ಮತ್ತೆ 6 ವರ್ಷದೊಳಗಿನ ಮಕ್ಕಳ ಸಮೀಕ್ಷೆ ಮಾಡಿ ಎಂದು ಮೇಲಧಿಕಾರಿಗಳು ಸಂದೇಶ ನೀಡುತ್ತಿರುವುದು ಕಷ್ಟವಾಗುತ್ತಿದೆ’ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ಹೇಳಿದರು. 

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪಾಲಾಕ್ಷಿ, ಖಜಾಂಚಿ ತಿಪ್ಪೇಸ್ವಾಮಿ, ಜಂಟಿ ಕಾರ್ಯದರ್ಶಿ ಶಿವಣ್ಣ, ಸಾಂಸ್ಕೃತಿಕ ಕಾರ್ಯದರ್ಶಿ ಮಂಜಮ್ಮ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮುಬಾರಕ್ ಅಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಮಪ್ಪ, ಕರಿಬಸಪ್ಪ, ರವಿಶಂಕರ್, ಎ.ಮಾರುತಿ, ಮಹಾಂತೇಶ ಎಸ್., ಮಹಾರುದ್ರಪ್ಪ ಸೇರಿದಂತೆ ಹಲವರು ಹಾಜರಿದ್ದರು.

ಸಮೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಜಿಲ್ಲಾಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಅವರು ಭರವಸೆ ನೀಡಿದ್ದಾರೆ 
ವೀರೇಶ್ ವಡೇನಪುರ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.